ವಿವಾದಾತ್ಮಕ ಆಡಿಯೋ ಹರಿಬಿಟ್ಟಿದ್ದ ಅಪ್ರಾಪ್ತ ಬಾಲಕರು
ಪ್ರತಿಭಟನೆಯಲ್ಲಿ ಕಲ್ಲು ತೂರಿ ದೊಂಬಿ ಎಬ್ಬಿಸಿದ ಕಿಡಿಗೇಡಿಗಳು
ಮೊಘಲ್ ದೊರೆ ಔರಂಗ್‌ಜೇಬ್ ಮತ್ತು ಟಿಪ್ಪು ಸುಲ್ತಾನ್ ಇಬ್ಬರನ್ನೂ ವೈಭವೀಕರಿಸಿ ವಾಟ್ಸಪ್‌ನಲ್ಲಿ ಸ್ಟೆಟಸ್ ಹಾಕಿಕೊಂಡಿದ್ದ ಮೂವರು ಅಪ್ರಾಪ್ತ ಬಾಲಕರ ನಡೆಯನ್ನು ವಿರೋಧಿಸಿ ಮಹಾರಷ್ಟ್ರದ ಕೊಲ್ಲಾಪುರದಲ್ಲಿ ಬಲಪಂಥೀಯ ಸಂಘಟನೆಗಳು ಬುಧವಾರ ಪ್ರತಿಭಟನೆ ನಡೆಸಿವೆ. ಶಾಂತಿಯುತವಾಗಿ ಶುರುವಾಗಿದ್ದ ಈ ಪ್ರತಿಭಟನೆ ಕೆಲವೇ ಹೊತ್ತಿಗೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಕೊಲ್ಲಾಪುರದ ನಿವಾಸಿಗಳಾದ ಮೂವರು ಅಪ್ರಾಪ್ತರು ಮಂಗಳವಾರ ಔರಂಗ್‌ಜೇಬ್ ಮತ್ತು ಟಿಪ್ಪುವನ್ನು ವೈಭವೀಕರಿಸುವ ಫೋಟೋಗಳನ್ನು ವಾಟ್ಸಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡು ವಿವಾದಾತ್ಮಕ ಆಡಿಯೋವನ್ನು ಹರಿಬಿಟ್ಟಿದ್ದರು ಎನ್ನಲಾಗಿದೆ. ಈ ಪೋಟೋಗಳು ಮತ್ತು ವಿವಾದಾತ್ಮಕ ಆಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಬಲಪಂಥೀಯ ಸಂಘಟನೆಗಳು ಬುಧವಾರ ಕೊಲ್ಲಾಪುರ ಬಂದ್‌ಗೆ ಕರೆ ನೀಡಿವೆ. ವಿಷಯ ತಿಳಿದ ಸ್ಥಳೀಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ರಾಹುಲ್ ರೇಖಾವರ್ ಕೂಡ ಕೆಲ ಸಂಘಟನೆಗಳ ಮುಖಂಡರನ್ನು ಭೇಟಿಯಾಗಿ ಬಂದ್ ಕರೆಯನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ, ಅವರ ಪ್ರಯತ್ನ ವಿಫಲವಾಗಿದೆ.
ಬುಧವಾರ ಬೆಳಗ್ಗೆ ಬಲಪಂಥೀಯ ಸಂಘಟನೆಗಳ ನೂರಾರು ಮಂದಿ ಕಾರ್ಯಕರ್ತರು ಕೊಲ್ಲಾಪುರದ ಶಿವಾಜಿ ಚೌಕ್ ಬಳಿ ಜಮಾಯಿಸಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕೆಲ ಅಂಗಡಿ-ಮುಂಗಟ್ಟುಗಳನ್ನು ದೋಚಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಲಾಠಿ ಚಾರ್ಜ್ ನಡೆಸಿರುವ ಪೊಲೀಸರು 21ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಾರಾಷ್ಟ್ರ ಸಿಎಂ ಏಕ್‌ನಾಥ್ ಶಿಂಧೆ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಸರ್ಕಾರದ ಜವಾಬ್ದಾರಿ. ಜನರು ಶಾತಿಯಿಂದ ವರ್ತಿಸಬೇಕು. ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮರುಕಳಿಸಿದ ಮಣಿಪುರ ಹಿಂಸಾಚಾರ | ಜೂ. 10ರವರೆಗೆ ಅಂತರ್ಜಾಲ ಸೇವೆ ಸ್ಥಗಿತ
ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತನಾಡಿ, “ಮಹಾರಾಷ್ಟ್ರದಲ್ಲಿ ಔರಂಗ್‌ಜೇಬ್‌ನನ್ನು ವೈಭವೀಕರಿಸುವವರಿಗೆ ಕ್ಷಮೆ ಇಲ್ಲ. ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಶಾಂತಿ-ಸುವ್ಯವಸ್ಥೆಯನ್ನು ಕಾಪಾಡವುದು ನಮ್ಮೆಲ್ಲರ ಜವಾಬ್ದಾರಿ” ಎಂದಿದ್ದಾರೆ.