ಛತ್ರಪತಿ ಶಿವಾಜಿಯನ್ನು ಮೆರೆಸುತ್ತಾ, ಔರಂಗಜೇಬ್ನನ್ನು ಖಳನಾಯಕನನ್ನಾಗಿಸುತ್ತಾ ಬರುತ್ತಿರುವುದರ ಹಿಂದೆ ಒಂದು ವ್ಯವಸ್ಥಿತ ತಂತ್ರ ಹಾಗೂ ಉದ್ದೇಶ ಇದೆ; ಔರಂಗಜೇಬ್ ಹೆಸರಿನಲ್ಲಿ ಮುಸ್ಲಿಮರನ್ನು ಪ್ರಚೋದಿಸಿ ಹಿಂಸಾಚಾರ ಉಂಟುಮಾಡುವ, ಅದನ್ನು ತಮ್ಮ ಕೋಮು ಧ್ರುವೀಕರಣಕ್ಕೆ ಬಳಸಿಕೊಳ್ಳುವ ಷಡ್ಯಂತ್ರಗಳು ಅಲ್ಲಿ ನಡೆಯುತ್ತಲೇ ಇವೆ ಎನ್ನುವ ಆರೋಪಗಳಿವೆ. ಅದಕ್ಕೆ ಮುಂದಿನ ವರ್ಷ ನಡೆಯಲಿರುವ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ತಳುಕು ಹಾಕಿಕೊಂಡಿದೆ.
ಮೊಘಲ್ ಸಾಮ್ರಾಟ ಔರಂಗಜೇಬ್ ಗೋರಿಯಿಂದೆದ್ದು ಬಂದಿದ್ದಾನೆ. ಮಹಾರಾಷ್ಟ್ರದ ರಾಜಕೀಯದಲ್ಲಿ ಸದ್ಯ ಈತನದ್ದೇ ಸದ್ದು. ಔರಂಗಜೇಬನ ಚಿತ್ರಗಳನ್ನು ವಾಟ್ಸಾಪ್ ಸ್ಟೇಟಸ್ಗಳಲ್ಲಿ ಹಂಚಿಕೊಂಡರು, ಔರಂಗಜೇಬ್ನನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊಗಳಿದರು ಎನ್ನುವ ನೆಪದಲ್ಲಿ ಮಹಾರಾಷ್ಟ್ರದ ಹಲವು ನಗರ, ಪಟ್ಟಣಗಳಲ್ಲಿ ಕೋಮು ದ್ವೇಷ ಭುಗಿಲೆದ್ದಿದೆ. ಕೊಲ್ಹಾಪುರ, ನಾಸಿಕ್, ಅಹಮದ್ನಗರ್ ಮುಂತಾದೆಡೆ ಹಲವು ಅನಪೇಕ್ಷಿತ ಘಟನೆಗಳು ನಡೆದಿವೆ.
ಮಹಾರಾಷ್ಟ್ರ ಕೋಮು ಸಾಮರಸ್ಯಕ್ಕೆ ಹೆಸರಾದ ರಾಜ್ಯ. ಅಲ್ಲಿ ಕೋಮು ದ್ವೇಷದ ಘಟನೆಗಳು ವಿರಳ. ಅಂಥ ರಾಜ್ಯದಲ್ಲಿ ಈಗ ಹಿಂಸೆ ತಾಂಡವವಾಡುತ್ತಿದ್ದು, ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.
ಇದೆಲ್ಲ ಶುರುವಾಗಿದ್ದು, ಕಳೆದ ವರ್ಷದ ಅಂತ್ಯದಲ್ಲಿ; ಹಿಂದೂ ಜನಾಕ್ರೋಶ್ ಮೋರ್ಚಾ ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ವಿರುದ್ಧ ಹಲವು ನಗರಗಳಲ್ಲಿ ರ್ಯಾಲಿಗಳನ್ನು ನಡೆಸಿತ್ತು. ಇದಾದ ನಂತರ, ಫೆಬ್ರವರಿಯಲ್ಲಿ ಔರಂಗಾಬಾದ್ ಅನ್ನು ಛತ್ರಪತಿ ಸಂಭಾಜಿನಗರ್ ಎಂದು ಮರುನಾಮಕರಣ ಮಾಡಲಾಯಿತು. ಅದನ್ನು ಮರಾಠಿಗರ ಅಸ್ಮಿತೆಯ ಪ್ರಶ್ನೆಯನ್ನಾಗಿಸಲು ಬಿಜೆಪಿ ಪ್ರಯತ್ನಿಸತೊಡಗಿತು. ಮರಾಠಿಗರ ಐಕಾನ್ ಶಿವಾಜಿಯ ಮಗ ಸಂಭಾಜಿಯನ್ನು ಔರಂಗಜೇಬ್ ಕೊಂದಿದ್ದ ಎನ್ನುವ ಚರಿತ್ರೆಯ ತುಣುಕನ್ನು ಆಧರಿಸಿ ರಾಜಕೀಯ ಮುಖಂಡರ ಹೇಳಿಕೆ, ದ್ವೇಷ ಭಾಷಣಗಳು ಹಿಂಸಾಚಾರಕ್ಕೆ ಕಾರಣವಾದವು. ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರದ ಶಿವಸೇನೆ-ಬಿಜೆಪಿ ಸಮ್ಮಿಶ್ರ ಸರ್ಕಾರವೇ ಇದರ ಹಿಂದಿದೆ ಎನ್ನುವ ಆರೋಪಗಳು ಕೂಡ ವ್ಯಕ್ತವಾದವು.
ಔರಂಗಜೇಬ್ ಮಹಾರಾಷ್ಟ್ರದಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸುವ ಪ್ರಕ್ರಿಯೆಯ ಒಂದು ಭಾಗ ಈ ಮರುನಾಮಕರಣ ಎಂಬಂತೆ ಶಿವಸೇನೆ-ಬಿಜೆಪಿ ಸರ್ಕಾರ ಬಿಂಬಿಸಿತು. ಅದರ ಬೆನ್ನಲ್ಲೇ ಮೇ ತಿಂಗಳಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಜಯಂತಿಯನ್ನು ರಾಜ್ಯದಾದ್ಯಂತ ಆಚರಿಸಲಾಯಿತು. ಹೀಗೆ ಒಂದಿಲ್ಲೊಂದು ರೀತಿ ಛತ್ರಪತಿ ಶಿವಾಜಿಯನ್ನು ಮೆರೆಸುತ್ತಾ, ಔರಂಗಜೇಬ್ನನ್ನು ಖಳನಾಯಕನನ್ನಾಗಿಸುತ್ತಾ ಬರುತ್ತಿರುವುದರ ಹಿಂದೆ ಒಂದು ವ್ಯವಸ್ಥಿತ ತಂತ್ರ ಹಾಗೂ ಉದ್ದೇಶ ಇದೆ; ಅದುವೇ ಮುಂದಿನ ವರ್ಷ ನಡೆಯಲಿರುವ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ.
ವಿಚಿತ್ರ ಎಂದರೆ, ಔರಂಗಜೇಬ್ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಅಂಥ ಸದಭಿಪ್ರಾಯವೇ ಇಲ್ಲ. ಮೊದಲನೆಯದಾಗಿ, ಆತ ಅಂಥ ಒಳ್ಳೆಯ ರಾಜನಾಗಿರಲಿಲ್ಲ. ಎರಡನೆಯದಾಗಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಔರಂಗಜೇಬ್ ಮುಸ್ಲಿಂ ಸಮುದಾಯಕ್ಕೆ ಪ್ರಸ್ತುತವೇ ಅಲ್ಲ ಎಂದು ಆ ಸಮುದಾಯದ ಮುಖಂಡರು ಹಲವು ಬಾರಿ ಬಹಿರಂಗವಾಗಿಯೇ ಹೇಳಿದ್ದಾರೆ. ಎನ್ಸಿಪಿ ಶಾಸಕ ಹಸನ್ ಮುಶ್ರೀಫ್ ಕೂಡ ‘ಔರಂಗಜೇಬ್ ಯಾವತ್ತೂ ನಮ್ಮ ಹೀರೋ ಅಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಆದರೂ, ಔರಂಗಜೇಬ್ ಹೆಸರಿನಲ್ಲಿ ಮುಸ್ಲಿಮರನ್ನು ಪ್ರಚೋದಿಸಿ ಹಿಂಸಾಚಾರ ಉಂಟುಮಾಡುವ, ಅದನ್ನು ತಮ್ಮ ಕೋಮು ಧ್ರುವೀಕರಣಕ್ಕೆ ಬಳಸಿಕೊಳ್ಳುವ ಷಡ್ಯಂತ್ರಗಳು ಅಲ್ಲಿ ನಡೆಯುತ್ತಲೇ ಇವೆ.
ಈ ಸುದ್ದಿ ಓದಿದ್ದೀರಾ: ಸುಳ್ಳು ಸುದ್ದಿಗೆ, ವದಂತಿಗೆ ಕಡಿವಾಣ ಹಾಕಲು ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ಅದರಲ್ಲೂ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸಲಾಗುತ್ತಿದೆ. ಔರಂಗಜೇಬ್ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ಮುಸ್ಲಿಮರನ್ನು ಬಂಧಿಸುವ ಸರ್ಕಾರ, ಬಂದ್ಗೆ ಕರೆ ಕೊಡುವ, ಹಿಂಸಾಚಾರಕ್ಕೆ ಕಾರಣವಾಗುವ, ದ್ವೇಷ ಭಾಷಣ ಮಾಡುವ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ವಿರುದ್ಧ ಮಾತ್ರ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎನ್ನುವ ಅಸಮಾಧಾನ ವ್ಯಾಪಕವಾಗಿದೆ. ಮಹಾರಾಷ್ಟ್ರದ ಗೃಹಮಂತ್ರಿ ದೇವೇಂದ್ರ ಫಡ್ನವೀಸ್ ಮುಸ್ಲಿಂ ಸಮುದಾಯ ಕುರಿತು ‘ಔರಂಗಜೇಬನ ಮಕ್ಕಳು’ ಎಂದು ಟೀಕಿಸಿದ್ದರು. ಅಪ್ರಾಪ್ತರು ಎನ್ನುವುದನ್ನೂ ನೋಡದೇ ಇದಕ್ಕೆ ಕಾರಣರಾದ ಎಲ್ಲರನ್ನೂ ಹಿಡಿದು ಸದೆಬಡಿಯುವುದಾಗಿ ಅವರು ಘೋಷಿಸಿದ್ದರು. ಕೆಲವು ದಿನಗಳ ನಂತರ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಹೇಳಿಕೆ ನೀಡಿರುವ ಫಡ್ನವೀಸ್, ‘ಭಾರತದಲ್ಲಿನ ಮುಸ್ಲಿಮರು ಔರಂಗಜೇಬನ ವಂಶಸ್ಥರಲ್ಲ. ಔರಂಗಜೇಬ್ ಹಾಗೂ ಆತನ ವಂಶಸ್ಥರು ಹೊರಗಿನಿಂದ ಬಂದವರು’ ಎಂದು ತೇಪೆ ಹಚ್ಚುವ ಮಾತುಗಳನ್ನು ಆಡಿದ್ದಾರೆ.
ಇದು ಅವರ ಅಂತಿಮ ಮಾತು ಎಂದೇನೂ ಇಲ್ಲ. 2024ರ ಅಕ್ಟೋಬರ್ನಲ್ಲಿ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೆ ಇಂಥ ಹೇಳಿಕೆ, ನಿರಾಕರಣೆ, ಪ್ರತಿ ಹೇಳಿಕೆಗಳ ಮೂಲಕ ಔರಂಗಜೇಬ್ನನ್ನು ಜೀವಂತವಾಗಿಡುವುದು ಬಿಜೆಪಿಯ ಲೆಕ್ಕಾಚಾರವಾಗಿರುವಂತಿದೆ. ಮುಸ್ಲಿಂ ಜನಸಂಖ್ಯೆ ಇಲ್ಲದ ನಗರ ಪಟ್ಟಣಗಳಲ್ಲಿಯೂ, ಸೌಹಾರ್ದತೆಗೆ ಹೆಸರಾಗಿದ್ದ ಶಾಹು ಮಹಾರಾಜರ ಕೊಲ್ಹಾಪುರದಂಥ ನಗರದಲ್ಲಿಯೂ ಹಿಂಸಾಚಾರ ಭುಗಿಲೆದ್ದಿರುವುದು ನೋಡಿದರೆ, ಬಿಜೆಪಿ ತನ್ನ ತಂತ್ರಗಾರಿಕೆಯಲ್ಲಿ ಆರಂಭಿಕ ಯಶಸ್ಸನ್ನು ಕಂಡಂತಿದೆ. ಇದನ್ನು ಈಗಲೇ ಸಮರ್ಥವಾಗಿ ಎದುರಿಸದಿದ್ದರೆ, ಮಹಾರಾಷ್ಟ್ರದ ಪರಿಸ್ಥಿತಿ ಹದಗೆಡಲಿದೆ.