ಮದರಸಾದಿಂದ ಮನೆಗೆ ಹಿಂತಿರುಗುತ್ತಿದ್ದ 13 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಅಮಾನುಷವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶ ಲಖೀಂಪುರ ಖೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ (ಅಕ್ಟೋಬರ್ 8) ನಡೆದಿದೆ.
ಲಖೀಂಪುರ ಖೇರಿ ಜಿಲ್ಲೆಯ ಟಿಕುನಿಯಾ ಗ್ರಾಮದ ನಿವಾಸಿಯಾದ ವಿದ್ಯಾರ್ಥಿನಿಯ ಶವ ಸ್ವಗ್ರಾಮದಿಂದ ಸುಮಾರು 5 ಕಿಮೀ ದೂರದಲ್ಲಿರುವ ರಾಮುವಾಪುರದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದೆ. ವಿದ್ಯಾರ್ಥಿನಿಯನ್ನು ಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಬಾಲಕಿಯ ಕಣ್ಣುಗಳಿಗೆ ಚುಚ್ಚಲಾಗಿದ್ದು, ಆಕೆಯ ತಲೆ ಹಾಗೂ ಬಾಯಿಯ ಮೇಲೆ ತೀವ್ರವಾದ ಹಲ್ಲೆಗಳಾಗಿದೆ. ಆಕೆಯ ಮೂಗಿನ ಹೊಳ್ಳೆಗಳಿಗೆ ಮರಳು ತುಂಬಿ ಅಮಾನುಷವಾಗಿ ಹಿಂಸಿಸಲಾಗಿರುವುದು ಮೃತದೇಹದಲ್ಲಿ ಕಂಡು ಬಂದಿದೆ.
“ಭಾನುವಾರ(ಅಕ್ಟೋಬರ್ 8) ನಮ್ಮ ಮಗಳು ಸಾಮಾನ್ಯ ತರಗತಿಗಳಿಗಾಗಿ ಮದರಸಾಗೆ ಹೋಗಿದ್ದಳು. ಆದರೆ ದಿನನಿತ್ಯದಂತೆ ಮಧ್ಯಾಹ್ನ ಹಿಂತಿರುಗಲಿಲ್ಲ. ಅಂದು ಸಂಜೆ ಮಗಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದೆವು. ನನ್ನ ಗ್ರಾಮದಿಂದ ಸುಮಾರು 5 ಕಿಮೀ ದೂರದಲ್ಲಿರುವ ರಾಮುವಾಪುರದ ಕಬ್ಬಿನ ಗದ್ದೆಯಲ್ಲಿ ಸೋಮವಾರ (ಅಕ್ಟೋಬರ್ 9) ಆಕೆಯ ಶವ ಪತ್ತೆಯಾಗಿದೆ” ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿಯ ತವರು ಗುಜರಾತ್‌ಗೆ ಅತೀ ಹೆಚ್ಚು ಕ್ರೀಡಾ ಅನುದಾನ: ಏಷ್ಯನ್ ಕ್ರೀಡಾಕೂಟದಲ್ಲಿ ಶೂನ್ಯ ಪದಕ
“ಸ್ಥಳದಲ್ಲಿ 13 ವರ್ಷದ ಬಾಲಕಿಯ ಶಾಲಾ ಬ್ಯಾಗ್ ಮತ್ತು ಆಕೆಯ ವಸ್ತುಗಳು ಪತ್ತೆಯಾಗಿವೆ. ಆಕೆಯ ಕುಟುಂಬದವರು ದೂರು ಸಲ್ಲಿಸಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ” ಎಂದು ಉತ್ತರ ಪ್ರದೇಶ ಲಖೀಂಪುರ ಖೇರಿಯ ಪೊಲೀಸ್ ವರಿಷ್ಠಾಧಿಕಾರಿ ಗಣೇಶ್ ಪ್ರಸಾದ್ ಸಹಾ ತಿಳಿಸಿದ್ದಾರೆ.
“ನಮ್ಮ ಮೊಮ್ಮಗಳ ಇಡೀ ದೇಹದಲ್ಲಿ ದೊಡ್ಡ ಗಾಯಗಳಾಗಿವೆ. ದಾಳಿಕೋರರು ಆಕೆಯ ದೇಹದ ಪ್ರತಿಯೊಂದು ಭಾಗಕ್ಕೂ ಗಾಯಗಳನ್ನು ಮಾಡಿದ್ದಾರೆ. ಇದು ಚಿತ್ರಹಿಂಸೆ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಎಂದು ಸಾಮಾನ್ಯ ವ್ಯಕ್ತಿ ಕೂಡ ಹೇಳಬಹುದು. ಇಂತಹ ಅಪರಾಧವನ್ನು ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಮಾತ್ರ ಮಾಡಬಹುದು” ಎಂದು ಹುಡುಗಿಯ ಅಜ್ಜ ಹೇಳಿದ್ದಾರೆ.
“ಪೊಲೀಸರು ಸಮಯಕ್ಕೆ ಸರಿಯಾಗಿ ತಮ್ಮ ಕೆಲಸ ಮಾಡಿದ್ದರೆ ಕಾಣೆಯಾದ ನಮ್ಮ ಮಗಳನ್ನು ಉಳಿಸಬಹುದಿತ್ತು. ಭಾನುವಾರ ಸಂಜೆ 4 ಗಂಟೆಗೆ ನಾವು ಮೊದಲು ಪೊಲೀಸರನ್ನು ಸಂಪರ್ಕಿಸಿದ್ದೆವು. ಆಕೆ ಸಂಜೆಯೊಳಗೆ ಮನೆಗೆ ಮರಳಬಹುದು ಎಂದು ಪೊಲೀಸರು ದೂರು ದಾಖಲಿಸಿಕೊಳ್ಳಲಿಲ್ಲ. ನಾವು ಮತ್ತೆ ಸಂಜೆ 7 ಗಂಟೆಗೆ ಪೊಲೀಸ್ ಠಾಣೆಗೆ ಹೋದೆವು. ಆದರೆ ಅವರು ಮತ್ತೆ ನಮಗೆ ಕಾಯಲು ಹೇಳಿದರು. ರಾತ್ರಿ 11.35ಕ್ಕೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಅಲ್ಲಿಗೆ ಹೋಗಿ ಪೊಲೀಸರ ಮೇಲೆ ಒತ್ತಡ ಹೇರಿದಾಗ ಅವರು ಕಾಣೆಯಾದ ವರದಿಯನ್ನು ದಾಖಲಿಸಿದರು. ಆದರೆ ಅವರು ನಮ್ಮ ಮಗಳನ್ನು ಹುಡುಕಲು ಏನನ್ನೂ ಮಾಡಲಿಲ್ಲ” ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.
“ಸಂತ್ರಸ್ತರ ಕುಟುಂಬ ಸದಸ್ಯರು ಪೊಲೀಸರ ಮೇಲೆ ಯಾವುದೇ ಆರೋಪ ಮಾಡಿಲ್ಲ. ಆಕೆಯ ದೇಹದ ಮೇಲೆ ಗಾಯದ ಗುರುತುಗಳಿದ್ದು, ಸಾವಿನ ಕಾರಣ ವೈದ್ಯಕೀಯ ವರದಿಯಿಂದ ತಿಳಿಯಲಿದೆ. ಹಂತಕರನ್ನು ಗುರುತಿಸಲು ಮತ್ತು ಅವರನ್ನು ಬಂಧಿಸಲು ನಾವು ಅಪರಾಧ ವಿಭಾಗ, ವಿಶೇಷ ಕಾರ್ಯಾಚರಣೆ ಮತ್ತು ಕಣ್ಗಾವಲುಗಳ ಮೂರು ತಂಡಗಳನ್ನು ರಚಿಸಿದ್ದೇವೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ಗಣೇಶ್ ಪ್ರಸಾದ್ ಸಹಾ ತಿಳಿಸಿದ್ದಾರೆ.