- ಅಸ್ಸಾಂ ಯುವ ಕಾಂಗ್ರೆಸ್ ಅಧ್ಯಕ್ಷೆ ಘನತೆಗೆ ಧಕ್ಕೆ ಪ್ರಕರಣ
- ನ್ಯಾ. ಅಜಿತ್ ಬೋರ್ತಕೂರ್ ಏಕಸದಸ್ಯ ಪೀಠದಿಂದ ವಿಚಾರಣೆ
ಅಸ್ಸಾಂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷೆಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶಿವಮೊಗ್ಗದ ಶ್ರೀನಿವಾಸ್ ಬಿ.ವಿ ಅವರ ವಿರುದ್ಧದ ತನಿಖೆಗೆ ಮಧ್ಯಂತರ ತಡೆ ನೀಡಲು ಗುವಾಹಟಿ ಹೈಕೋರ್ಟ್ ನಿರಾಕರಿಸಿದೆ.
“ಶ್ರೀನಿವಾಸ್ ಅವರು ಅಶ್ಲೀಲ ಮಾತುಗಳಿಂದ ನನಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕರಿಗೆ ಹೇಳಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ” ಎಂದು ಆರೋಪಿಸಿ ಅಸ್ಸಾಂ ಯುವ ಕಾಂಗ್ರೆಸ್ ಅಧ್ಯಕ್ಷೆ ದೂರು ದಾಖಲಿಸಿದ್ದರು.
ಅವರ ಆರೋಪವನ್ನು ತಳ್ಳಿಹಾಕಿದ್ದ ಶ್ರೀನಿವಾಸ್, “ಕೆಲವರು ರಾಜಕೀಯ ಕಾರಣಕ್ಕೆ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೂರಿನ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಖುದ್ದು ಹಾಜರಾಗುವಂತೆ ನೋಟಿಸ್ ನೀಡಿದ್ದು, ತನಿಖೆಗೆ ಮಧ್ಯಂತರ ತಡೆ ನೀಡಬೇಕು” ಎಂದು ಕೋರಿ ಗುಹವಾಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? : ಹಿರಿಯೂರು ಕ್ಷೇತ್ರ | ಮೈಮರೆತ ಕಾಂಗ್ರೆಸ್, ಎಚ್ಚೆತ್ತ ಬಿಜೆಪಿ, ಚಿಗುರಿದ ಜೆಡಿಎಸ್
ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಜಿತ್ ಬೋರ್ತಕೂರ್ ಏಕಸದಸ್ಯ ಪೀಠ, ”ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ದಾಖಲಾದ ಕೇಸ್ ಡೈರಿ ಮತ್ತು ಸಂತ್ರಸ್ತೆಯ ಹೇಳಿಕೆಯನ್ನು ಪರಿಶೀಲಿಸಿದ ನಂತರವೇ ಮಧ್ಯಂತರ ತಡೆ ಮನವಿಯನ್ನು ಪರಿಗಣಿಸಲಾಗುವುದು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಶ್ರೀನಿವಾಸ್ ಪರ ಹಿರಿಯ ನ್ಯಾಯವಾದಿ ಕೆ.ಎನ್ ಚೌಧರಿ ವಾದ ಮಂಡಿಸಿದರೆ, ಅಸ್ಸಾಂ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಡಿ ಸೈಕಿಯಾ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಎಂ ಫುಕನ್ ವಾದ ಮಂಡಿಸುತ್ತಿದ್ದಾರೆ.