ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಪ್ರಮಾಣ ವಚನ ಸ್ವೀಕರಿಸಿರುವುದರಿಂದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರಿಗೆ ಕಷ್ಟದ ದಿನಗಳು ಶುರುವಾಗಿದ್ದು, ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಪ್ರಕ್ರಿಯೆಯ ಆರಂಭ ಎಂದು ಶಿವಸೇನಾ (ಯುಟಿಬಿ) ರಾಜ್ಯಸಭೆಯ ಸದಸ್ಯ ಸಂಜಯ್ ರಾವುತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷಗಳನ್ನು ಒಡೆದು ಸರ್ಕಾರ ರಚಿಸುವ ಕುತಂತ್ರವನ್ನು ಮಹಾರಾಷ್ಟ್ರ ಜನರು ಧೀರ್ಘ ಕಾಲದವರೆಗೆ ಸಹಿಸುವುದಿಲ್ಲ. ರಾಜ್ಯದ ರಾಜಕೀಯವನ್ನು ಸಂಪೂರ್ಣವಾಗಿ ಹಾಳುಮಾಡಬೇಕೆಂದು ಕೆಲವರು ದೃಢವಾಗಿ ನಿರ್ಧರಿಸಿದ್ದಾರೆ. ಆದರೆ ಹಾಳು ಮಾಡುವವರೆ ತಾವೇ ಮುಳುಗುತ್ತಾರೆಂದು ತಿಳಿದಿಲ್ಲ” ಎಂದು ಸಂಜಯ್ ರಾವುತ್ ಆಕ್ರೋಶ ವ್ಯಕ್ತಪಡಿಸಿದರು.
“ನಾನು ಶರದ್ ಪವಾರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು“ನಾನು ಬಲಶಾಲಿ. ನಮಗೆ ಜನರ ಬೆಂಬಲವಿದೆ. ನಾವು ಉದ್ಧವ್ ಠಾಕ್ರೆ ಅವರೊಂದಿಗೆ ಮತ್ತೆ ಎಲ್ಲವನ್ನೂ ಮರುನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ” ಎಂದು ತಿಳಿಸಿದರು.
‘ರಾಜ್ಯದ ರಾಜಕೀಯವನ್ನು ಸಂಪೂರ್ಣವಾಗಿ ಹಾಳುಮಾಡಬೇಕೆಂದು ಕೆಲವರು ದೃಢವಾಗಿ ನಿರ್ಧರಿಸಿದ್ದಾರೆ. ಅವರ ಆಯ್ಕೆಯ ಮಾರ್ಗದಲ್ಲಿಅವರು ಸಾಗಲಿ’ಎಂದು ಅಜಿತ್ ಪವಾರ್, ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಬಿಜೆಪಿಯನ್ನು ಗಮನದಲ್ಲಿರಿಸಿಕೊಂಡು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಂಡಾಯ ನನಗೆ ಹೊಸದಲ್ಲ, ಮತ್ತೆ ಪಕ್ಷ ಸಂಘಟಿಸುತ್ತೇನೆ; ಅಜಿತ್ ನಡೆಗೆ ಶರದ್ ಪವಾರ್ ಪ್ರತಿಕ್ರಿಯೆ
ಎನ್‌ಸಿಪಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್‌ಸಿಪಿಯ ಒಂಭತ್ತು ಶಾಸಕರಿಗೆ ಪಕ್ಷದಿಂದ ಅಧಿಕೃತ ಬೆಂಬಲ ಇಲ್ಲ ಎಂದು ಎನ್‌ಸಿಪಿ ವಕ್ತಾರ ಮಹೇಶ್ ತಾಪಸೆ ಹೇಳಿದ್ದಾರೆ.
ರಾಜ್ಯದ ಜನತೆ ಪಕ್ಷದ ರಾಷ್ಟ್ರೀಯ ನಾಯಕ ಶರದ್ ಪವಾರ್ ಅವರ ಜೊತೆಗಿದ್ದಾರೆ. ಪ್ರಮಾಣ ವಚನ ಸಮಾರಂಭವು ‘ಆಪರೇಷನ್ ಕಮಲ’ದ ಭಾಗವಷ್ಟೇ. ಪ್ರಮಾಣ ವಚನ ಸ್ವೀಕರಿಸಿದ್ದು ಶಾಸಕರ ಸ್ವಂತ ನಿರ್ಧಾರವೇ ಹೊರತು ಎನ್‌ಸಿಪಿಯ ನಿರ್ಧಾರವಲ್ಲ” ಎಂದು ತಿಳಿಸಿದ್ದಾರೆ.