ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿಯಾಗುವುದಕ್ಕೆ ಕಾರಣವಾಗಿರುವ ಆರೋಪಿ ಹಾಗೂ ಸಂತ್ರಸ್ತೆ ನಡುವೆ ರಾಜಿ ಸಂಧಾನ ನಡೆಸಲು ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು ಪ್ರಯತ್ನಿಸುತ್ತಿದ್ದಾರೆ.
ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ ತಮ್ಮ ಪುತ್ರಿಯ ಗರ್ಭಪಾತಕ್ಕೆ ಅನುಮತಿ ನೀಡಿ ಎಂದು ಸಂತ್ರಸ್ತೆಯ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಸಮೀರ್ ಜೆ ದವೆ ‘ಸಂತ್ರಸ್ತೆ’ ಹಾಗೂ ಅತ್ಯಾಚಾರಿಯ ನಡುವೆ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ.
ಸಂತ್ರಸ್ತೆಯು ಏಳು ತಿಂಗಳ ಗರ್ಭಿಣಿಯಾಗಿದ್ದು, 24 ವಾರಗಳವರೆಗೆ ಭ್ರೂಣವನ್ನು ತೆಗೆಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ಏಳು ತಿಂಗಳ ನಂತರ ಗರ್ಭಪಾತಕ್ಕೆ ಅವಕಾಶವಿಲ್ಲ. ವಿಶೇಷ ಸಂದರ್ಭಗಳಲ್ಲಿ ಮಾತ್ರ 24 ತಿಂಗಳ ನಂತರ ಗರ್ಭಪಾತ ಮಾಡಿಸಬಹುದು.
ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ ನ್ಯಾಯಾಧೀಶ ಸಮೀರ್ ಜೆ ದವೆ, ಪ್ರಸ್ತುತ ಆರೋಪಿ ಎಲ್ಲಿದ್ದಾನೆ? ಅತ್ಯಾಚಾರ ಮಾಡಿದ ಆರೋಪಿಯ ನಡುವೆ ರಾಜಿ ಮಾಡುವ ಅವಕಾಶವಿದೆಯೆ? ಎಂದು ಆರೋಪಿ ಪರ ವಕೀಲರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಆರೋಪಿ ಪರ ವಕೀಲ ಸಿಕಂದರ್ ಸೈಯದ್, ಸದ್ಯಕ್ಕೆ ಹುಡುಗ ಒಪ್ಪುತ್ತಿಲ್ಲ ಎರಡೂ ಕಡೆಯವರು ಒಪ್ಪಿದರೆ ಮೂವರ ಜೀವ ಉಳಿಯುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ದವೆ, “ಸರಿ, ನಾನು ಆತನನ್ನು ವಿಚಾರಣೆಗೆ ಕರೆಯುತ್ತೇನೆ. ಆತ ಬಂಧಿತನಾಗಿದ್ದರೆ ನ್ಯಾಯಾಲಯಕ್ಕೆ ಕರೆಸಿ. ನಾನು ಆತನಿಗೆ ರಾಜಿಯ ಸಾಧ್ಯತೆಗಳ ಬಗ್ಗೆ ಕೇಳಿ ಖಚಿತಪಡಿಸಿಕೊಳ್ಳುತ್ತೇನೆ. ಸದ್ಯ ನಾನು ರಾಜಿಯ ಸಾಧ್ಯತೆ ಬಗ್ಗೆಯಷ್ಟೆ ಮಾತನಾಡುತ್ತಿದ್ದೇನೆ. ಅವರಿಬ್ಬರು ಒಟ್ಟಾಗಿ ಬದುಕಲು ಒಪ್ಪಿದರೆ ಹಲವು ಸರ್ಕಾರಿ ಯೋಜನೆಗಳಡಿ ಸೌಲಭ್ಯ ಪಡೆಯಬಹುದು’’ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತಕ್ಕೆ ಅನುಮತಿ ಕೇಳಿದ್ದಕ್ಕೆ ಗುಜರಾತ್ ಹೈ ನ್ಯಾಯಾಧೀಶರು `ಮನುಸ್ಮೃತಿ ಓದಿ’ ಎಂದರು!
ಮನುಸ್ಮೃತಿ ಓದಿ ಎಂದಿದ್ದ ಇದೇ ನ್ಯಾಯಾಧೀಶರು
ಇದೇ ನ್ಯಾಯಾಧೀಶರು ಜೂನ್ 7ರಂದು ಇದೇ ಪ್ರಕರಣದ ಸಲುವಾಗಿ ವಿಚಾರಣೆ ನಡೆಸಿ ಮನುಸ್ಮೃತಿ ಓದುವಂತೆ ಅಭಿಪ್ರಾಯ ಮಂಡಿಸಿದ್ದರು.
ಅಪ್ರಾಪ್ತೆ ಮೇಲೆ ಅತ್ಯಾಚಾರವಾಗಿ 7 ತಿಂಗಳ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತ ಮಾಡಬಹುದೇ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯ ಕೇಳಿದಾಗ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರು ಮನುಸ್ಮೃತಿ ಓದುವಂತೆ ಹೇಳಿಕೆ ನೀಡಿದ್ದರು.
“ನಾವು 21 ನೇ ಶತಮಾನದಲ್ಲಿ ಬದುಕುತ್ತಿದ್ದೇವೆ. ನಿಮ್ಮ ತಾಯಿ ಅಥವಾ ಅಜ್ಜಿಯನ್ನು ಕೇಳಿ ಮದುವೆಯಾಗಲು ಗರಿಷ್ಠ ವಯಸ್ಸು 14-15. ಒಂದಷ್ಟು ವರ್ಷಗಳ ಹಿಂದೆ ಹೆಣ್ಣುಮಕ್ಕಳು 14-15ನೇ ವಯಸ್ಸಿಗೆ ಮದುವೆಯಾಗುತ್ತಿದ್ದರು, 17ನೇ ವಯಸ್ಸಿಗೆ ಮಗುವಿಗೆ ಜನ್ಮ ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಬೇಗ ಋತುಮತಿಯಾಗುತ್ತಿದ್ದಾರೆ. ಈ ಬಗ್ಗೆ ನೀವು ಒಮ್ಮೆ ಮನುಸ್ಮೃತಿ ಓದಿ” ಎಂದು ನ್ಯಾಯಮೂರ್ತಿ ಸಮೀರ್ ಜೆ ದವೆ ಹೇಳಿದ್ದರು.
ಅತ್ಯಾಚಾರ ಸಂತ್ರಸ್ತೆಯ ತಂದೆಯ ವಕೀಲರು ಈ ಪ್ರಕರಣದಲ್ಲಿ ಬಾಲಕಿಗೆ ಇನ್ನೂ ಚಿಕ್ಕ ವಯಸ್ಸು ಈ ದೃಷ್ಟಿಯಿಂದ ಗರ್ಭಪಾತಕ್ಕೆ ಅನುಮತಿ ನೀಡಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
ರಾಜ್‌ಕೋಟ್‌ನ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ತುರ್ತು ಆಧಾರದ ಮೇಲೆ ವೈದ್ಯರ ಸಮಿತಿಯ ಮೂಲಕ ಅತ್ಯಾಚಾರ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸುವಂತೆ ನ್ಯಾಯಾಲಯವು ಆದೇಶವನ್ನು ನೀಡಿತ್ತು.
ಈ ಹಿಂದೆ ಭಾರತದಲ್ಲಿ, ಕೆಲವು ಸಂದರ್ಭಗಳಲ್ಲಿ 20 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ ನೀಡಲಾಗಿತ್ತು, ಆದರೆ 2021 ರಲ್ಲಿ ಈ ಕಾನೂನಿನ ತಿದ್ದುಪಡಿಯ ನಂತರ, ಸಮಯದ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲಾಯಿತು. ಆದರೂ, ಕೆಲವು ವಿಶೇಷ ಪ್ರಕರಣಗಳಲ್ಲಿ, 24 ವಾರಗಳ ನಂತರವೂ ಗರ್ಭಪಾತಕ್ಕೆ ನ್ಯಾಯಾಲಯದಿಂದ ಅನುಮತಿ ತೆಗೆದುಕೊಳ್ಳಬಹುದು.