- 59 ವರ್ಷಗಳ ಇತಿಹಾಸವಿರುವ ಪಂಡಿತ್ ಜವಾಹರ್ಲಾಲ್ ನೆಹರು ಸ್ಮಾರಕ
- ಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಸೊಸೈಟಿ ಎಂದು ಮರುನಾಮಕರಣ
ದೆಹಲಿಯ ತೀನ್ಮೂರ್ತಿ ಮಾರ್ಗದಲ್ಲಿರುವ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದಲಿಸಿದೆ. ಕೇಂದ್ರದ ಈ ನಡೆಗೆ ಕಾಂಗ್ರೆಸ್ ನಾಯಕರಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಮೋದಿಯವರ ದ್ವೇಷದ ರಾಜಕಾರಣಕ್ಕೆ ಇದೊಂದು ಉದಾಹರಣೆ ಎಂದಿದ್ದಾರೆ.
ಇತ್ತೀಚೆಗೆ ನೆಹರು ಸ್ಮಾರಕದ ಹೆಸರನ್ನು ಬದಲಿಸಿರುವ ಕೇಂದ್ರ ಸರ್ಕಾರ, ʼಪ್ರಧಾನಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಸೊಸೈಟಿʼ ಎಂದು ಮರು ನಾಮಕರಣ ಮಾಡಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸೊಸೈಟಿಯ ಉಪಾಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲಿ ನಡೆದ ವಿಶೇಷ ಸಭೆಯಲ್ಲಿ ಮರುನಾಮಕರಣದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಜವಾಹರ್ಲಾಲ್ ನೆಹರು ಅವರು ಭಾರತದ ಪ್ರಧಾನಿ ಆಗಿದ್ದಾಗ 16 ವರ್ಷಗಳ ಕಾಲ ತೀನ್ಮೂರ್ತಿ ಮಾರ್ಗದಲ್ಲಿರುವ ಇದೇ ಕಟ್ಟಡದಲ್ಲಿ ವಾಸವಿದ್ದರು. ಅವರ ನಿಧನದ ನಂತರ ಈ ಕಟ್ಟಡವನ್ನು ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯವನ್ನಾಗಿ ಮಾರ್ಪಡಿಸಲಾಗಿತ್ತು.
ಕೇಂದ್ರ ಸರ್ಕಾರ ನೆಹರು ಸ್ಮಾರಕದ ಹೆಸರು ಬದಲಿಸುತ್ತಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್ ಮಾಡಿದ್ದು, “ತಮ್ಮ ಸ್ವಂತ ಇತಿಹಾಸವೇ ಇಲ್ಲದವರು ಇನ್ನೊಬ್ಬರ ಹಿನ್ನೆಲೆಯನ್ನು ಹತ್ತಿಕ್ಕುವುದರಲ್ಲೇ ತೊಡಗಿಕೊಂಡಿರುತ್ತಾರೆ. ಬಿಜೆಪಿ ಮತ್ತು ಆರ್ಎಸ್ಎಸ್ನವರ ಈ ರೀತಿಯ ನಡೆಯಿಂದ ಅವರ ಕೀಳುಮಟ್ಟದ ಮನಸ್ಥಿತಿ ಮತ್ತು ಸರ್ವಾಧಿಕಾರಿ ಧೋರಣೆಯ ಪರಿಚಯವಾಗುತ್ತಿದೆ” ಎಂದು ಕೇಂದ್ರದ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಕೂಡ ಟ್ವೀಟ್ ಮಾಡಿದ್ದು, “ಸಂಕುಚಿತ ಮನೋಭಾವ ಮತ್ತು ದ್ವೇಷ ರಾಜಕಾರಣಕ್ಕೆ ಇನ್ನೊಂದು ಹೆಸರೇ ಮೋದಿ. 59 ವರ್ಷಗಳ ಇತಿಹಾಸವಿರುವ ನೆಹರು ಸ್ಮಾರಕ ಜಗತ್ತಿಗೆ ಬೌದ್ಧಿಕ ಜ್ಞಾನವನ್ನು ಪಸರಿಸುವ ಮತ್ತು ಪುಸ್ತಕಗಳ ಭಂಡಾರವಾಗಿತ್ತು. ಈ ಸ್ಮಾರಕದ ಹೆಸರನ್ನು ಬದಲಿಸುವ ಮೂಲಕ ಮೋದಿ ಅವರು ಭಾರತವನ್ನು ಕಟ್ಟಿದ ಶಿಲ್ಪಿಯ ಇತಿಹಾಸವನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ. ಅಭದ್ರತೆಯಿಂದ ಬದುಕುತ್ತಿರುವ ಈ ವ್ಯಕ್ತಿ ಜಗತ್ತಿನ ಎದುರು ತನ್ನನ್ನು ತಾನು ವಿಶ್ವಗುರು ಎಂದು ಹೇಳಿಕೊಂಡು ತಿರುಗುತ್ತಿದ್ದಾನೆ” ಎಂದಿದ್ದಾರೆ.