ಕಳೆದ ಜುಲೈನಲ್ಲಿ ಬಾಂಬೆ ಐಐಟಿಯ ಕ್ಯಾಂಟೀನ್‌ನ ಕೆಲವು ಸ್ಥಳದಲ್ಲಿ ಸಸ್ಯಾಹಾರಿಗಳಿಗೆ ಮಾತ್ರ ಪೋಸ್ಟರ್ ವಿವಾದಕ್ಕೆ ಈಡಾಗಿತ್ತು. ಈಗ ಎರಡು ತಿಂಗಳ ನಂತರ ಬಾಂಬೆ ಐಐಟಿ ಕ್ಯಾಂಟಿನ್ ಸಿಬ್ಬಂದಿಯು ಮೆಸ್‌ನಲ್ಲಿ ಸಸ್ಯಾಹಾರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಟ್ಟಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ.
ಸಂಸ್ಥೆಯ ಅಡುಗೆ ನಿರ್ವಹಣಾ ವಿಭಾಗ ಸಾಮಾನ್ಯ ಕ್ಯಾಂಟೀನ್‌ನಲ್ಲಿ ‘ಸಸ್ಯಾಹಾರ‘ ತಿನ್ನುವವರಿಗೆ ಆರು ಟೇಬಲ್‌ಗಳನ್ನು ನಿಗದಿಪಡಿಸಿದೆ. ಅಡುಗೆ ನಿರ್ವಹಣಾ ವಿಭಾಗವು ಸಸ್ಯಾಹಾರಕ್ಕೆ ಪ್ರತ್ಯೇಕ ಜಾಗ ಮೀಸಲಿಟ್ಟಿರುವ ಬಗ್ಗೆ ಐಐಟಿ ಸಂಸ್ಥೆಗಳಲ್ಲಿ ದಲಿತ ಹಾಗೂ ಶೋಷಿತ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿ ಸಂಘಟನೆ ಅಂಬೇಡ್ಕರ್ ಪೆರಿಯಾರ್ ಫುಲೆ ಸ್ಟಡಿ ಸರ್ಕಲ್(ಎಪಿಪಿಎಸ್‌ಸಿ) ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದೆ.
ಇಮೇಲ್‌ನಲ್ಲಿ ಇರುವ ಮಾಹಿತಿ ಪ್ರಕಾರ, ಎಚ್-12, 13 ಮತ್ತು 14 ರ ಎಲ್ಲ ಮೂರು ಹಾಸ್ಟೆಲ್ ವಾರ್ಡನ್‌ಗಳು ಮತ್ತು ಕೌನ್ಸಿಲ್ ಸದಸ್ಯರೊಂದಿಗೆ ಇತ್ತೀಚಿನ ಸಭೆಯ ನಂತರ, ನಾವು ನಮ್ಮ ಮೆಸ್ ಸೌಲಭ್ಯಗಳ ಕುರಿತು ಪ್ರಮುಖವಾದ ನವೀಕರಣವನ್ನು ಹಂಚಿಕೊಳ್ಳಲು ಬಯಸಿದ್ದೇವೆ. ಎಲ್ಲರಿಗೂ ಆರಾಮದಾಯಕ ಊಟ ನೀಡುವುದು ನಮ್ಮ ಮೆಸ್ ವ್ಯವಸ್ಥೆಯ ಜವಾಬ್ದಾರಿಯಾಗಿದೆ. ಊಟದ ಸಮಯದಲ್ಲಿ ಮಾಂಸಾಹಾರ ಸೇವಿಸದ ಕೆಲವರಿದ್ದಾರೆ. ಅವರ ಆರೋಗ್ಯದ ಹಿತದೃಷ್ಟಿಯಿಂದ ಮೆಸ್‌ನಲ್ಲಿ 6 ಟೇಬಲ್‌ಗಳನ್ನು ಗೊತ್ತುಪಡಿಸುವುದು ಅವಶ್ಯಕವಾಗಿದೆ ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂಬೈ | ಐಐಟಿ ಸಂಸ್ಥೆಯ ಕ್ಯಾಂಟೀನ್ ಗೋಡೆಗಳ ಮೇಲೆ ‘ಸಸ್ಯಾಹಾರಿಗಳಿಗೆ ಮಾತ್ರ’ ಎಂಬ ಪೋಸ್ಟರ್
ಆ ಸ್ಥಳದಲ್ಲಿ ಯಾರು ಬೇಕಾದರೂ ಸಸ್ಯಾಹಾರವನ್ನು ಮಾತ್ರ ಸೇವಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯು ಆರಾಮದಾಯಕ ಮತ್ತು ಆಹ್ಲಾದಕರ ಭೋಜನದ ಅನುಭವವನ್ನು ಆನಂದಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿಯೆ ಆರು ಟೇಬಲ್‌ಗಳನ್ನು ಮಾತ್ರ ಗೊತ್ತುಪಡಿಸಲು ನಿರ್ಧರಿಸಲಾಗಿದೆ. ಪ್ರತಿಯೊಬ್ಬರೂ ಶಾಂತಿಯುತ ವಾತಾವರಣದಲ್ಲಿ ತಮ್ಮ ಊಟವನ್ನು ಆನಂದಿಸಲು ಈ ಉಪಕ್ರಮವನ್ನು ಬೆಂಬಲಿಸಲು ನಾವು ಎಲ್ಲ ವಿದ್ಯಾರ್ಥಿಗಳನ್ನು ವಿನಂತಿಸುತ್ತೇವೆ ಎಂದು ಮೇಲ್‌ನಲ್ಲಿ ತಿಳಿಸಲಾಗಿದೆ.
ಈ ವರ್ಷದ ಜುಲೈನಲ್ಲಿ ಬಾಂಬೆ ಐಐಟಿ ಸಂಸ್ಥೆಯಲ್ಲಿ ‘ಸಸ್ಯಾಹಾರಿ ಮಾತ್ರ’ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದ ಭುಗಿಲೆದ್ದಿತ್ತು. ಹಾಸ್ಟೆಲ್‌ನ ಪ್ರಧಾನ ಕಾರ್ಯದರ್ಶಿಗೆ ಆರ್‌ಟಿಐಗಳು ಇಮೇಲ್ ಮೂಲಕ ಸಂಸ್ಥೆಯಲ್ಲಿ ಆಹಾರ ಪ್ರತ್ಯೇಕತೆಗೆ ಯಾವುದೇ ನೀತಿಯಿಲ್ಲ ಎಂದು ಬಹಿರಂಗಪಡಿಸಿದ್ದರೂ, ಕೆಲವರು ಮಾಂಸಾಹಾರ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಲು ಹಾಗೂ ‘ಸಸ್ಯಾಹಾರಿಗಳು ಮಾತ್ರ’ ಎಂಬ ನಾಮಫಲಕ ಅಂಟಿಸಿ ತಾರತಮ್ಯ ಮನಸ್ಥಿತಿ ಪ್ರದರ್ಶಿಸಿದ್ದಾರೆ” ಎಂದು ಎಪಿಪಿಎಸ್‌ಸಿ ಖಂಡಿಸಿತ್ತು.
ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಯ ನಂತರ ಪೋಸ್ಟರ್ “ಅನಧಿಕೃತ” ಎಂದು ನಿರ್ವಾಹಕರು ಹೇಳಿದ್ದರು. ಇಂತಹ ಘಟನೆ ಮರುಕಳಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಈಗ ಸಂಸ್ಥೆಯೆ ಖುದ್ದಾಗಿ ಸಸ್ಯಾಹಾರಿಗಳಿಗೆ ಪ್ರತ್ಯೇಕ ಸ್ಥಳ ಮೀಸಲಿಟ್ಟಿರುವ ಸಂಸ್ಥೆಯ ಕ್ರಮವನ್ನು ಎಪಿಪಿಎಸ್‌ಸಿ ಪ್ರತಿಗಾಮಿ ಎಂದು ವಿರೋಧ ವ್ಯಕ್ತಪಡಿಸಿದೆ. ಸಂಸ್ಥೆಯು ಅಂತಿಮವಾಗಿ ಆಹಾರ ಕ್ರಮದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿ ವ್ಯವಸ್ಥೆಯಲ್ಲಿ ಭೇದಭಾವ ನೀತಿಯ ಪರವಾಗಿರುವುದನ್ನು ಬಹಿರಂಗಗೊಳಿಸಿದೆ ಎಂದು ಖಂಡಿಸಿದೆ.