ಪ್ರಧಾನಿ ಮೋದಿಯವರ ‘ಅರಣ್ಯಾಸಕ್ತಿ’; ಅರಣ್ಯ ಸಂರಕ್ಷಣಾ ಕಾಯ್ದೆಯ ತಿದ್ದುಪಡಿ ಮಸೂದೆ ಹೇಳುವುದೇನು?

Date:

2023ರ ಅರಣ್ಯ (ಸಂರಕ್ಷಣೆ) ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರವಾದರೆ ಕಾಯ್ದೆಯಡಿ ಅರಣ್ಯವೆಂದು ಸೂಚಿತವಾಗದ ಭೂಮಿಯನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ಬಂಡೀಪುರ ಅಭಯಾರಣ್ಯದಲ್ಲಿ ಮಾಧ್ಯಮಗಳಿಗೆ ಪೋಸ್ ಕೊಟ್ಟಿದ್ದಾರೆ. ಹುಲಿಗಳನ್ನು ನೋಡಲು ದುರ್ಬೀನು ಹಿಡಿದಿದ್ದಾರೆ. ಸಫಾರಿ ಉಡುಗೆಯಲ್ಲಿ ಮಿಂಚಿದ್ದಾರೆ. ಆದರೆ ಅವರ ಅರಣ್ಯದ ಕುರಿತ ಪ್ರೀತಿ ಇಲ್ಲಿಗೇ ಕೊನೆಯಾಗಿದೆಯೆ? ಹಾಗೊಂದು ಪ್ರಶ್ನೆ ಎತ್ತಲೇಬೇಕಿದೆ.

ಏಕೆಂದರೆ, ಬೇಲಿಯೇ ಎದ್ದು ಹೊಲವನ್ನು ಮೇಯ್ದ ರೀತಿಯಲ್ಲಿ ರಚನೆಯಾಗಿರುವ 2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ ಕೇಂದ್ರ ಸರ್ಕಾರದ ಅರಣ್ಯ ಸಂರಕ್ಷಣೆಯ ಬದ್ಧತೆಯ ಮೇಲೆ ಪ್ರಶ್ನೆ ಎತ್ತುತ್ತದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಸ್ತಾಪಿಸಿರುವ 2023ರ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ ಅನೇಕ ಮೀಸಲು ಅರಣ್ಯಗಳಿಗೆ ನೀಡಲಾದ ಕಾನೂನು ಸಂರಕ್ಷಣೆಯನ್ನು ತೆಗೆಯಲು ಪ್ರಯತ್ನಿಸಿದೆ. ಲೋಕಸಭೆಯ ಮುಂದೆ ಮಾರ್ಚ್ 29ರಂದು ಇಡಲಾಗಿರುವ ಭಾರತದ ಅರಣ್ಯದ ಸಂರಕ್ಷಣಾ ಮಸೂದೆ, ಸಂರಕ್ಷಣೆಯ ಬದಲಾಗಿ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಸುಲಭವಾಗಿ ಅರಣ್ಯ ಭೂಮಿಯನ್ನು ಪಡೆಯಲು ಸಾಧ್ಯವಾಗುವ ರೀತಿಯಲ್ಲಿ ರೂಪುಗೊಂಡಿದೆ ಎಂದು ಪರಿಸರ ತಜ್ಞರು ಆರೋಪಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗಿರುವ ಮಸೂದೆಯ ವಿವರಗಳ ಪ್ರಕಾರ, ಪ್ರಸ್ತಾಪಿತ ಹೊಸ ಮಸೂದೆಯಲ್ಲಿ ಅರಣ್ಯ ಭೂಮಿಯ ಅವಿಭಾಜ್ಯ ಅಂಗವಾಗಿರುವ ಒಂದು ಭಾಗವನ್ನು ರಕ್ಷಣೆಯ ವಲಯದಿಂದ ಹೊರಗಿಡಲಾಗಿದೆ. ತ್ವರಿತ ಸೇನಾ ಕಾರ್ಯಯೋಜನೆ ಮತ್ತು ಭದ್ರತೆ ಸಂಬಂಧಿ ಯೋಜನೆಗಳ ಅಗತ್ಯವನ್ನು ಮುಂದಿಟ್ಟು ಮಸೂದೆಯನ್ನು ಸಿದ್ಧಪಡಿಸಲಾಗಿದೆ. ಈ ಮಸೂದೆಯಲ್ಲಿ 1980ರ ಅರಣ್ಯ ಸಂರಕ್ಷಣಾ ಕಾಯ್ದೆಗೆ ಸ್ಪಷ್ಟೀಕರಣ ನೀಡುವ ರೀತಿಯಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ ಪರಿಸರ ತಜ್ಞರ ಪ್ರಕಾರ, ವಾಣಿಜ್ಯ ಉದ್ದೇಶಗಳಿಗಾಗಿ ಅರಣ್ಯ ಭೂಮಿಯನ್ನು ಬಳಸಲು ನೆರವಾಗುವಂತೆ ಈ ತಿದ್ದುಪಡಿಗಳನ್ನು ರೂಪಿಸಲಾಗಿದೆ.

ಅರಣ್ಯ ಭೂಮಿ ಬಳಕೆಗೆ ವಿನಾಯಿತಿ

ಅರಣ್ಯ ಸಂರಕ್ಷಣಾ ಕಾಯ್ದೆ ಅರಣ್ಯ ಭೂಮಿ ಮತ್ತು ಸಂಬಂಧಿಸಿದ ಸಂಪನ್ಮೂಲ ರಕ್ಷಣೆಗೆ ಕಾನೂನು ಬೆಂಬಲ ಕೊಡುತ್ತದೆ. ಹೊಸ ತಿದ್ದುಪಡಿಯಿಂದ ಭಾರತದಲ್ಲಿ ಅರಣ್ಯಗಳೆಂದು ಸೂಚಿತವಾಗದೆ, ಸಂರಕ್ಷಿತ ಅರಣ್ಯವಲಯಗಳ ಭಾಗವಾಗಿರುವ ಭೂಮಿಗೆ ಇರುವ ರಕ್ಷಣೆ ರದ್ದಾಗಲಿದೆ.

ಅರಣ್ಯ ಸಂರಕ್ಷಣೆ ಕಾಯ್ದೆಯ ಅಡಿಯಲ್ಲಿ ಸಂರಕ್ಷಿತ ವಲಯವೆಂದು ಹೇಳದಿರುವ ಅರಣ್ಯ ಭೂಮಿ ಭಾರತದಲ್ಲಿ ಬಹಳ ಇವೆ. ಉದಾಹರಣೆಗೆ ರೈಲ್ವೆ ಹಳಿಗಳು ಅಥವಾ ರಸ್ತೆ ಸುತ್ತಮುತ್ತ ಇರುವ ಅರಣ್ಯ ಸಂಪತ್ತು, ಅಂತಾರಾಷ್ಟ್ರೀಯ ಗಡಿ, ಲೈನ್ ಆಫ್ ಕಂಟ್ರೋಲ್ ಅಥವಾ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ಏರಿಯಾಗಳಲ್ಲಿರುವ ಮರಗಳು ಅಥವಾ ಭೂಮಿಯಲ್ಲಿ ಬೆಳೆದಿರುವ ಅರಣ್ಯ. ಹೊಸ ತಿದ್ದುಪಡಿ ಅಂಗೀಕಾರವಾದಲ್ಲಿ ಈ ಭೂಮಿಗಳ ವಾಣಿಜ್ಯ ಬಳಕೆಗೆ ಅವಕಾಶ ಸಿಗಲಿದೆ.

ಹೊಸ ತಿದ್ದುಪಡಿಯ ನಂತರ, ಭದ್ರತಾ ಸಂಬಂಧ ಮೂಲಸೌಕರ್ಯ ನಿರ್ಮಾಣಕ್ಕೆ ಬಳಸಲು ಪ್ರಸ್ತಾಪಿಸಿರುವ 10 ಹೆಕ್ಟೇರ್‌ಗಳಷ್ಟು ಭೂಮಿಗೂ ವಿನಾಯಿತಿ ಸಿಗಲಿದೆ. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ರಕ್ಷಣಾ ಯೋಜನೆಗಳು, ಅರೆಸೇನಾಪಡೆ ಶಿಬಿರಗಳು ಅಥವಾ ಸಾರ್ವಜನಿಕ ಉಪಯೋಗದ ಯೋಜನೆಗಳು, ನಕ್ಸಲ್‌ಪೀಡಿತ ಪ್ರದೇಶಗಳ ಐದು ಹೆಕ್ಟೇರ್‌ಗಳಷ್ಟು ಭೂಮಿಯನ್ನು ಬಳಸಿಕೊಳ್ಳಲು ಅರಣ್ಯ ಸಂರಕ್ಷಣಾ ಕಾಯ್ದೆಯ ಕಾನೂನು ರಕ್ಷಣೆಯಿಂದ ವಿನಾಯಿತಿ ಸಿಗಲಿದೆ.

ಸಂರಕ್ಷಿತ ಅರಣ್ಯ ಭೂಮಿಯ ವ್ಯಾಪ್ತಿ

ಭಾರತದಲ್ಲಿ ಅರಣ್ಯಕ್ಕೆ ಸೂಕ್ತ ವಾಖ್ಯಾನವಿಲ್ಲ. ಕೊಡಗಿನಲ್ಲಿ ಅರಣ್ಯ ಭೂಮಿ 4,10,075 ಹೆಕ್ಟೇರ್‌ಗಳಿಗೆ ವ್ಯಾಪಿಸಿದೆ. ಸಂಪೂರ್ಣ ಜಿಲ್ಲೆಯೇ ಅರಣ್ಯ ಭೂಮಿ. ಆದರೆ, 1,34,614 ಹೆಕ್ಟೇರ್‌ಗಳಷ್ಟು ಸಂರಕ್ಷಿತ ಅರಣ್ಯ ಭೂಮಿ ಎಂದು ಸೂಚಿತಗೊಂಡಿದೆ. ಹಾಗೆಂದು ಉಳಿದ ಪ್ರದೇಶ ಅರಣ್ಯವಲ್ಲ ಎಂದು ಹೇಳಲಾಗದು. ಅವು ಪರಿಸರ ವ್ಯವಸ್ಥೆಯ ಪ್ರಮುಖ ಭಾಗ. ಆದರೆ, ಈಗಿನ ತಿದ್ದುಪಡಿಯ ನಂತರ ಸೂಚಿತವಲ್ಲದ ಅರಣ್ಯ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ವಿನಾಯಿತಿ ಸಿಗಲಿದೆ.

“ಗಡಿ ಭಾಗದಲ್ಲಿ ಸೇನಾ ಕಾರ್ಯಾಚರಣೆ ಉದ್ದೇಶದಿಂದ ಬಳಸಿಕೊಳ್ಳುವ 100 ಕಿಮೀ ಅರಣ್ಯ ಭೂಮಿಯಲ್ಲಿ ಸಂಪೂರ್ಣ ಈಶಾನ್ಯ ರಾಜ್ಯದ ಪರಿಸರವಿರಬಹುದು ಮತ್ತು ಹಿಮಾಲಯ ಪ್ರಾಂತ್ಯದ ಬಹುತೇಕ ಪ್ರದೇಶ ಬರಬಹುದು. ಈಗಾಗಲೇ ನಾವು ಅರಣ್ಯ ಪ್ರದೇಶಕ್ಕೆ ಸಾಕಷ್ಟು ಹಾನಿಯುಂಟು ಮಾಡಿದ್ದೇವೆ. ಹೀಗಾಗಿ ಇನ್ನಾದರೂ ತಡೆಯುವ ಅಗತ್ಯವಿದೆ” ಎಂದು ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಕ ಬಿ ಕೆ ಸಿಂಗ್ ಮಾಧ್ಯಮಗಳಿಗೆ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪಿಐಬಿ ಮೂಲಕ ಸರ್ಕಾರಿ ವಿರೋಧಿ ‘ನಕಲಿ’ ಸುದ್ದಿಗಳಿಗೆ ಕಡಿವಾಣಕ್ಕೆ ಸಿದ್ಧತೆ

ಸ್ಥಾಯಿ ಸಮಿತಿಯ ಅಭಿಪ್ರಾಯವಿಲ್ಲ

ಹೊಸ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಶಿಫಾರಸು ಮಾಡಲಾಗಿದೆ. ಆದರೆ ಮಾಜಿ ಅರಣ್ಯ ಸಚಿವ ಜೈರಾಂ ರಮೇಶ್ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ರಾಜ್ಯಸಭೆಯಲ್ಲಿ ವಿಜ್ಞಾನ, ತಂತ್ರಜ್ಞಾನ, ಪರಿಸರ ಹಾಗೂ ಹವಾಮಾನ ಬದಲಾವಣೆ ಕುರಿತ ಸ್ಥಾಯಿ ಸಮಿತಿಯ ಅಧ್ಯಕ್ಷರು.

ಮಾರ್ಚ್ 29ರಂದು ಜೈರಾಂ ರಮೇಶ್ ಸಂಸತ್ ಕಾರ್ಯದರ್ಶಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿ, “ಮಸೂದೆಗಳನ್ನು ಸ್ಥಾಯಿ ಸಮಿತಿಗಳೇ ಪ್ರಧಾನವಾಗಿ ವಿಶ್ಲೇಷಿಸಬೇಕು. ಆದರೆ ಮಸೂದೆಯನ್ನು ಪರಿಶೀಲಿಸಲು ಸ್ಥಾಯಿ ಸಮಿತಿಗೆ ಕಳುಹಿಸಿದಲ್ಲಿ ಮಾತ್ರವೇ ಹಾಗೆ ಮಾಡಬಹುದು. ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ, 2023ರನ್ನು ಕೇಂದ್ರ ಸರ್ಕಾರ ಸ್ಥಾಯಿ ಸಮಿತಿಯನ್ನು ತಪ್ಪಿಸಿ ಜಂಟಿ ಸಮತಿಗೆ ಶಿಫಾರಸು ಮಾಡಿದೆ. ಸ್ಥಾಯಿ ಸಮಿತಿ ತಿದ್ದುಪಡಿಯ ರೂಪುರೇಷೆಗಳನ್ನು ವಲಯದ ಎಲ್ಲಾ ಸಂಬಂಧಿತರ ಅಭಿಪ್ರಾಯಗಳನ್ನು ಪರಿಗಣಿಸಿ ಗಮನಹರಿಸುವ ಸಾಧ್ಯತೆಯಿತ್ತು” ಎಂದು ಹೇಳಿದ್ದರು.

ಸರ್ಕಾರ ರಚಿಸಿದ ಜಂಟಿ ಸಮಿತಿಯಲ್ಲಿ ವಿಪಕ್ಷಗಳ ಸದಸ್ಯರು ಇಲ್ಲ. ಹೀಗಾಗಿ ಇದು ಏಕಪಕ್ಷೀಯ ಜಂಟಿ ಸಮಿತಿಯಾಗಿದೆ.

ಏಪ್ರಿಲ್ 6ರಂದು ಜೈರಾಂ ರಮೇಶ್ ಬರೆದ ಮತ್ತೊಂದು ಪತ್ರದಲ್ಲಿ ಸ್ಥಾಯಿ ಸಮಿತಿಯ ಮೂಲ ಉದ್ದೇಶಗಳನ್ನು ನಿರ್ಲಕ್ಷಿಸಿರುವ ಬಗ್ಗೆ ಆರೋಪ ಹೊರಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಬಹುಶಃ ಬಂಡಿಪುರ ಅಭಯಾರಣ್ಯದಲ್ಲಿ ಸಫಾರಿ ಸಮಯದಲ್ಲಿ ಕಾಡುಪ್ರಾಣಿಗಳ ದಟ್ಟನೆ ಕಾಣಲಿಲ್ಲ,,,,,ಆ ಕಾರಣಕ್ಕೆ ಅಭಯಾರಣ್ಯ ಕಾನೂನು ತಿದ್ದುಪಡಿ ಮಾಡಿದರೂ ಮಾಡಬಹುದು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೊದಲ ಹಂತದ ಮತದಾನ | ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಮನೆಯಲ್ಲಿ ಬಾಂಬ್ ಪತ್ತೆ, ಮಣಿಪುರದಲ್ಲೂ ಹಿಂಸಾಚಾರ

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಪಶ್ಚಿಮ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...

ತಡವಾಗಿ ತಲುಪಿದ ವಿಮಾನ; ಒಲಿಂಪಿಕ್ ಅರ್ಹತಾ ಪಂದ್ಯದಿಂದ ಹೊರಗುಳಿದ ಕುಸ್ತಿಪಟು ದೀಪಕ್ ಪೂನಿಯಾ ಮತ್ತು ಸುಜೀತ್ ಕಲ್ಕಲ್‌

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಡೆ ಕ್ಷಣದಲ್ಲಿ ಪದಕ ಕಳೆದುಕೊಂಡ ಕುಪ್ತಿಪಟು ದೀಪಕ್ ಪೂನಿಯಾ...

ಡಿಡಿ ನ್ಯೂಸ್ ಲೋಗೊ ಬಣ್ಣ ಕೇಸರೀಕರಣ: ವ್ಯಾಪಕ ಆಕ್ರೋಶ

ಕೇಂದ್ರ ಸರ್ಕಾರ ಅಧೀನದ ವಿದ್ಯುನ್ಮಾನ ಮಾಧ್ಯಮ ಸಂಸ್ಥೆ ಡಿಡಿ ನ್ಯೂಸ್‌ ಲೋಗೊ...