ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಪುಣೆಯ ವಿಶೇಷ ನ್ಯಾಯಾಲಯಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದು, ಮೂವರು ಆರೋಪಿಗಳಾದ ಅಮೋಲ್ ಕಾಳೆ, ರಾಕೇಶ್ ಬಂಗೇರಾ ಮತ್ತು ಅಮಿತ್ ದಿಗ್ವೇಕರ್ ವಿರುದ್ಧ ಯಾವುದೇ “ವಿಚಾರಣೆಗೆ ಒಳಪಡುವ ಸಾಕ್ಷ್ಯ” ಸಿಗಲಿಲ್ಲ ಎಂಬ ಕಾರಣ ನೀಡಿ ಬಿಡುಗಡೆ ಮಾಡಲು ಶಿಫಾರಸು ಮಾಡಿದೆ.
ಹಿರಿಯ ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರನ್ನು 2013ರ ಆಗಸ್ಟ್ 20ರಂದು ಪುಣೆಯಲ್ಲಿ ಬೆಳಗಿನ ನಡಿಗೆಗೆ ತೆರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ತನಿಖಾ ಸಂಸ್ಥೆಯು ಸೆಪ್ಟೆಂಬರ್ 2018 ರಲ್ಲಿ ಮೂವರು ಆರೋಪಿಗಳನ್ನು ಬಂಧಿಸಿತ್ತು. ಆದರೆ, ಅವರನ್ನು ಬಂಧಿಸಿದ 90 ದಿನಗಳಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಲು ವಿಫಲವಾದ ಮೂರು ತಿಂಗಳ ನಂತರ ಪುಣೆ ನ್ಯಾಯಾಲಯವು ಅವರಿಗೆ ಡೀಫಾಲ್ಟ್ ಜಾಮೀನು ಮಂಜೂರುಗೊಳಿಸಿತ್ತು.
ಈ ಮೂವರು ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಫೆಬ್ರವರಿ 20, 2015 ರಂದು ಕೊಲ್ಹಾಪುರದಲ್ಲಿ ಹಿರಿಯ ಕಮ್ಯುನಿಸ್ಟ್ ನಾಯಕ ಗೋವಿಂದ್ ಪನ್ಸಾರೆ ಹತ್ಯೆಯಲ್ಲಿ ಕಾಳೆ ಮತ್ತು ದಿಗ್ವೇಕರ್ ಆರೋಪಿಗಳಾಗಿದ್ದಾರೆ. ಮೂವರು ಆರೋಪಿಗಳು ಸದ್ಯ ಬೆಂಗಳೂರು ಜೈಲಿನಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶೇ. 40 ಹಾಲಿ ಸಂಸದರಿಗೆ ಕ್ರಿಮಿನಲ್ ಆರೋಪ, ಶೇ. 7 ಮಂದಿ ಶತ ಕೋಟ್ಯಾಧೀಶರು: ಎಡಿಆರ್ ವರದಿ
ಸಿಬಿಐನ ಡೆಪ್ಯುಟಿ ಎಸ್ಪಿ ವಿಕಾಸ್ ಕುಮಾರ್ ಮೀನಾ ಅವರ ಸಹಿ ಮತ್ತು ಡಿಐಜಿ ಸದಾನಂದ ದಾಟೆ ಅವರು ಪ್ರತಿ ಸಹಿ ಮಾಡಿದ ಅಂತಿಮ ವರದಿಯು ಪ್ರಕರಣದ ಮುಂದಿನ ತನಿಖೆಯನ್ನು ಮುಕ್ತಾಯಗೊಳಿಸಲು ತನಿಖಾ ಸಂಸ್ಥೆಗೆ ಅವಕಾಶ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದೆ. ಹೊಸ ಸಾಕ್ಷ್ಯಾಧಾರಗಳು ಬೆಳಕಿಗೆ ಬಂದರೆ, ನ್ಯಾಯಾಲಯದ ಅನುಮತಿಯೊಂದಿಗೆ ಸಿಬಿಐ ಹೆಚ್ಚಿನ ತನಿಖೆ ನಡೆಸುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳಾದ ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಅವರ ವಿಚಾರಣೆಯು ಈ ಪ್ರಕರಣದ ಹಿಂದಿನ ಸಂಚನ್ನು ಅನಾವರಣಗೊಳಿಸಲು ಅಗತ್ಯವಾಗಿದೆ, ಅವರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ವರದಿ ಹೇಳಿದೆ. ಈ ತಲೆಮರೆಸಿಕೊಂಡಿರುವ ಇಬ್ಬರನ್ನೂ ದಾಭೋಲ್ಕರ್ ಅವರನ್ನು ಹತ್ಯೆಗೈದ ಶೂಟರ್‌ಗಳು ಎಂದು ಗುರುತಿಸಲಾಗಿದೆ.
ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಸೂರ್ಯವಂಶಿ ಕೂಡ ಸಿಬಿಐ ಪರವಾಗಿ ಲಿಖಿತ ಹೇಳಿಕೆ ಸಲ್ಲಿಸಿದರು. ಪ್ರಮುಖ ಆರೋಪಿ ವೀರೇಂದ್ರಸಿಂಹ ತಾವ್ಡೆ, ಆರೋಪಿ ಶೂಟರ್‌ಗಳಾದ ಸಚಿನ್ ಅಂದುರೆ ಮತ್ತು ಶರದ್ ಕಲಾಸ್ಕರ್ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣದ ವಿಚಾರಣೆಯಲ್ಲಿ ಸಾಕ್ಷ್ಯಗಳನ್ನು ಮುಕ್ತಾಯಗೊಳಿಸಿರುವ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದರು.
ವಿಶೇಷ ನ್ಯಾಯಾಧೀಶರಾದ ಪಿಪಿ ಜಾಧವ್ ಅವರು ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 18 ರೊಳಗೆ ಸಿಬಿಐ ಅಂತಿಮ ವರದಿಯ ಬಗ್ಗೆ ತಮ್ಮ ಲಿಖಿತ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಪ್ರತಿವಾದಿ ವಕೀಲರಿಗೆ ಸೂಚಿಸಿದರು.
ದಾಭೋಲ್ಕರ್ ಪ್ರಕರಣದಲ್ಲಿ ಭಾಗಿಯಾಗಿರುವ ಕಾಳೆ, ಬಂಗೇರ ಮತ್ತು ದಿಗ್ವೇಕರ್ ಸೆಪ್ಟೆಂಬರ್ 5, 2017 ರಂದು ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿಯೂ ಭಾಗಿಯಾಗಿದ್ದಾರೆ. ಮಹಾರಾಷ್ಟ್ರ ಎಟಿಎಸ್ ನಾಲಾಸೋಪಾರ ಶಸ್ತ್ರಾಸ್ತ್ರ ಸಾಗಣೆ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದಾರೆ.