- ಶೀಘ್ರ ಟಿಎಂಸಿ ನಾಯಕ ಆನಂದ ಅವರ ಸ್ಥಾನ ತೆರವು ಎಂದ ಟಿಎಂಸಿ
- ಮಹಿಳೆಯರು ಬಿಜೆಪಿ ಸೇರಿದ ಆರೋಪದಲ್ಲಿ ಈ ಕೃತ್ಯ ಎಂದು ಆರೋಪ
ಪಶ್ಚಿಮ ಬಂಗಾಳದ ಬಲೂರ್ಘಾಟ್ನಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಎಸಗಿದ ಅಮಾನವೀಯ ಕೃತ್ಯದ ಆರೋಪದಲ್ಲಿ ಪೊಲೀಸರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.
ಮೂರು ಬುಡಕಟ್ಟು ಮಹಿಳೆಯರಿಗೆ ಬಲೂರ್ಘಾಟ್ನಲ್ಲಿ ತೆವಳುವ ಹಾಗೂ ದೀರ್ಘದಂಡ ಪ್ರದಕ್ಷಿಣೆ ಹಾಕುವಂತೆ ಮಾಡಲಾಗಿದೆ. ಇದಾಗಿ ಏಳು ದಿನಗಳ ನಂತರ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಇತರ ಸೆಕ್ಷನ್ಗಳಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರು ಪರಿಶಿಷ್ಟ ಜಾತಿ ಅಥವಾ ಪಂಗಡದ ಸದಸ್ಯರೊಬ್ಬರನ್ನು ಉದ್ದೇಶಪೂರಿತ ಅವಮಾನಿಸುವ ಕೃತ್ಯದಲ್ಲಿ ತೊಡಗಿದ್ದರು. ಬಲೂರ್ಘಾಟ್ನ ಬಿಜೆಪಿ ಕಚೇರಿಯಿಂದ ಟಿಎಂಸಿ ಕಚೇರಿವರೆಗೆ ಬುಡಕಟ್ಟು ಮಹಿಳೆಯರಾದ ಮಾರ್ಟಿನಾ ಕಿಸ್ಕು, ಥಾಕ್ರನ್ ಸೊರೇನ್ ಮತ್ತು ಸಿಯುಲಿ ಮರ್ಡಿ ಅವರು ತೆವಳುತ್ತಿರುವ 27 ಸೆಕಂಡುಗಳ ದೃಶ್ಯಾವಳಿ ಎಲ್ಲೆಡೆ ಹರಿದಾಡಿದೆ. ಮಹಿಳೆಯರು ಬಿಜೆಪಿ ಸೇರುತ್ತಿರುವ ಹಿನ್ನೆಲೆಯಲ್ಲಿ ಪ್ರಾಯಶ್ಚಿತ ರೂಪದಲ್ಲಿ ಟಿಎಂಸಿ ನಾಯಕ ಹಾಗೂ ಇತರರು ಕೃತ್ಯ ಎಸಗಲು ಹೇಳಿದ್ಧಾರೆ ಎಂದು ಆರೋಪಿಸಲಾಗಿದೆ.
ಜಿಲ್ಲಾ ಮಹಿಳಾ ತೃಣಮೂಲ ಕಾಂಗ್ರೆಸ್ನ ಮಾಜಿ ಸದಸ್ಯೆ ಪರದೀಪ್ತ ಚಕ್ರವರ್ತಿ ಅವರ ಆಪ್ತ ಬಿಸ್ವಂತ್ ದಾಸ್ ಮತ್ತು ಬಲೂರ್ಘಾಟ್ ಪಟ್ಟಣ ತೃಣಮೂಲ ಯುವ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಆನಂದ ರಾಯ್ರನ್ನು ಬಂಧಿಸಲಾಗಿದೆ.
“ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 505 (ಕಾನೂನು ಬಾಹಿರ ಚಟುವಟಿಕೆಗೆ ಉತ್ತೇಜನ), 509 (ಮಹಿಳೆಯ ಘನತೆಗೆ ಅಪಮಾನ) ಮತ್ತು ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಏಪ್ರಿಲ್ 17ಕ್ಕೆ ಅವರನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು” ಎಂದು ಬಲೂರ್ಘಾಟ್ ಜಿಲ್ಲಾ ನ್ಯಾಯಾಲಯದ ಸರ್ಕಾರದ ಪರ ವಕೀಲ ಸಾಜಲ್ ಘೋಷ್ ಹೇಳಿದರು.
ಘಟನೆ ವರದಿಯಾದ ಒಂದು ದಿನದ ನಂತರ ಪರದೀಪ್ತ ಚಕ್ರವರ್ತಿ ಅವರ ಸ್ಥಾನ ತೆರವುಗೊಳಿಸಿ ಸ್ನೇಹಲತಾ ಹೆಂಬ್ರಾಮ್ ಅವರನ್ನು ಟಿಎಂಸಿ ನೇಮಿಸಿದೆ. ಬುಡಕಟ್ಟು ಮಹಿಳೆಯರ ಮೇಲೆ ಅಮಾನವೀಯ ಕೃತ್ಯ ಎಸಗಿದ್ದರ ಹಿಂದೆ ಸ್ಥಳೀಯ ಟಿಎಂಸಿ ನಾಯಕತ್ವ ಕೈವಾಡವಿದೆ. ಮಹಿಳೆ ಸಿಯುಲಿ ಅವರ ಪತಿ ರಾಜೇನ್ ಅವರು 2013 ರಿಂದ ಟಿಎಂಸಿ ಸದಸ್ಯರು. ಟಿಎಂಸಿ ನಾಯಕರ ಒತ್ತಡದಿಂದ ಹೀಗೆ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ಸರ್ನೇಮ್ ಪ್ರಕರಣ; ಆದೇಶವನ್ನು ಏಪ್ರಿಲ್ 20ಕ್ಕೆ ಕಾಯ್ದಿರಿಸಿದ ನ್ಯಾಯಾಲಯ
“ಬಂಧಿತ ಟಿಎಂಸಿ ನಾಯಕ ಆನಂದ ರಾಯ್ ಅವರನ್ನು ಶೀಘ್ರವೇ ಪಕ್ಷದ ಹುದ್ದೆಯಿಂದ ಅಮಾನತು ಮಾಡಲಾಗುವುದು. ತಪ್ಪಿತಸ್ಥರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ” ಎಂದು ಜಿಲ್ಲಾ ಟಿಎಂಸಿ ಮುಖ್ಯಸ್ಥ ಮೃಣಾಲ್ ಸರ್ಕಾರ್ ಹೇಳಿದ್ದಾರೆ.
ಏಪ್ರಿಲ್ 6ರಂದು ಕಾರ್ಯಕ್ರಮವೊಂದರಲ್ಲಿ ಮಹಿಳೆಯರು ಸೇರಿದಂತೆ ಸುಮಾರು 100 ಮಂದಿ ಬಿಜೆಪಿಗೆ ಸೇರಿದ್ದರು. ಒಂದು ದಿನದ ನಂತರ ಮೂವರು ಬುಡಕಟ್ಟು ಮಹಿಳೆಯರು ಸ್ಥಳೀಯ ಬಿಜೆಪಿ ಕಚೇರಿಯಿಂದ ಟಿಎಂಸಿ ಜಿಲ್ಲಾ ಕಚೇರಿಗೆ ತೆವಳುತ್ತ ಸಾಗಿದ್ದರು.