ಹೊಸದಾಗಿ ನಿರ್ಮಾಣವಾಗಿದ್ದ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿರುವ ಘಟನೆ ಗುಜರಾತ್ ರಾಜ್ಯದ ತಾಪಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮಿಂಡೋಲಾ ನದಿಯ ಮೇಲೆ ನಿರ್ಮಿಸಲಾಗಿದ್ದ ಸೇತುವೆಯು ಇನ್ನೂ ಉದ್ಘಾಟನೆಯಾಗಿರಲಿಲ್ಲ. ವಾಲೋಡ್ ತಾಲ್ಲೂಕಿನ ಮಾಯ್‌ಪುರ್ ಗ್ರಾಮ ಹಾಗೂ ವ್ಯಾರಾ ತಾಲ್ಲೂಕಿನ ದೇಹ್‌ಗಮಾ ಗ್ರಾಮಗಳ ನಡುವಿನ ಕೊಂಡಿಯಾಗಿದ್ದ ಸೇತುವೆಯು ಮಧ್ಯಭಾಗವು ಮಿಂಡೋಲಾ ನದಿಯೊಳಗೆ ಮುರಿದು ಬಿದ್ದಿದೆ.
ತಾಪಿ ಜಿಲ್ಲಾಧಿಕಾರಿ ವಿಪಿನ್ ಗಾರ್ಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಸೇತುವೆಯು ಇನ್ನೂ ಉದ್ಘಾಟನೆಯಾಗದ ಕಾರಣ ಸಂಚಾರಕ್ಕೆ ಮುಕ್ತಗೊಳಿಸಿರಲಿಲ್ಲ. ಸೇತುವೆಯ ಕೆಲವು ಭಾಗಗಳು ಕುಸಿದುಬಿದ್ದಿವೆ. ಈ ಘಟನೆಯ ತನಿಖೆಗೆ ಆದೇಶ ನೀಡಲಾಗಿದ್ದು, ಅದರ ನಿರ್ಮಾಣಕ್ಕೆ ಬಳಸಿದ್ದ ವಸ್ತುಗಳ ಗುಣಮಟ್ಟದ ಬಗ್ಗೆಯೂ ಪರಿಶೀಲನೆ ನಡೆಸಲು ಸೂಚಿಸಲಾಗಿದೆ” ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷಗಿರಿ; ಸರ್ಕಾರಕ್ಕೆ ಇರಲಿ ಎಚ್ಚರ
ಸ್ಥಳೀಯರು ಹೇಳುವ ಪ್ರಕಾರ, ಇದೇ ಜಾಗದಲ್ಲಿ ಹಿಂದೆಯೂ ಸೇತುವೆಯೊಂದು ಇತ್ತು. ಆದರೆ, ಅದು ಮಳೆಗಾಲದಲ್ಲಿ ನೀರಿನಲ್ಲಿ ಮುಳುಗಡೆಯಾಗುತ್ತಿತ್ತು. ಅದರಿಂದ ಜನ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಕ್ಕೆ ಹಲವು ಬಾರಿ ಜನ ದೂರು ನೀಡಿದ ಮೇಲೆ, 2021ರಲ್ಲಿ ಹೊಸ ಸೇತುವೆಯ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಸೇತುವೆ ನಿರ್ಮಾಣ ಕಾರ್ಯ ಸಂಪೂರ್ಣಗೊಂಡಿದ್ದು, ಉದ್ಘಾಟನೆ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲು ತೀರ್ಮಾನಿಸಲಾಗಿತ್ತು. ಅಷ್ಟರಲ್ಲಿಯೇ ಅನಾಹುತ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊರ್ಬಿ ದುರಂತ
ಗುಜರಾತ್ ರಾಜ್ಯದ ಮೊರ್ಬಿ ಜಿಲ್ಲೆಯಲ್ಲಿ 2022ರ ಅಕ್ಟೋಬರ್ 30ರಂದು ತೂಗುಸೇತುವೆ ಕುಸಿದು 135ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಸೇತುವೆಯ ದುರಸ್ತಿ ಮತ್ತು ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲಾಗಿತ್ತು. ಸರ್ಕಾರ ಮತ್ತು ಖಾಸಗಿ ಸಂಸ್ಥೆಯ ತಪ್ಪಿನಿಂದ ದುರಂತ ಸಂಭವಿಸಿದೆ ಎನ್ನುವ ಆರೋಪಗಳು ವ್ಯಕ್ತವಾಗಿದ್ದವು.
ಇದೀಗ ಹೊಸದಾಗಿ ನಿರ್ಮಿಸಲಾಗಿದ್ದ ಸೇತುವೆಯು ಉದ್ಘಾಟನೆಗೂ ಮುನ್ನವೇ ಮುರಿದು ಬಿದ್ದಿರುವುದು ‘ಗುಜರಾತ್ ಮಾಡೆಲ್’ನ ಫಲ ಎಂದು ನೆಟ್ಟಿಗರು ವ್ಯಂಗ್ಯ ಮಾಡುತ್ತಿದ್ದಾರೆ.