ಅಚ್ಚರಿಯ ಬೆಳವಣಿಗೆಯೊಂದರಲ್ಲಿ ವಾರಣಾಸಿಯ ಜ್ಞಾನವಾಪಿ ಮಸೀದಿ ಪ್ರಕರಣದ ಪ್ರಮುಖ ಅರ್ಜಿದಾರ ಜೀತೇಂದ್ರ ಸಿಂಗ್ ವೀಸೇನ್ ಕಾನೂನು ಹೋರಾಟದಿಂದ ಹಿಂದೆ ಸರಿದಿದ್ದಾರೆ.
ʻಹಿಂದೂ ಸಂಘಟನೆ ಸೇರಿದಂತೆ ವಿವಿಧ ಕಡೆಗಳಿಂದ ನಾನು ಮತ್ತು ನಮ್ಮ ಕುಟುಂಬದವರು (ಪತ್ನಿ ಕಿರಣ್ ಸಿಂಗ್ ಮತ್ತು ಸೊಸೆ ರಾಖಿ ಸಿಂಗ್) ಕಿರುಕುಳ, ಮತ್ತು ಅವಮಾನವನ್ನು ಅನುಭವಿಸುತ್ತಿದ್ದೇವೆ. ಇದರಿಂದ ಬೇಸರಗೊಂಡು, ಜ್ಞಾನವಾಪಿ ಸಂಬಂಧಿತ ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಿರುವ ಎಲ್ಲಾ ಪ್ರಕರಣಗಳಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ವಿಶ್ವ ವೈದಿಕ ಸನಾತನ ಸಂಘದ ಮುಖ್ಯಸ್ಥ ವಿಸೇನ್ ಹೇಳಿದ್ದಾರೆ.
ಫಿರ್ಯಾದುದಾರರೊಂದಿಗಿನ ಸಂವಹನದ ಕೊರತೆ ಮತ್ತು ಅಸಮಾಧಾನದ ಕಾರಣ ವೀಸೇನ್ ಅವರ ವಕೀಲರು ಈ ಹಿಂದೆಯೇ ಪ್ರಕರಣದಿಂದ ಹಿಂದೆ ಸರಿದಿದ್ದರು.
‘ದೇಶ ಹಾಗೂ ಧರ್ಮದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನಾವು ಅರ್ಜಿ ಸಲ್ಲಿಸಿದ್ದೆವು. ಹಿಂಸೆಯನ್ನು ತಾಳಿಕೊಳ್ಳುವ ಶಕ್ತಿ ಮತ್ತು ಸಂಪನ್ಮೂಲ ನಮ್ಮ ಬಳಿ ಇಲ್ಲ. ‘ಧರ್ಮ’ಕ್ಕಾಗಿ ಹೋರಾಡುವ ಶಕ್ತಿ ಇನ್ನು ಉಳಿದಿಲ್ಲ. ಈ ಧರ್ಮಯುದ್ಧವನ್ನು ಪ್ರಾರಂಭಿಸಿದ್ದು ನನ್ನ ಜೀವನದ ದೊಡ್ಡ ತಪ್ಪು. ಧರ್ಮದ ಹೆಸರಲ್ಲಿ ಗಿಮಿಕ್ ಮಾಡುವ, ತಪ್ಪು ದಾರಿಗೆ ಎಳೆಯುವವರ ಜೊತೆ ಈ ಸಮಾಜ ನಿಲ್ಲುತ್ತದೆʼ ಎಂದು ಎಂದು ವಿಸೇನ್ ಹೇಳಿದ್ದಾರೆ.
ಶೃಂಗಾರ್ ಗೌರಿ ದೇವಿ ಮತ್ತು ಜ್ಞಾನವಾಪಿ ಮಸೀದಿಯ ಆವರಣದಲ್ಲಿರುವ ಇತರ ದೇವತೆಗಳ ದೈನಂದಿನ ಪೂಜೆಗೆ ಅನುಮತಿ ಕೋರಿ ಆಗಸ್ಟ್ 2021 ರಲ್ಲಿ ವಿಸೇನ್ ಅವರ ಸೊಸೆ ರಾಖಿ ಸಿಂಗ್ ಸೇರಿದಂತೆ ಐವರು ಮಹಿಳಾ ಫಿರ್ಯಾದಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.