ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಯುವಕನೋರ್ವನನ್ನು ಐವರು ದುಷ್ಕರ್ಮಿಗಳ ತಂಡವೊಂದು ಹಾಡಹಗಲೇ ಅಟ್ಟಾಡಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಭಯಾನಕ ದೃಶ್ಯವು ಸ್ಥಳೀಯ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಿವಗಂಗೈ ಜಿಲ್ಲೆಯ ಕಾರೈಕುಡಿ ಎಂಬಲ್ಲಿ ಘಟನೆ ನಡೆದಿದ್ದು ಹತ್ಯೆಯಾದ ವ್ಯಕ್ತಿಯನ್ನು ಮಧುರೈ ಮೂಲದ 29 ವರ್ಷದ ಅರಿವಳಗನ್ ಅಲಿಯಾಸ್ ವಿನೀತ್ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ವಿನೀತ್ ಇತ್ತೀಚೆಗಷ್ಟೇ ಜಾಮೀನು ಪಡೆದು ಹೊರಬಂದಿದ್ದರು.
ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಪಾತಕಿಗಳು ಜನನಿಬಿಡ ಪ್ರದೇಶದಲ್ಲೇ ವಿನೀತ್ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ಅಪಾಯದ ಮುನ್ಸೂಚನೆ ಅರಿತ ವಿನೀತ್ ಓಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ವಿದ್ಯುತ್ ಕಂಬವೊಂದರ ಬಳಿ ಕಾಲೆಡೆವಿ ಬಿದ್ದ ವಿನೀತ್ ಮೇಲೆ, ಹಿಂಬಾಲಿಸಿ ಬಂದ ದುಷ್ಕರ್ಮಿಗಳು ತಲ್ವಾರ್‌ನಿಂದ ನಿರ್ದಯವಾಗಿ ಹಲ್ಲೆ ನಡೆಸಿ, ಕಾರಿನಲ್ಲಿ ಪರಾರಿಯಾಗಿದ್ಧಾರೆ. ಇದೇ ವೇಳೆ ವಿನೀತ್ ಸ್ನೇಹಿತನೋರ್ವ ನೆರವಿಗೆ ಧಾವಿಸಿದ್ದು, ಅಷ್ಟರಲ್ಲಾಗಲೇ ದುಷ್ಕರ್ಮಿಗಳು ಕಾರಿನಲ್ಲಿ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ʻಕೊಲೆಯಾದ ವಿನೀತ್ ಸ್ನೇಹಿತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ತೀವ್ರ ಹುಡುಕಾಡ ನಡೆಸಲಾಗುತ್ತಿದ್ದೆ ಎಂದಿದ್ದಾರೆ.