ಜಿ20 ಶೃಂಗಸಭೆಯ ವೇಳೆ ಚರ್ಚೆಗೊಳಗಾಗಿದ್ದ ದೇಶದ ಹೆಸರು ಬದಲಾವಣೆ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ದೇಶದ ಹೆಸರನ್ನು ‘ಇಂಡಿಯಾ’ ಅಥವಾ ‘ಭಾರತ್’ ಎಂದು ಬಳಸುವ ಚರ್ಚೆಗಳ ನಡುವೆಯೇ ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ (ಎನ್‌ಸಿಇಆರ್‌ಟಿ) ಶಾಲಾ ಪಠ್ಯಕ್ರಮಗಳಲ್ಲಿ ಇಂಡಿಯಾ ಬದಲು ಭಾರತ್ ಅನ್ನು ಬಳಸುವ ನಿರ್ಧಾರಕ್ಕೆ ಉನ್ನತ ಮಟ್ಟದ ಸಮಿತಿಯು ಅನುಮೋದನೆ ನೀಡಿದೆ.
‘ಎನ್‌ಸಿಇಆರ್‌ಟಿ ರಚಿಸಿರುವ ಸಾಮಾಜಿಕ ವಿಜ್ಞಾನಗಳ ಉನ್ನತ ಮಟ್ಟದ ಸಮಿತಿಯು, ಮುಂದಿನ ಪಠ್ಯಪುಸ್ತಕಗಳಲ್ಲಿ ‘ಇಂಡಿಯಾ’ ಹೆಸರನ್ನು ಇನ್ನು ಮುಂದೆ ‘ಭಾರತ್’ ಎಂದು ಬದಲಿಸಲು ಮತ್ತು ಪ್ರಾಚೀನ ಇತಿಹಾಸದ ಬದಲಿಗೆ ‘ಶಾಸ್ತ್ರೀಯ ಇತಿಹಾಸ(Classical History)’ ಪರಿಚಯಿಸಲು ಅವಿರೋಧವಾಗಿ ಶಿಫಾರಸು ಮಾಡಿದೆ’ ಎಂದು ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಬುಧವಾರ ಹೇಳಿಕೆ ನೀಡಿದ್ದಾರೆ.
NCERT Committee recommends replacing India with ‘Bharat’ in all school textbooks. pic.twitter.com/prFn1s5wGZ
— ANI (@ANI) October 25, 2023
‘ಭಾರತ್ ಎಂಬುದು ಹಳೆಯ ಹೆಸರು. ಭಾರತ ಎಂಬ ಹೆಸರಿನ ಬಳಕೆಯು 7,000 ವರ್ಷಗಳಷ್ಟು ಹಳೆಯದು. ಅಂದರೆ ವಿಷ್ಣು ಪುರಾಣದಂತಹ ಪ್ರಾಚೀನ ಗ್ರಂಥಗಳಲ್ಲೂ ಕೂಡ ಅದರ ಉಲ್ಲೇಖವಿದೆ. ಹಾಗಾಗಿ, ಹೊಸ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಂಬಂಧಿಸಿ ನೇಮಕ ಮಾಡಲಾಗಿದ್ದ ಏಳು ಸದಸ್ಯರ ಸಮಿತಿಯು ಸರ್ವಾನುಮತದಿಂದ ಈ ಶಿಫಾರಸು ಮಾಡಿದೆ’ ಎಂದು ಐಸಾಕ್ ಹೇಳಿದ್ದಾರೆ.
“ಇಂಡಿಯಾ ಎಂಬ ಪದವನ್ನು ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯ ನಂತರ ಮತ್ತು 1757ರಲ್ಲಿ ಪ್ಲಾಸಿ ಯುದ್ಧದ ನಂತರ ಮಾತ್ರ ಬಳಸಲಾರಂಭಿಸಿತು. ಆದ್ದರಿಂದ, ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಲ್ಲಿ ಭಾರತ್ ಎಂಬ ಹೆಸರನ್ನು ಬಳಸಬೇಕೆಂದು ಸಮಿತಿಯು ಶಿಫಾರಸು ಮಾಡಿದೆ ಎಂದು ಐಸಾಕ್ ಹೇಳಿಕೆ ನೀಡಿದ್ದಾರೆ.
ಈಗ ಅನುಮೋದನೆ ನೀಡಿರುವ ಏಳು ಮಂದಿ ಸದಸ್ಯರ ಉನ್ನತ ಮಟ್ಟದ ಸಮಿತಿಯ ಸದಸ್ಯರಲ್ಲಿ ಗಾಯಕ ಶಂಕರ್ ಮಹದೇವ, ಇನ್ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ, ಆರೆಸ್ಸೆಸ್ ಸಂಯೋಜಿತ ಸಂಸ್ಕೃತ ಭಾರತಿಯ ಚಮು ಕೃಷ್ಣ ಶಾಸ್ತ್ರಿ, ಪ್ರಧಾನಿಯ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಬಿಬೇಕ್ ದೆಬ್ರಾಯ್ ಮುಂತಾದವರು ಇದ್ದಾರೆ.
🚨 NCERT panel recommends replacing ‘India’ with ‘Bharat’ in school textbooks. pic.twitter.com/7TBBmlWwzD
— Indian Tech & Infra (@IndianTechGuide) October 25, 2023
‘ಜಿ 20’ ಗಣ್ಯರಿಗೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಔತಣಕೂಟಕ್ಕೆ ನೀಡಲಾಗಿದ್ದ ಆಹ್ವಾನ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಉಲ್ಲೇಖಿಸಲಾಗಿತ್ತು. ಈ ಆಹ್ವಾನ ಪತ್ರಿಕೆಯ ಫೋಟೋ ವೈರಲ್ ಆದ ಬೆನ್ನಲ್ಲೇ, ಕೇಂದ್ರ ಸರ್ಕಾರವು ದೇಶದ ಹೆಸರನ್ನು ‘ಭಾರತ’ ಎಂದು ಬದಲಿಸಲು ಹೊರಟಿದೆ ಎಂಬ ವಿವಾದ ಭುಗಿಲೆದ್ದಿತ್ತು.
ಅಲ್ಲದೇ, ಆ ಬಳಿಕ ನವದೆಹಲಿಯಲ್ಲಿ ನಡೆದ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ನಾಮಫಲಕದಲ್ಲಿ ‘ಇಂಡಿಯಾ’ದ ಬದಲಿಗೆ ‘ಭಾರತ್’ ಎಂದು ಬರೆಯಲಾಗಿತ್ತು. ಇದು ವಿವಾದದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿತ್ತು.
#WATCH | On NCERT panel recommendation of replacing ‘India’ with ‘Bharat’ in school textbooks, Karnataka Deputy CM DK Shivakumar says, “Why are we saying the Reserve Bank of India, Indian Administrative Service and Indian Foreign Service? In our passports, we have the Republic of… pic.twitter.com/HROiNblTAF
— ANI (@ANI) October 25, 2023
ಇತ್ತ ವಿರೋಧ ಪಕ್ಷದಳ ಮೈತ್ರಿಕೂಟಗಳು ಯುಪಿಎ ಬದಲಾಗಿ ‘ಐಎನ್‌ಡಿಐಎ'(INDIA) ಎಂದು ಹೆಸರು ಬದಲಾವಣೆ ಮಾಡಿದ ಕಾರಣಕ್ಕೆ ಭಯಪಟ್ಟುಕೊಂಡು ಪ್ರಧಾನಿ ದೇಶದ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ಮೈತ್ರಿಕೂಟದ ನಾಯಕರು ಲೇವಡಿ ಮಾಡಿದ್ದರು.
ದೇಶದ ಹೆಸರನ್ನು ‘ಭಾರತ’ ಎಂದು ಅಧಿಕೃತಗೊಳಿಸಿ, ಸಂವಿಧಾನದಿಂದ ‘ಇಂಡಿಯಾ’ ಪದವನ್ನು ಕೈಬಿಡುವ ಯಾವುದೇ ಉದ್ದೇಶವಿಲ್ಲ. ಈ ಕುರಿತು ಬಂದ ವರದಿಗಳು ಕೇವಲ ಊಹಾಪೋಹವಷ್ಟೇ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದರು. ಈಗ ಈ ವಿವಾದ ಎನ್‌ಸಿಇಆರ್‌ಟಿಯ ನಿರ್ಧಾರದಿಂದ ಮತ್ತೊಮ್ಮೆ ಭುಗಿಲೇಳುವ ಲಕ್ಷಣಗಳು ಗೋಚರಿಸುತ್ತಿದೆ.