ಭಾರತದ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ 10 ವರ್ಷಗಳ ಅವಧಿಯ ಮಾನ್ಯತೆ ಸ್ಥಾನಮಾನ ನೀಡಿದ್ದು, ಇದರಿಂದಾಗಿ ಇನ್ನು ಮುಂದೆ ಭಾರತೀಯ ವೈದ್ಯಕೀಯ ಪದವೀಧರರು ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ತರಬೇತಿ ಮತ್ತು ಪ್ರಾಕ್ಟೀಸ್ ಮಾಡಬಹುದಾಗಿದೆ.
ಭಾರತೀಯ ಆರೋಗ್ಯ ಸಚಿವಾಲಯ ಈ ಬಗ್ಗೆ ತಿಳಿಸಿದ್ದು, ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲ್ಲ 706 ವೈದ್ಯಕೀಯ ಕಾಲೇಜುಗಳು ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ ಮಾನ್ಯತೆ ಪಡೆಯುತ್ತವೆ ಎಂದು ಸಚಿವಾಲಯ ಹೇಳಿದೆ.
“ಈ ಮಾನ್ಯತೆಯಿಂದ ಭಾರತದಲ್ಲಿ ಅಸ್ತಿತ್ವದಲ್ಲಿರುವ 706 ವೈದ್ಯಕೀಯ ಕಾಲೇಜುಗಳು ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ ಮಾನ್ಯತೆ ಪಡೆಯುತ್ತವೆ. ಮುಂಬರುವ 10 ವರ್ಷಗಳಲ್ಲಿ ಸ್ಥಾಪಿಸಲಾಗುವ ಹೊಸ ವೈದ್ಯಕೀಯ ಕಾಲೇಜುಗಳೂ ಸ್ವಯಂಚಾಲಿತವಾಗಿ ವಿಶ್ವ ಫೆಡರೇಷನ್‌ನ ಮಾನ್ಯತೆ ಪಡೆಯುತ್ತವೆ. ಜಾಗತಿಕ ಉತ್ತಮ ಅಭ್ಯಾಸಗಳು ಮತ್ತು ಮಾನದಂಡಗಳೊಂದಿಗೆ ಅವುಗಳನ್ನು ಜೋಡಿಸುವ ಮೂಲಕ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಈ ಮನ್ನಣೆಯು ಮತ್ತಷ್ಟು ಹೆಚ್ಚಿಸಲಿದೆ” ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಮತದಾರರ ಪಟ್ಟಿಗೆ ಆಧಾರ್ ಸಂಖ್ಯೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟಿಗೆ ಚುನಾವಣಾ ಆಯೋಗ ಮಾಹಿತಿ
ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ ವಿಶ್ವಾದ್ಯಂತ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮೀಸಲಾಗಿರುವ ಜಾಗತಿಕ ಸಂಸ್ಥೆ. ವಿಶ್ವ ಫೆಡರೇಷನ್‌ನ ಮಾನ್ಯತೆ ಕಾರ್ಯಕ್ರಮವು ವೈದ್ಯಕೀಯ ಸಂಸ್ಥೆಗಳು ಶಿಕ್ಷಣ ಮತ್ತು ತರಬೇತಿಯ ಅತ್ಯುನ್ನತ ಅಂತಾರಾಷ್ಟ್ರೀಯ ಮಾನದಂಡಗಳನ್ನು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ವಿಶ್ವ ವೈದ್ಯಕೀಯ ಶಿಕ್ಷಣ ಫೆಡರೇಶನ್ ಮಾನ್ಯತೆ ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವು ಜಾಗತಿಕ ಮಾನದಂಡಗಳಿಗೆ ಬದ್ಧವಾಗಿದೆ ಎಂದು ಹೇಳುತ್ತದೆ. ಈ ಪುರಸ್ಕಾರವು ನಮ್ಮ ವಿದ್ಯಾರ್ಥಿಗಳಿಗೆ ವಿಶ್ವದ ಎಲ್ಲ ಕಡೆ ತಮ್ಮ ವೃತ್ತಿಜೀವನ ನಡೆಸಲು ಅವಕಾಶ ನೀಡುತ್ತದೆ.