ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಮದುವೆಯ ವಿಚಾರದ ಬಗ್ಗೆ ಹಲವಾರು ಸಂದರ್ಶನಗಳಲ್ಲಿ ಉತ್ತರಿಸಿದ್ದಾರೆ.
ಆದರೆ ರಾಜಸ್ಥಾನದ ಜೈಪುರದಲ್ಲಿ ಇತ್ತೀಚಿಗೆ ವಿದ್ಯಾರ್ಥಿನಿಯರೊಂದಿಗೆ ಸಂವಾದ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಿಮ್ಮ ಸೌಂದರ್ಯ ಹೇಗೆ ಕಾಪಾಡಿಕೊಳ್ಳುತ್ತೀರಿ? ನಿಮ್ಮ ಅಚ್ಚುಮೆಚ್ಚಿನ ಆಹಾರ ಯಾವುದು? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಅದರಲ್ಲಿ ಎಲ್ಲರ ಗಮನ ಸೆಳೆದಿದ್ದು ನೀವು ಏಕೆ ಇನ್ನೂ ಮದುವೆಯಾಗಿಲ್ಲ ಎನ್ನುವ ಪ್ರಶ್ನೆ!
ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬರು ನೀವು ತುಂಬಾ ಬುದ್ಧಿವಂತರು, ನೋಡೋಕೂ ತುಂಬಾ ಚೆನ್ನಾಗಿದ್ದೀರಾ ಆದರೆ ಯಾಕಿನ್ನೂ ಮದುವೆಯಾಗಿಲ್ಲ ಎಂಬ ಪ್ರಶ್ನೆಯನ್ನು ರಾಹುಲ್ ಅವರಿಗೆ ಕೇಳಿದರು.
ವಿದ್ಯಾರ್ಥಿನಿಯ ಪ್ರಶ್ನೆಗೆ ಜಾಣತನದಿಂದ ಉತ್ತರ ನೀಡಿದ ರಾಹುಲ್ ಗಾಂಧಿ, “ ಏಕೆಂದರೆ ನನ್ನ ಕೆಲಸ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದರಿಂದ ನಾನಿನ್ನು ಮದುವೆಯಾಗಿಲ್ಲ” ಎಂದರು.
ಇದೇ ಸಂದರ್ಭದಲ್ಲಿ ನಿಮ್ಮ ಇಷ್ಟದ ಖಾದ್ಯಗಳು ಯಾವುವು ಎಂಬ ಪ್ರಶ್ನೆಗೆ “ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ” ಎಂದು ರಾಹುಲ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಜಾತಿ ಗಣತಿಯು ಅಲ್ಪಸಂಖ್ಯಾತರ ‘ಎಕ್ಸ್-ರೇ’: ರಾಹುಲ್ ಗಾಂಧಿ
ಇನ್ನು ನಿಮ್ಮ ಅಚ್ಚುಮೆಚ್ಚಿನ ಪ್ರವಾಸಿ ಸ್ಥಳ ಯಾವುದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ‘ಈವರೆಗೂ ನಾನು ಹೋಗಿಲ್ಲದ ಸ್ಥಳಕ್ಕೆ ಹೋಗೋದು ನನಗೆ ಇಷ್ಟ’ ಎಂದು ಹೇಳಿದರು.
ನಾನು ಯಾವಾಗಲೂ ಹೊಸ ಸ್ಥಳಗಳಿಗೆ ಭೇಟಿ ನೀಡಲು ಇಷ್ಟಪಡುತ್ತೇನೆ ಎಂದ ರಾಹುಲ್ , ತಮ್ಮ ತ್ವಚೆಯ ರಹಸ್ಯದ ಬಗ್ಗೆಯೂ ಮಾತನಾಡಿದರು. ನಾನು ನನ್ನ ಮುಖಕ್ಕೆ ಯಾವುದೇ ಕ್ರೀಮ್ ಅಥವಾ ಸೋಪ್ ಹಚ್ಚೋದಿಲ್ಲ. ಕೇವಲ ನೀರಿನಿಂದ ಮುಖ ತೊಳೆಯುತ್ತೇನೆ ಅಷ್ಟೇ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರದ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್ , ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಪುರುಷರಿಗಿಂತ ಕಡಿಮೆಯಿರಲಿಲ್ಲ. ಆದ್ದರಿಂದ ಅವರಿಗೆ ಏಕೆ ಕಡಿಮೆ ಹಕ್ಕುಗಳು ಇರಬೇಕು. ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಸಿಗಬೇಕು. ಅವರಿಗೆ ಹಣ ಬಳಕೆ ಹಾಗೂ ಅಧಿಕಾರ ಚಲಾಯಿಸುವ ಕುರಿತಾಗಿ ಹೆಚ್ಚಿನ ಮಾಹಿತಿ ಸಿಗಬೇಕು ಎಂದರು.
ರಾಜಕಾರಣಿಯಾಗದಿದ್ದರೆ ಏನಾಗುತ್ತಿದ್ದಿರಿ ಎನ್ನುವ ಪ್ರಶ್ನೆಗೆ, “ನಿಜವಾಗಿ ಇದರಲ್ಲಿ ಅನೇಕ ವಿಷಯಗಳಿವೆ. ನಾನೊಬ್ಬ ಶಿಕ್ಷಕನಾಗಿ ಯುವಕರಿಗೆ ಪಾಠ ಕಲಿಸುತ್ತಿದ್ದೆ. ನಾನೊಬ್ಬ ಬಾಣಸಿಗ. ಹಾಗಾಗಿ, ನನ್ನಲ್ಲಿ ಹಲವು ವಿಷಯಗಳಿವೆ. ಇದೊಂದು ಸಂಕೀರ್ಣವಾದ ವಿಷಯವಾಗಿದೆ” ಎಂದರು.