ಮಣಿಪುರ ಹಿಂಸಾಚಾರದ ಕುರಿತು ಅಲ್ಲಿಯ ಕೆಲವು ಪತ್ರಕರ್ತರು ಏಕಪಕ್ಷೀಯವಾಗಿ ವರದಿ ಮಾಡಿದ್ದಾರೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಸತ್ಯಶೋಧನಾ ತಂಡ ಶನಿವಾರ ವರದಿ ಬಿಡುಗಡೆ ಮಾಡಿದೆ. ಈ ವರದಿಗೆ ಸಂಬಂಧಿಸಿದಂತೆ ಸತ್ಯಶೋಧನಾ ತಂಡದ ಮೂವರ ವಿರುದ್ಧ ಮಣಿಪುರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅಧ್ಯಕ್ಷೆ ಸೀಮಾ ಮುಸ್ತಾಫ, ಸತ್ಯಶೋಧನಾ ತಂಡದ ಸೀಮಾ ಗುಹಾ, ಭರತ್ ಭೂಷಣ್ ಮತ್ತು ಸಂಜಯ್ ಕಪೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸತ್ಯಶೋಧನಾ ತಂಡದ ಮೂವರ ವಿರುದ್ಧ ”ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು, ಧಾರ್ಮಿಕ ಕಟ್ಟಡಗಳನ್ನು ಧ್ವಂಸಗೊಳಿಸುವುದು ಅಥವಾ ಅಪವಿತ್ರಗೊಳಿಸುವುದು, ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಉದ್ದೇಶಪೂರ್ವಕವಾಗಿ ಮಾತನಾಡುವುದು ಮತ್ತು ಸಾರ್ವಜನಿಕವಾಗಿ ಗಲಭೆಗೆ ಪ್ರಚೋದಿಸುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆಯಾದರೂ ಇದೇ ಸೆಕ್ಷನ್ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸೆಕ್ಷನ್ ಅನ್ವಯ ಯಾರ ವಿರುದ್ಧವೂ ಕಾನೂನು ಕ್ರಮಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದೆ. ನಿಂದನಾತ್ಮಕ ಆನ್‌ಲೈನ್ ಪೋಸ್ಟ್ ಮಾಡುವ ಯಾರನ್ನೇ ಆದರೂ ಬಂಧಿಸಿ ಜೈಲಿಗೆ ತಳ್ಳುವ ಅಧಿಕಾರವನ್ನು ಈ ಸೆಕ್ಷನ್ 66ಎ ಸರಕಾರಕ್ಕೆ ನೀಡುತ್ತದೆ.
ಈ ವರದಿಯು ಸುಳ್ಳು ಎಂದು ದೂರಿನಲ್ಲಿ ಹೇಳಲಾಗಿದೆ. ಕುಕಿ ನಿವಾಸವೊಂದರಿಂದ ಹೊಗೆ ಕಾಣಿಸುತ್ತದೆ ಎಂದು ವರ್ಣಿಸುವ ಫೋಟೋ ಒಂದು ಈ ವರದಿಯಲ್ಲಿದ್ದರೆ ವಾಸ್ತವವಾಗಿ ಅದು ಅರಣ್ಯ ಅಧಿಕಾರಿಯೊಬ್ಬರ ಕಚೇರಿಯಾಗಿದ್ದು. ಈ ವರದಿ ಸುಳ್ಳು ಮತ್ತು ಕುಕಿ ತೀವ್ರಗಾಮಿಗಳಿಂದ ಪ್ರವರ್ತಿತವಾಗಿದೆ ಎಂದು ಇದರಿಂದ ತಿಳಿಯುತ್ತದೆ,” ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ‘ಇಂಡಿಯಾ’ ಗೆಲ್ಲದಿದ್ದರೆ ಮಣಿಪುರ, ಹರಿಯಾಣದಂತೆ ದೇಶ ಬದಲು: ಎಂ ಕೆ ಸ್ಟಾಲಿನ್
ಈ ನಿರ್ದಿಷ್ಟ ಫೋಟೋ ಶೀರ್ಷಿಕೆಯಲ್ಲಾದ ತಪ್ಪಿಗೆ ಎಡಿಟರ್ಸ್ ಗಿಲ್ಡ್ ಭಾನುವಾರ(ಆಗಸ್ಟ್ 8) ಕ್ಷಮೆ ಕೋರಿದೆ ಹಾಗೂ ಸಂಪಾದನೆ ಹಂತದಲ್ಲಿ ಈ ದೋಷ ಉಂಟಾಗಿದೆ ಎಂದು ಹೇಳಿದೆ.
ಮಣಿಪುರ ರಾಜ್ಯದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ಮಾಧ್ಯಮಗಳ ವರದಿಗಳು ಏಕಪಕ್ಷೀಯವಾಗಿದ್ದು, ರಾಜ್ಯ ನಾಯಕತ್ವ ಪಕ್ಷಪಾತದಿಂದ ಕೂಡಿದೆ ಎಂದು ಎಡಿಟರ್ಸ್ ಗಿಲ್ಡ್ ಸತ್ಯ ಶೋಧನಾ ವರದಿಯಲ್ಲಿ ಹೇಳಲಾಗಿದೆ.
“ಸಾಮಾನ್ಯವಾಗಿ ವರದಿಗಳನ್ನು ಸಂಪಾದಕರು, ಬ್ಯುರೋ ಮುಖ್ಯಸ್ಥರು ಪರಿಶೀಲಿಸುತ್ತಾರೆ ಮತ್ತು ಸ್ಥಳೀಯ ಆಡಳಿತ, ಪೊಲೀಸ್ ಮತ್ತು ಭದ್ರತಾ ಪಡೆಗಳು ನಿಗಾ ವಹಿಸುತ್ತವೆ. ಆದರೆ ಸಂಘರ್ಷದ ಸಮಯದಲ್ಲಿ ಇದು ಸಾಧ್ಯವಾಗಿಲ್ಲ,” ಎಂದು ವರದಿ ಹೇಳಿದೆ.
ಮಾಧ್ಯಮಗಳು ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿ ಪ್ರಕಟಿಸಿದ ಕನಿಷ್ಠ 10 ಉದಾಹರಣೆಗಳು ಈ ವರದಿಯಲ್ಲಿವೆ. “ನಕಲಿ ಸುದ್ದಿಗಳಿಂದ ಈ ಜನಾಂಗೀಯ ಸಂಘರ್ಷ ಇನ್ನಷ್ಟು ಹೆಚ್ಚಾಯಿತು” ಎಂದು ವರದಿಯಲ್ಲಿ ಹೇಳಲಾಗಿದೆ.