- ಗುಜರಾತ್ ಜಿಲ್ಲೆಗಳಲ್ಲಿ 6 ಗಂಟೆಗಳಲ್ಲೇ 300 ಮಿ.ಮೀ ಮಳೆ
- ಗಿರ್ ಸೋಮನಾಥ್ನ ಸೂತ್ರಪದ ತಾಲೂಕಿನಲ್ಲಿ ಅತ್ಯಧಿಕ ಮಳೆ
ಗುಜರಾತ್ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ಪ್ರದೇಶಗಳು ಜಲಾವೃತವಾಗಿವೆ. ಕಳೆದ ಕೆಲವು ಗಂಟೆಗಳಲ್ಲಿ ರಾಜ್ಯದಲ್ಲಿ 300 ಮಿ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ಬುಧವಾರ (ಜುಲೈ 19) ಹೇಳಿದ್ದಾರೆ.
ಮಂಗಳವಾರದಿಂದ ರಾಜ್ಯದಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ರಾಜ್ಕೋಟ್, ಸೂರತ್ ಮತ್ತು ಗಿರ್ ಸೋಮನಾಥ್ ಜಿಲ್ಲೆಗಳಲ್ಲಿ ಸುರಿದ ಅಧಿಕ ಮಳೆಯಿಂದ ಇಲ್ಲಿನ ಪ್ರದೇಶಗಳು ಮುಳುಗಡೆಯಾಗಿವೆ.
ಜಿಲ್ಲೆಗಳ ಹಲವು ಮನೆಗಳು, ರಸ್ತೆಗಳು, ವಾಹನಗಳು ಜಲಾವೃತವಾಗಿವೆ. ಪ್ರವಾಹದಲ್ಲಿ ಕಾರುಗಳು ಮುಳುಗಡೆಯಾಗಿವೆ. ಅನೇಕ ಮಳಿಗೆಗಳು ಬಾಗಿಲು ಹಾಕಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು ಹಿಮಾಚಲ ಪ್ರದೇಶ, ದೆಹಲಿ ನಂತರ ಈಗ ಗುಜರಾತ್ ರಾಜ್ಯದಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಳುಗಡೆಯಾದ ಪ್ರದೇಶಗಳಿಂದ 70 ಜನರನ್ನು ತೆರವುಗೊಳಿಸಲಾಗಿದೆ.
ಗುಜರಾತ್ ಭಾರೀ ಮಳೆಯಿಂದ ರಾಜ್ಯದ ಅನೇಕ ಪ್ರದೇಶಗಳಲ್ಲಿ ಪ್ರವಾಹ ತಲೆದೋರಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಗುಜರಾತ್ ರಾಜ್ಯದಲ್ಲಿ 6 ಗಂಟೆಗಳಲ್ಲಿ ಸುಮಾರು 300 ಮಿ.ಮೀ ದಾಖಲೆಯ ಮಳೆಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ನಾಲ್ಕು ದಿನಗಳ ಕಾಲ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಧೋರಾಜಿಯಲ್ಲಿ 6 ಗಂಟೆಗಳಲ್ಲಿ ಸುರಿದ 9.5 ಇಂಚುಗಳಷ್ಟು ಮಳೆಯಿಂದಾಗಿ ನಗರವೇ ಜಲಾವೃತವಾಗಿದೆ.
ಗುಜರಾತ್ ರಾಜ್ಯದ ಸೂರತ್ ಜಿಲ್ಲೆಯಲ್ಲೂ ವ್ಯಾಪಕ ಮಳೆ ಬಿದ್ದಿದೆ. ಉಕೈ ಅಣೆಕಟ್ಟೆಯ ನೀರಿನ ಮಟ್ಟ 4 ಅಡಿಗಳಷ್ಟು ಹೆಚ್ಚಾಗಿದೆ. ಇದರಿಂದಾಗಿ ತಾಪಿ ನದಿ ಉಕ್ಕಿ ಹರಿಯುತ್ತಿದೆ. ನದಿಪಾತ್ರದ ಹಲವು ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಆಸಕ್ತಿ ಹೊಂದಿಲ್ಲ: ವಿಪಕ್ಷಗಳ ಸಭೆಯಲ್ಲಿ ಖರ್ಗೆ ಹೇಳಿಕೆ
ಗಿರ್ ಸೋಮನಾಥ್ ಜಿಲ್ಲೆಯ ಸೂತ್ರಪದ ತಾಲೂಕಿನಲ್ಲಿ ರಾಜ್ಯದಲ್ಲೇ ಅತ್ಯಧಿಕ ಪ್ರಮಾಣದ ಮಳೆಯಾಗಿದೆ. ಇಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ 14 ಗಂಟೆಗಳ ಅವಧಿಯಲ್ಲಿ 345 ಮಿ.ಮೀ ಮಳೆಯಾಗಿದೆ. ರಾಜ್ಕೋಟ್ ಜಿಲ್ಲೆಯಲ್ಲಿ 14 ಗಂಟೆಗಳಲ್ಲಿ 250 ಮಿ.ಮೀ., ಕೇವಲ 2 ಗಂಟೆಗಳಲ್ಲಿ 145 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ತುರ್ತು ನಿರ್ವಹಣಾ ಕೇಂದ್ರ (ಎಸ್ಇಒಸಿ) ಹೇಳಿದೆ.
ಗುಜರಾತ್ ರಾಜ್ಯದಲ್ಲಿನ ಭಾರೀ ಮಳೆಯ ಪರಿಣಾಮ 206ರಲ್ಲಿ 43 ಜಲಾಶಯಗಳ ನೀರಿನ ಮಟ್ಟ ಮೀರಿದ್ದು ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಇತರ ಜಲಾಶಯಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.