ರಾಜ್ಯಸಭೆಯಲ್ಲಿ ಇಂದು (ಆಗಸ್ಟ್ 10) ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
“ಮಣಿಪುರ ಹಿಂಸಾಚಾರದ ಬಗ್ಗೆ ಉತ್ತರ ನೀಡಲು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಹಾಜರಾಗಲು ಸಿದ್ಧರಿಲ್ಲ. ಪ್ರಧಾನಿ ಏನು ದೇವರೇ, ಅವರೇನು ಭಗವಂತನೇ, ಅವರು ಬರುವುದರಿಂದ ಏನು ಆಗಲ್ಲ. ಅವರು ದೇವರಲ್ಲ” ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಖರ್ಗೆ ಹೇಳಿದರು.
ರಾಜ್ಯಸಭೆಯಲ್ಲಿ ಮಣಿಪುರ ಜನಾಂಗೀಯ ಸಂಘರ್ಷದ ಬಗ್ಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಬಂದು ಈ ಬಗ್ಗೆ ಮಾತನಾಡಬೇಕು. ಆಡಳಿತ ಪಕ್ಷದ ಸದಸ್ಯರು ನಿಯಮ 167 ರ ಅಡಿಯಲ್ಲಿ ಚರ್ಚೆ ಮಾಡಲು ಒಪ್ಪಿಕೊಂಡಿದ್ದರು. ಸದನಕ್ಕೆ ಬರುತ್ತಿದ್ದಂತೆ ತಮ್ಮ ನಿಲುವು ಬದಲಾಯಿಸಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಕೇಂದ್ರದಿಂದ ಶೀಘ್ರದಲ್ಲೇ ಚುನಾವಣಾ ಆಯುಕ್ತರ ನೇಮಕಾತಿ ನಿಯಂತ್ರಣ ಮಸೂದೆ: ಸಮಿತಿಯಲ್ಲಿ ಸಿಜೆಐಗೆ ಕೋಕ್
ತಮ್ಮ ಸರ್ಕಾರದ ವಿರುದ್ಧ ಸಲ್ಲಿಸಿರುವ ಅವಿಶ್ವಾಸ ನಿರ್ಣಯದ ಮೇಲೆ ಇಂದು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಸಂಜೆ 4 ಗಂಟೆಗೆ ಲೋಕಸಭೆಯಲ್ಲಿ ಅವರು ಸುದೀರ್ಘ ಭಾಷಣ ಮಾಡಲಿದ್ದು ಅದಕ್ಕೂ ಮುನ್ನ ರಾಜ್ಯಸಭೆಗೂ ಬಂದು ಮಾತನಾಡಲು ಖರ್ಗೆ ಒತ್ತಾಯಿಸಿದ್ದಾರೆ.
ಸಂಸತ್ತಿನ 2023ರ ಮುಂಗಾರು ಅಧಿವೇಶನದಲ್ಲಿ ಕಳೆದ ಎರಡು ದಿನಗಳಿಂದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿವೆ. ಇಂದು ಚರ್ಚೆಯ ಮೂರನೇ ದಿನವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಅವಿಶ್ವಾಸ ಗೊತ್ತುವಳಿ ಚರ್ಚೆಯಲ್ಲಿ ಭಾಗವಹಿಸಿ ಸಂಜೆ 4 ಗಂಟೆಗೆ ಉತ್ತರ ನೀಡಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡ ಕೆಸಿ ವೇಣುಗೋಪಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಯಾವುದೇ ನಿರೀಕ್ಷೆ ಇಲ್ಲ. ಅವರು ಏನು ಬೇಕಾದರೂ ಮಾತನಾಡಲಿ. ನಾವು ಅದನ್ನು ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.