- ಈ ವರ್ಷದ ಅಂತ್ಯದಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ
- ಶಿವರಾಜ್ ಸಿಂಗ್, ಕಮಲ್‌ನಾಥ್ ಕುರಿತು ಆಕ್ಷೇಪಾರ್ಹ ಪೋಸ್ಟರ್‌ಗಳು
ಮಧ್ಯಪ್ರದೇಶ ರಾಜ್ಯದಲ್ಲಿ ಈ ವರ್ಷಾಂತ್ಯ ನಡೆಯುವ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷಗಳ ನಡುವೆ ನಡೆಯುತ್ತಿರುವ ಪೋಸ್ಟರ್ ಸಮರ ರಾಜಕೀಯ ಕಣವನ್ನು ಮತ್ತಷ್ಟು ರಂಗೇರಿಸುತ್ತಿದೆ.
ಚುನಾವಣೆ ಪ್ರಚಾರ ಹಿನ್ನೆಲೆ ರಾಜಕೀಯ ಪಕ್ಷಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಇದೀಗ ಕಾಂಗ್ರೆಸ್ ಕರ್ನಾಟಕದಂತೆ ರಾಜ್ಯದಲ್ಲೂ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಪೋಸ್ಟರ್ ಸಮರ ಆರಂಭಿಸಿದೆ.
ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರಗಳಿರುವ ಆಕ್ಷೇಪಾರ್ಹ ಪೋಸ್ಟರ್‌ಗಳು ಮಧ್ಯಪ್ರದೇಶ ರಾಜ್ಯದಲ್ಲಿ ಕಾಣಿಸಿಕೊಂಡ ಮೂರು ದಿನಗಳ ನಂತರ ಈಗ ಮತ್ತೆ ಶಿವರಾಜ್ ಸಿಂಗ್ ಅವರ ಚಿತ್ರ ಹಾಗೂ ಕ್ಯೂಆರ್ ಕೋಡ್ ಇರುವ ಪೋಸ್ಟರ್‌ಗಳು ಕೆಲವೆಡೆ ಕಂಡು ಬಂದಿವೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚಿತ್ರದೊಂದಿಗೆ ಕ್ಯೂಆರ್ ಕೋಡ್ ಇರುವ ಹಾಗೂ ಕೆಲಸ ಮಾಡಿಸಿಕೊಳ್ಳಬೇಕಾದರೆ 50 ಪರ್ಸೆಂಟ್ ಕಮಿಷನ್ ತನ್ನಿ ಎಂದು ಬರೆದಿರುವ ಪೋಸ್ಟರ್‌ಗಳು ಭೋಪಾಲ್ ಮತ್ತು ಸಿಂಗ್ರೌಲಿಯಲ್ಲಿ ಕಾಣಿಸಿವೆ.
ಮಧ್ಯಪ್ರದೇಶ ಭೋಪಾಲ್‌ನ ಪ್ಲಾಟಿನಂ ಪ್ಲಾಜಾ ಸೇರಿದಂತೆ ನಾನಾ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇವುಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ಚಿತ್ರವನ್ನು ‘ಫೋನ್‌ಪೇ ಸ್ಕ್ಯಾನರ್’ನ ಮಧ್ಯದಲ್ಲಿ ಅಂಟಿಸಲಾಗಿದೆ.
“50 ಪರ್ಸೆಂಟ್ ತನ್ನಿ, ಕೆಲಸ ಮಾಡಿಸಿಕೊಳ್ಳಿ” ಎಂದು ಪೋಸ್ಟರ್ ಮೇಲೆ ಬರೆಯಲಾಗಿದೆ. ಈ ಪೋಸ್ಟರ್ ಅನ್ನು ಯಾರು ಹಾಕಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಕಾಂಗ್ರೆಸ್‌ನ ಸಂಸದರೊಬ್ಬರು ಈ ಪೋಸ್ಟರ್ ಅನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷವು ತನ್ನ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕ ಈ ಕುರಿತು ಪ್ರಚಾರ ನಡೆಸುತ್ತಿದೆ.
ಮಧ್ಯಪ್ರದೇಶ ರಾಜ್ಯದಲ್ಲಿ ಈ ಹಿಂದೆ ಜೂನ್ 23ರಂದು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಇದೇ ರೀತಿಯ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಇದರಲ್ಲಿ ಅವರನ್ನು ‘ಬೇಕಾಗಿದ್ದಾರೆ’ ಮತ್ತು ‘ಭ್ರಷ್ಟನಾಥ’ ಎಂದು ಬರೆಯಲಾಗಿತ್ತು.
ಇದರಲ್ಲೂ ಕ್ಯೂ ಆರ್ ಕೋಡ್ ಹಾಕಿ ಅದರ ಮೇಲೆ ಕಮಲ್‌ನಾಥ್ ಚಿತ್ರ ಹಾಕಲಾಗಿತ್ತು. ಕಾಂಗ್ರೆಸ್ ಸರ್ಕಾರದ 15 ತಿಂಗಳಿಂದ ಈಡೇರದ ಭರವಸೆಗಳ ಬಗ್ಗೆ ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ತೋರಿಸುತ್ತದೆ ಎಂದು ಹೇಳಲಾಗಿತ್ತು.
ಈ ಪೋಸ್ಟರ್‌ಗಳು ಬಿಜೆಪಿಯ ಕುತಂತ್ರ ಎಂದು ಕಾಂಗ್ರೆಸ್ ಬಣ್ಣಿಸಿತ್ತು. ಇದಾದ ಬಳಿಕ ಸಂಜೆ ವೇಳೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ, ಕ್ಯೂ ಆರ್ ಕೋಡ್ ಇರುವ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಕರ್ನಾಟಕದಲ್ಲಿ ನಡೆದಿದ್ದ ‘ಪೇ ಸಿಎಂ’ ಪೋಸ್ಟರ್ ಸಮರ
ಮಧ್ಯಪ್ರದೇಶ ರಾಜ್ಯದಲ್ಲಿ ನಡೆಯುತ್ತಿರುವ ಪೋಸ್ಟರ್ ಸಮರಕ್ಕೆ ಕರ್ನಾಟಕದ ವಿಧಾನಸಭೆ ಚುನಾವಣೆ ವೇಳೆ ನಡೆದಿದ್ದ ‘ಪೇ ಸಿಎಂ’ ಪೋಸ್ಟರ್ ಸಮರವೇ ಸ್ಪೂರ್ತಿ ಎಂದು ಹೇಳಲಾಗಿದೆ.
ಪ್ರಚಾರದ ಸಮಯದಲ್ಲಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರ ಹಾಕಿ ‘ಪೇ ಸಿಎಂ’ ಎಂಬ ಕ್ಯೂಆರ್ ಕೋಡ್ ಪೋಸ್ಟರ್‌ಗಳನ್ನು ಕಾಂಗ್ರೆಸ್ ಪಕ್ಷ ವ್ಯಾಪಕವಾಗಿ ಪ್ರಚಾರ ಮಾಡಿತ್ತು.
ಇದು ಆಗಿನ ಬಿಜೆಪಿ ಸರ್ಕಾರಕ್ಕೆ ಭಾರೀ ಮುಜುಗರ ಉಂಟು ಮಾಡಿತ್ತು. ಈಗ ಮಧ್ಯಪ್ರದೇಶ ರಾಜ್ಯದಲ್ಲಿ ಚುನಾವಣೆಗಳು ಹತ್ತಿರವಾಗುತ್ತಿರುವ ಸಮಯದಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಹಾಗೂ ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರಗಳಿರುವ ಕ್ಯೂ ಆರ್ ಕೋಡ್ ಪೋಸ್ಟರ್‌ಗಳು ಕಾಣಿಸಿಕೊಂಡಿವೆ.
ಈ ಸುದ್ದಿ ಓದಿದ್ದೀರಾ? ಹಿಮಾಚಲ ಪ್ರದೇಶದಲ್ಲಿ ಭೂಕುಸಿತ; 15 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು
ಮಧ್ಯಪ್ರದೇಶದ ‘ಶೇ 50 ಕಮಿಷನ್ ಸರ್ಕಾರ’ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಗಳೊಂದಿಗೆ ಫೋನ್ಪೇ ಸಂಬಂಧ ಹೊಂದಿಲ್ಲ. ಯಾವುದೇ ಪಕ್ಷಗಳು ಅಥವಾ ಅಭ್ಯರ್ಥಿಗಳೊಂದಿಗೆ ರಾಜಕೀಯ ಸಂಬಂಧ ಇಲ್ಲ ಫೋನ್‌ಪೇ ವಕ್ತಾರರು ತಿಳಿಸಿದ್ದಾರೆ.
ಈ ವರ್ಷದ ಕೊನೆಯಲ್ಲಿ ಅಂದರೆ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.