ನೇಮಕಾತಿ ವೇಳೆ ದೈಹಿಕ ಪರೀಕ್ಷೆ ಹೆಸರಿನಲ್ಲಿ ಮಹಿಳೆಯರ ಎದೆಯ ಅಳತೆ ಮಾಡುವುದು ಕ್ರೂರ, ಅತಿರೇಕ ಹಾಗೂ ಖಾಸಗಿತನದ ಉಲ್ಲಂಘನೆ ಎಂದು ರಾಜಸ್ಥಾನ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಅರಣ್ಯ ರಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಮೂವರು ಮಹಿಳೆಯರನ್ನು ದೈಹಿಕ ದಕ್ಷತೆ ಪರೀಕ್ಷೆ ವೇಳೆ ಸ್ತನಗಳ ಗಾತ್ರದ ಆಧಾರದ ಮೇಲೆ ಅನರ್ಹಗೊಳಿಸಲಾಗಿತ್ತು. ಇದನ್ನು ನ್ಯಾಯಾಲಯದಲ್ಲಿ ಮಹಿಳೆಯರು ಪ್ರಶ್ನಿಸಿದ್ದರು.
ನೇಮಕಾತಿ ಪ್ರಕ್ರಿಯೆ ಈಗಾಗಲೇ ಮುಕ್ತಾಯಗೊಂಡಿದೆ ಎಂದು ಉಲ್ಲೇಖಿಸಿ ಈ “ಅವಮಾನಕರ” ಅರ್ಹತಾ ಮಾನದಂಡವನ್ನು ಮರುಮೌಲ್ಯ ಮಾಪನ ಮಾಡುವಂತೆ ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಮೆಹ್ತಾ ನೇತೃತ್ವದ ಏಕ ಪೀಠ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಅರ್ಜಿದಾರರಾದ ಓಂ ಕನ್ವರ್, ವಂದನಾ ಕನ್ವರ್ ಮತ್ತು ಮಂಜು ಕನ್ವರ್ ಅವರು ದೈಹಿಕ ದಕ್ಷತೆ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದರೂ ಎದೆಯ ಅಳತೆಯ ಆಧಾರದ ಮೇಲೆ ತಮ್ಮ ಅನರ್ಹತೆಯನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ: ದಲಿತ ಸರಪಂಚರಿಗೆ ಸ್ವಾತಂತ್ರ್ಯ ದಿನದ ಧ್ವಜಾರೋಹಣಕ್ಕೆ ಶಾಲಾ ಪ್ರಾಂಶುಪಾಲರಿಂದ ತಡೆ
“ರಾಜ್ಯದಲ್ಲಿ ಅರಣ್ಯ ಇಲಾಖೆಯ ಹುದ್ದೆಗಳು ಸೇರಿ ಯಾವುದೇ ಹುದ್ದೆಗಳ ನೇಮಕಾತಿ ವೇಳೆ ಮಹಿಳೆಯರ ಎದೆ ಅಳತೆ ಮಾಡುವುದು ಕ್ರೂರತನಕ್ಕೆ ಸಮನಾದುದು. ಈ ಮಾನದಂಡವು ಸಂವಿಧಾನದಲ್ಲಿ ಹೆಣ್ಣು ಮಕ್ಕಳಿಗೆ ನೀಡಿದ ಖಾಸಗಿ ಹಕ್ಕುಗಳು ಹಾಗೂ ಅವರ ಘನತೆಗೆ ಧಕ್ಕೆ ಉಂಟು ಮಾಡುತ್ತದೆ. ಹಾಗಾಗಿ ನೇಮಕಾತಿ ವೇಳೆ ದೈಹಿಕ ಪರೀಕ್ಷೆ ಮಾಡುವಾಗ ಮಹಿಳೆಯರ ಘನತೆಗೆ ಧಕ್ಕೆ ತರದ ಕ್ರಮಗಳನ್ನು ಅನುಸರಿಸಬೇಕು” ಎಂದು ನ್ಯಾಯಮೂರ್ತಿ ತಿಳಿಸಿದ್ದಾರೆ.
“ಸಂವಿಧಾನದ 14 ಮತ್ತು 21ನೇ ಪರಿಚ್ಛೇದದ ಪ್ರಕಾರ ಯಾವುದೇ ಕಾರಣಕ್ಕೂ ಮಹಿಳೆಯರ ಘನತೆಗೆ ಧಕ್ಕೆಯಾಗಬಾರದು. ಹಾಗೆಯೇ, ಅವರ ಖಾಸಗಿತನಕ್ಕೆ ಕುಂದುಂಟಾಗಬಾರದು. ಇದನ್ನು ಗಮನದಲ್ಲಿ ಇಟ್ಟುಕೊಂಡು ನೇಮಕಾತಿ ನೆಡಸಬೇಕು. ಇಂತಹ ಕ್ರಮಗಳು ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ” ಎಂದು ನ್ಯಾಯಮೂರ್ತಿ ದಿನೇಶ್ ಮೆಹ್ತಾ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಕಾರ್ಯದರ್ಶಿ ಮತ್ತು ಸಿಬ್ಬಂದಿ ಇಲಾಖೆಯ ಕಾರ್ಯದರ್ಶಿಗೆ ನೀಡಲಾಗಿದೆ. ನ್ಯಾಯಾಲಯದ ನಿರ್ದೇಶನವು ಈ ಮಾನದಂಡವನ್ನು ಮರು ಮೌಲ್ಯಮಾಪನ ಮಾಡಲು ಮತ್ತು ಅರ್ಹತೆಯನ್ನು ನಿರ್ಧರಿಸಲು ಪರ್ಯಾಯ ವಿಧಾನಗಳನ್ನು ಅನ್ವೇಷಿಸಲು ತಜ್ಞರ ಅಭಿಪ್ರಾಯಗಳನ್ನು ಪಡೆಯುವ ವಿವರಗಳನ್ನು ಒಳಗೊಂಡಿದೆ.