- ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು
- ಘಟನೆಯನ್ನು ಖಂಡಿಸಿ, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ ಬಾಲಿವುಡ್
ಮಣಿಪುರದ ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಮಹಿಳೆಯರಿಬ್ಬರನ್ನು ಬೆತ್ತಲೆ ಮಾಡಿ, ಮೆರವಣಿಗೆ ಮಾಡಿದ ವಿಡಿಯೋ ದೇಶಾದ್ಯಂತ ಕಿಚ್ಚು ಹೊತ್ತಿಸಿದ್ದು, ಮಣಿಪುರ ಸೇರಿದಂತೆ ಹಲವೆಡೆ ಬೃಹತ್ ಪ್ರತಿಭಟನೆಗೆ ನಾಂದಿ ಹಾಡಿದೆ.
ವಿಡಿಯೋ ಹೊರಬರುತ್ತಿದಂತೆಯೇ ಮಣಿಪುರದಲ್ಲಿ ಮತ್ತಷ್ಟು ಉದ್ವಿಗ್ನ ಪರಿಸ್ಥಿತಿ ಉಂಟಾಗುವ ಸಾಧ್ಯತೆಯ ನಡುವೆಯೇ ಚುರಾಚಂದ್ಪುರದ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗಲು ಸರ್ಕಾರವೇ ಎಂದು ಆರೋಪಿಸಿರುವ ಬುಡಕಟ್ಟು ಸಮುದಾಯದ ಜನರು, ನಮಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ನೀಡುವಂತೆ ಒತ್ತಾಯಿಸಿದರು.
ಚುರಾಚಂದ್ಪುರದ ಸಾರ್ವಜನಿಕ ಮೈದಾನದಲ್ಲಿ ಕಪ್ಪು ಬಟ್ಟೆ ಧರಿಸಿದ್ದ ಸಾವಿರಕ್ಕೂ ಹೆಚ್ಚು ಜನರು ಮಳೆ ಸುರಿಯುತ್ತಿದ್ದರೂ ಶಾಂತಿಯುತ ರ್ಯಾಲಿ ನಡೆಸಿ, ಬಿರೇನ್ ಸರಕಾರ ಕೆಳಗಿಳಿಯಬೇಕೆಂದು ಒತ್ತಾಯಿಸಿದರು.
ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವೈಫಲ್ಯದ ವಿರುದ್ಧ ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿ, ಕರೆದೊಯ್ದರು.
ಮಣಿಪುರದ ಘಟನೆಯ ಬಗ್ಗೆ ಹಲವಾರು ಸಂಘಟನೆಗಳು, ನಾಗರಿಕ ಸಮಾಜಗಳು, ರಾಜಕೀಯ ಮುಖಂಡರು ಮತ್ತು ಬಾಲಿವುಡ್ ನಟ-ನಟಿಯರೂ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಇದು ಅತ್ಯಂತ ಅಮಾನವೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.
‘ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವೀಡಿಯೋ ನೋಡಿ ಬೆಚ್ಚಿಬಿದ್ದೆ, ಜಿಗುಪ್ಸೆ ಉಂಟಾಯಿತು. ತಪ್ಪಿತಸ್ಥರಿಗೆ ಘೋರ ಶಿಕ್ಷೆ ಸಿಗಬೇಕು. ಆ ಶಿಕ್ಷೆ ಹೇಗಿರಬೇಕು ಎಂದರೆ ಅದನ್ನು ನೋಡಿ ಮುಂದೆ ಯಾರೂ ಇಂಥ ತಪ್ಪು ಮಾಡುವ ಬಗ್ಗೆ ಆಲೋಚನೆಯನ್ನೂ ಮಾಡಬಾರದು’ ಎಂದು ನಟ ಅಕ್ಷಯ್ ಕುಮಾರ್ ಹೇಳಿಕೆ ನೀಡಿದ್ದಾರೆ.
‘ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ಭಯಾನಕವಾಗಿದೆ. ಇದು ನನ್ನನ್ನು ಬೆಚ್ಚಿಬೀಳಿಸಿದೆ. ಮಹಿಳೆಯರಿಗೆ ಆದಷ್ಟು ಬೇಗ ನ್ಯಾಯ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ಆಗಲಿ’ ಎಂದು ನಟಿ ಕಿಯಾರಾ ಅಡ್ವಾಣಿ ಟ್ವೀಟ್ ಮಾಡಿದ್ದಾರೆ.