ಜನಾಂಗೀಯ ಹಿಂಸಾಚಾರದಿಂದ ನಲುಗಿದ್ದ ಮಣಿಪುರ ರಾಜ್ಯಕ್ಕೆ ಮೂರು ತಿಂಗಳ ನಂತರ ಸರ್ಕಾರವು ಇಂಟರ್ನೆಟ್ ಮೇಲಿನ ನಿಷೇಧವನ್ನು ಕೆಲವು ಷರತ್ತುಗಳೊಂದಿದೆ ತೆರವುಗೊಳಿಸಿದೆ.
ಸ್ಥಿರ ಐಪಿ ವಿಳಾಸವನ್ನು ಹೊಂದಿರುವವರು ಮಾತ್ರ ಸೀಮಿತ ರೀತಿಯಲ್ಲಿ ಇಂಟರ್ನೆಟ್ ಅನ್ನು ಪ್ರವೇಶಿಸಬಹುದು ಎಂದು ಸರ್ಕಾರವು ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ ಮೊಬೈಲ್ ಇಂಟರ್ನೆಟ್ ನಿಷೇಧ ಮುಂದುವರಿಯಲಿದೆ. ಸ್ಥಿರ ಐಪಿ ಒಂದನ್ನು ಹೊರತುಪಡಿಸಿ ಯಾವುದೇ ಸಂಪರ್ಕವನ್ನು ಅನುಮತಿಸಲಾಗುವುದಿಲ್ಲ. ಯಾವುದೇ ಚಂದಾದಾರರು ಇತರ ರೀತಿಯ ಸಂಪರ್ಕಗಳನ್ನು ಬಳಸುತ್ತಿರುವುದು ಕಂಡುಬಂದರೆ ಸೇವಾ ಪೂರೈಕೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ
ಯಾವುದೇ ವೈ-ಫೈ ಹಾಟ್‌ಸ್ಪಾಟ್ ಅನ್ನು ಅನುಮತಿಸಲಾಗುವುದಿಲ್ಲ. ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಿಗೆ ಪ್ರವೇಶವಿಲ್ಲ. ಬಳಕೆದಾರರು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಸಾಫ್ಟ್‌ವೇರ್ ಅನ್ನು ತೆಗೆದುಹಾಕಬೇಕು ಮತ್ತು ಹೊಸದನ್ನು ಸ್ಥಾಪಿಸಬಾರದು ಎಂದು ಸರ್ಕಾರ ಹೇಳಿದೆ. ವಿಪಿಎನ್‌ಗಳು ಇಂಟರ್ನೆಟ್ ಟ್ರಾಫಿಕ್ ಅನ್ನು ಎನ್‌ಕ್ರಿಪ್ಟ್ ಮಾಡುತ್ತದೆ. ಇದರಿಂದಾಗಿ ಮೂರನೇ ವ್ಯಕ್ತಿಗಳಿಗೆ ಆನ್‌ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವುದು ಕಷ್ಟವಾಗುತ್ತದೆ ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಯಿಸ್ಟ್ ಬೊಮ್ಮಾಯಿ, ಬೊಂಬೆ ಬೊಮ್ಮಾಯಿ ಮತ್ತು ಬಿಜೆಪಿ
ಜನಾಂಗೀಯ ಹಿಂಸಾಚಾರ ಶುರುವಾದ ನಂತರ ಮಣಿಪುರ ಸರ್ಕಾರವು ಇಂಟರ್ನೆಟ್ ನಿಷೇಧದ ಬಗ್ಗೆ ತೀವ್ರ ಟೀಕೆಗೆ ಒಳಗಾಗಿತ್ತು. ಅಂತರ್ಜಾಲ ನಿಷೇಧದಿಂದ ಬ್ಯಾಂಕಿಂಗ್, ಪ್ರವೇಶ ಮತ್ತು ಪ್ರಯಾಣದಂತಹ ಸೇವೆಗಳಿಗೆ ತೊಂದರೆಯುಂಟಾಗಿತ್ತು. ಹಿಂಸಾಚಾರವನ್ನು ಪ್ರಚೋದಿಸುವ ವದಂತಿಗಳು ಮತ್ತು ನಕಲಿ ಸುದ್ದಿಗಳ ಹರಡುವಿಕೆಯನ್ನು ತಡೆಯಲು ಇಂಟರ್ನೆಟ್ ನಿಷೇಧ ಅಗತ್ಯ ಎಂದು ಸರ್ಕಾರ ಹೇಳಿದೆ.
ಇಂಟರ್‌ನೆಟ್ ನಿಷೇಧದಿಂದ ಮೊಬೈಲ್ ರೀಚಾರ್ಜ್, ಎಲ್‌ಪಿಜಿ ಸಿಲಿಂಡರ್ ಬುಕಿಂಗ್, ವಿದ್ಯುತ್ ಬಿಲ್‌ಗಳ ಪಾವತಿ ಮತ್ತು ಇತರ ಆನ್‌ಲೈನ್ ಸೇವೆಗಳಲ್ಲದೆ, ಕಚೇರಿಗಳು ಮತ್ತು ಸಂಸ್ಥೆಗಳು ಮತ್ತು ಮನೆಯಿಂದಲೇ ಕೆಲಸ ಮಾಡುವ ಜನರ ನೋವನ್ನು ಸರ್ಕಾರ ಅರಿತುಕೊಂಡಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆದರೆ ಇಂಟರ್‌ನೆಟ್ ಸ್ಥಗಿತದಿಂದ ದಿನನಿತ್ಯದ ಸೇವೆಗಳಿಗೆ ತೊಂದರೆಯಾಗುತ್ತದೆ ಎಂದು ನಾಗರಿಕ ಹಕ್ಕುಗಳ ಕಾರ್ಯಕರ್ತರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಸರ್ಕಾರಗಳ ಅಭಿಪ್ರಾಯ ಕೇಳಿತ್ತು.