- ಈ ಹಿಂದೆ ಕೇಂದ್ರ ಸಚಿವ ರಂಜನ್ ಸಿಂಗ್ ನಿವಾಸಕ್ಕೆ ಬೆಂಕಿ
- ಮೇತೀ ಹಾಗೂ ಕುಕಿ ಸಮುದಾಯಗಳ ತಿಕ್ಕಾಟದಿಂದ ಮಣಿಪುರ ಹಿಂಸಾಚಾರ
ಮಣಿಪುರ ಹಿಂಸಾಚಾರ ಮತ್ತೆ ಭುಗಿಲೇಳುತ್ತಿದೆ. ಇಂಫಾಲ ಪೂರ್ವ ಜಿಲ್ಲೆಯಲ್ಲಿ ಮಣಿಪುರ ಸಚಿವ ಎಲ್.ಸುಸಿಂದ್ರೋ ಅವರ ಖಾಸಗಿ ಗೋದಾಮಿಗೆ ಉದ್ರಿಕ್ತರ ಗುಂಪೊಂದು ಶನಿವಾರ (ಜೂನ್ 24) ನಸುಕಿನ ಜಾವ ಬೆಂಕಿ ಹಚ್ಚಿ ಧ್ವಂಸ ಮಾಡಿರುವ ಘಟನೆ ವರದಿಯಾಗಿದೆ.
ಜಿಲ್ಲೆಯ ಚಿಂಗಾರೆಲ್ ನಗರದಲ್ಲಿ ಘಟನೆ ನಡೆದಿದೆ. ಅದೇ ಜಿಲ್ಲೆಯ ಖುರೈ ನಗರದಲ್ಲಿ ಶುಕ್ರವಾರ ರಾತ್ರಿ ಬಿಜೆಪಿ ನಾಯಕ ಹಾಗೂ ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾಗಿರುವ ಸುಸಿಂದ್ರೋ ಅವರ ನಿವಾಸಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಲಾಯಿತು.
ಭದ್ರತಾ ಪಡೆಗಳು ಮಧ್ಯರಾತ್ರಿಯವರೆಗೆ ಹಲವಾರು ಸುತ್ತಿನ ಅಶ್ರುವಾಯು ಸಿಡಿಮದ್ದುಗಳನ್ನು ಸಿಡಿಸಿ ಉದ್ರಿಕ್ತರನ್ನು ಹಿಮ್ಮೆಟ್ಟಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವರ ಗೋದಾಮಿಗೆ ಬೆಂಕಿ ಹಾಕಿದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಣಿಪುರದಲ್ಲಿನ ಹಿಂಸಾಚಾರ ಸಂಬಂಧ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಕರೆದಿದ್ದ ಸರ್ವಪಕ್ಷಗಳ ಸಭೆಗೂ ಮುನ್ನ ಈ ಘಟನೆ ನಡೆದಿದೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್ ಪ್ರದೇಶದಲ್ಲಿ ಸಚಿವೆ ನೆಮ್ಚಾ ಕಿಪ್ಗೆನ್ ಅವರ ಅಧಿಕೃತ ಕ್ವಾರ್ಟರ್ಸ್‌ಗೆ ಮಣಿಪುರ ಹಿಂಸಾಚಾರದ ಭಾಗವಾಗಿ ಜೂನ್ 14 ರ ರಾತ್ರಿ ಅಪರಿಚಿತ ವ್ಯಕ್ತಿಗಳು ಬೆಂಕಿ ಹಚ್ಚಿದ್ದರು. ಕೇಂದ್ರ ಸಚಿವ ಆರ್.ಕೆ.ರಂಜನ್ ಸಿಂಗ್ ಅವರ ಮನೆಗೆ ಕೂಡ ಬೆಂಕಿ ಹಚ್ಚಿ ದಾಳಿ ನಡೆಸಲಾಗಿತ್ತು.
ಮಣಿಪುರ ಹಿಂಸಾಚಾರವು ತಿಂಗಳಿಂದ ನಡೆಯುತ್ತಿದ್ದು ಮೇತೀ ಮತ್ತು ಕುಕಿ ಬುಡಕಟ್ಟುಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 300 ಮಂದಿ ಗಾಯಗೊಂಡಿದ್ದಾರೆ. ಅನೇಕ ಮನೆಗಳನ್ನು ಸುಟ್ಟುಹಾಕಲಾಗಿದೆ.
ಈ ಸುದ್ದಿ ಓದಿದ್ದೀರಾ? ಗಡಿ ಒಳನುಸುಳಲು ಯತ್ನಿಸಿದ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೇತೀ ಸಮುದಾಯದ ಬೇಡಿಕೆಯನ್ನು ಹತ್ತಿಕ್ಕಲು ಕುಕಿ ಸಮುದಾಯ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ಹಿನ್ನೆಲೆಯಲ್ಲಿ ಮೇ 3ರಂದು ತೀವ್ರ ಸಂಘರ್ಷ ಏರ್ಪಟ್ಟು ಮಣಿಪುರದಲ್ಲಿ ಹಿಂಸಾಚಾರ ರೂಪ ತಾಳಿತು.
ಮಣಿಪುರ ಹಿಂಸಾಚಾರ ತಡೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಾವ ಪ್ರಯತ್ನಗಳನ್ನು ಮಾಡುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.