ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕಿಯ ಸೂಚನೆ ಮೇರೆಗೆ ಸಹಪಾಠಿಗಳಿಂದ ಹೊಡೆತ ತಿಂದ ಏಳು ವರ್ಷದ ಮುಸ್ಲಿಂ ಬಾಲಕನ ಗುರುತು ಬಹಿರಂಗಪಡಿಸಿದ್ದಕ್ಕಾಗಿ ಮುಜಾಫರನಗರ ಪೊಲೀಸರು ಇಂದು ಆಲ್ಟ್ ನ್ಯೂಸ್ ಸಹ-ಸ್ಥಾಪಕ ಮೊಹಮ್ಮದ್ ಝುಬೇರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವಿಷ್ಣುದತ್ತ್ ಎಂಬ ವ್ಯಕ್ತಿ ದಾಖಲಿಸಿದ್ದ ದೂರಿನ ಅನ್ವಯ ಜುಬೇರ್ ಅವರ ವಿರುದ್ಧ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 74 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು (ಎನ್‌ಸಿಪಿಸಿಆರ್) 2 ನೇ ತರಗತಿಯ ವಿದ್ಯಾರ್ಥಿಯ ಮೇಲಿನ ಹಲ್ಲೆಯ ವಿಡಿಯೋವನ್ನು ಹಂಚಿಕೊಳ್ಳಬಾರದೆಂದು ಹಾಗೂ ಬಾಲಕನ ಗುರುತನ್ನು ಬಹಿರಂಗಪಡಿಸುವುದರ ವಿರುದ್ಧ ಎಚ್ಚರಿಕೆ ನೀಡಿತ್ತು. ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು “ಮಕ್ಕಳ ಗುರುತನ್ನು ಬಹಿರಂಗಪಡಿಸುವ ಮೂಲಕ ಅಪರಾಧದ ಭಾಗವಾಗಬೇಡಿ” ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ: ಕಳ್ಳತನದ ಶಂಕೆ ಮೇಲೆ ನಾಲ್ವರು ದಲಿತ ಬಾಲಕರನ್ನು ಮರಕ್ಕೆ ನೇತುಹಾಕಿ ಅಮಾನುಷ ಹಲ್ಲೆ
ಈ ಘಟನೆಯ ವಿಡಿಯೋವನ್ನು ಶೇರ್ ಮಾಡದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಸೂಚಿಸಿದ ನಂತರ ತಾವು ಈ ವೀಡಿಯೋ ತೆಗೆದುಹಾಕಿದ್ದಾಗಿ ಜುಬೇರ್ ಹೇಳಿದ್ದಾರೆ.
ಕಾನೂನಿನ ಪ್ರಕಾರ ಯಾವುದೇ ಸಂತ್ರಸ್ತ ಮಕ್ಕಳು ಅಥವಾ ಅಪರಾಧಗಳಿಗೆ ಸಾಕ್ಷಿಯಾದ ಮಕ್ಕಳ ಹೆಸರುಗಳನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಅಪರಾಧ ಸಾಬೀತಾದವರಿಗೆ ಆರು ತಿಂಗಳ ತನಕ ಜೈಲು ಶಿಕ್ಷೆ ಅಥವಾ ರೂ 2 ಲಕ್ಷ ತನಕ ದಂಡ ವಿಧಿಸಬಹುದಾಗಿದೆ.
ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಜುಬೇರ್ ಅವರು ಬಾಲಕನ ಗುರುತು ಬಹಿರಂಗಪಡಿಸಿದ್ದಾರೆಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ತಮ್ಮನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂದು ಝುಬೇರ್ ಆರೋಪಿಸಿದ್ದಾರೆ. “ಈ ನಿರ್ದಿಷ್ಟ ವಿಡಿಯೋವನ್ನು ಹಲವು ಸುದ್ದಿ ಸಂಸ್ಥೆಗಳ ಸಹಿತ ಹಲವರು ಪೋಸ್ಟ್ ಮಾಡಿದ್ದರೂ ನನ್ನ ಹೆಸರು ಮಾತ್ರ ಎಫ್‌ಐಆರ್‌ನಲ್ಲಿದೆ” ಎಂದು ಜುಬೇರ್ ತಿಳಿಸಿದ್ದಾರೆ.