- ಪಂಚಾಯತ್ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮಾತು
- 2021ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಬಿಎಸ್‌ಎಫ್ ಕಾಯ್ದೆಗೆ ತಿದ್ದುಪಡಿ
ರಾಜ್ಯದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಯಲ್ಲಿ ಮತದಾನ ಮಾಡದಂತೆ ಗಡಿ ಗ್ರಾಮಗಳಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಜನರಿಗೆ ಬೆದರಿಕೆ ಒಡ್ಡುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ (ಜೂನ್ 26) ಆರೋಪಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಸಂಬಂಧ ಬಿಎಸ್‌ಎಫ್ ಯೋಧರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಬೇಕು ಎಂದು ಮಮತಾ ಅವರು ರಾಜ್ಯ ಪೊಲೀಸರಿಗೆ ಸೂಚನೆ ನೀಡಿದರು.
ಮಮತಾ ಬ್ಯಾನರ್ಜಿ ಅವರು ಪಂಚಾಯತ್ ಚುನಾವಣೆಯ ಹಿನ್ನೆಲೆ ಕೂಚ್ ಬೆಹಾರ್ನಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
“ಗಡಿ ಗ್ರಾಮಗಳಲ್ಲಿ ಬಿಎಸ್ಎಫ್ ಯೋಧರು ಮನೆಗೆ ತೆರಳಿ ಪಂಚಾಯತ್ ಚುನಾವಣೆಯಲ್ಲಿ ಮತದಾನ ಮಾಡದಂತೆ ಜನರಿಗೆ ಬೆದರಿಕೆ ಒಡ್ಡುವ ಬಗ್ಗೆ ನನಗೆ ಮಾಹಿತಿ ದೊರೆತಿದೆ. ಜನರು ಯಾವುದೇ ಕಾರಣಕ್ಕೂ ಭಯಪಡದೆ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ” ಎಂದು ಮಮತಾ ಹೇಳಿದ್ದಾರೆ.
“ಕಾನೂನು ಸುವ್ಯವಸ್ಥೆ ರಾಜ್ಯ ಪಟ್ಟಿಗೆ ಸೇರಿದ್ದು, ಕೇಂದ್ರ ಸರ್ಕಾರಕ್ಕೆ ಇದರಲ್ಲಿ ಯಾವುದೇ ಪಾತ್ರ ಇಲ್ಲ” ಎಂದು ಮಮತಾ ಕುಟುಕಿದರು.
ಮಮತಾ ಬ್ಯಾನರ್ಜಿ ಅವರು ಕಳೆದ ವರ್ಷ ರಾಜ್ಯದ ಗಡಿಯಲ್ಲಿ ಬಿಎಸ್ಎಫ್ ಯೋಧರು ಕಳ್ಳಸಾಗಣೆದಾರರೆಂಬ ಶಂಕೆಯ ಮೇರೆಗೆ ಗ್ರಾಮಸ್ಥರ ಮೇಲಿನ ಗುಂಡಿನ ದಾಳಿಯನ್ನು ಉಲ್ಲೇಖಿಸಿದರು.
“ಇಂತಹ ಘಟನೆಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. ಬಿಎಸ್ಎಫ್ ಯೋಧರಿಗೆ ಯಾರ ಮೇಲೂ ಗುಂಡು ಹಾರಿಸಿ ಕೊಲ್ಲುವ ಅಧಿಕಾರವಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ” ಎಂದು ಅವರು ಹೇಳಿದರು.
“ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯುವ ಮೂರು ಹಂತದ ಪಂಚಾಯತ್ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಿಜೆಪಿಯನ್ನು ಸೋಲಿಸಲಿದೆ. ಕೇಂದ್ರದಲ್ಲೂ ಬಿಜೆಪಿಯನ್ನು ಸೋಲಿಸಿ ದೇಶದಲ್ಲಿ ಅಭಿವೃದ್ಧಿ ಪರ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ” ಎಂದು ಮಮತಾ ಬ್ಯಾನರ್ಜಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ | ಗೋಮಾಂಸ ಕಳ್ಳಸಾಗಣೆ ಆರೋಪ, ಮುಸ್ಲಿಂ ವ್ಯಕ್ತಿ ಹತ್ಯೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2021ರಲ್ಲಿ ಬಿಎಸ್‌ಎಫ್ ಕಾಯ್ದೆಗೆ ತಿದ್ದುಪಡಿ ತಂದಿತು. ಈ ತಿದ್ದುಪಡಿಯು ಪಂಜಾಬ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಅಂತಾರಾಷ್ಟ್ರೀಯ ಗಡಿಯಿಂದ ಈ ಮುನ್ನ ಇದ್ದ 15 ಕಿ.ಮೀ ಬದಲಿಗೆ 50 ಕಿ.ಮೀ ವ್ಯಾಪ್ತಿಯಲ್ಲಿ ಶೋಧ, ವಶಪಡಿಸಿಕೊಳ್ಳುವಿಕೆ ಮತ್ತು ಬಂಧನ ಮಾಡಲು ಬಿಎಸ್‌ಎಫ್‌ಗೆ ಅಧಿಕಾರ ನೀಡುತ್ತದೆ.
ರಾಜ್ಯದಲ್ಲಿ ಜುಲೈ 8 ರಂದು ಪಂಚಾಯತ್ ಚುನಾವಣೆಯು ನಡಯಲಿದೆ.