ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ‘ಬೈ ಮಿಸ್ಟೇಕ್’ ರಚನೆಯಾಗಿದೆ. ಆ ಸರ್ಕಾರ ಯಾವಾಗ ಬೇಕಾದರೂ ಬೀಳಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ‘ಇದು ಹತಾಶೆಯ ಹೇಳಿಕೆ’ ಎಂದಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ಖರ್ಗೆ, “ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನಾದೇಶವಿಲ್ಲ. ಇದು ಅಲ್ಪಸಂಖ್ಯಾತ ಸರ್ಕಾರ. ಇದು ಯಾವಾಗ ಬೇಕಾದರೂ ಪತನವಾಗಬಹುದು” ಎಂದು ಹೇಳಿದರು.
“ದೇಶವನ್ನು ಬಲಪಡಿಸಲು ವಿಪಕ್ಷಗಳ ಕಡೆಯಿಂದ ಸಂಪೂರ್ಣ ಸಹಕಾರ ನೀಡುತ್ತೇವೆ. ಸರ್ಕಾರ ಮುಂದುವರೆಯಬೇಕು. ದೇಶವನ್ನು ಬಲಪಡಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಬಯಸುತ್ತೇವೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಮಾತ್ರ ಗೆದಿದ್ದು, ಜೆಡಿಯು, ಜೆಡಿಎಸ್, ಟಿಡಿಪಿ ಹಾಗೂ ಇತರ ಪಕ್ಷಗಳ ಬೆಂಬಲದಿಂದ ಮೋದಿ ಸರ್ಕಾರ ರಚಿಸಿದ್ದಾರೆ. ಅವರ ಸರ್ಕಾರ ಅಭದ್ರವಾಗಿದೆ” ಎಂದು ಖರ್ಗೆ ಹೇಳಿದ್ದಾರೆ.
ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್, “ಖರ್ಗೆ ಹತಾಶೆಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಅವರು ಚುನಾವಣೆಯ ಸಮಯದಲ್ಲಿ ‘ಇಂಡಿಯಾ’ ಮೈತ್ರಿಕೂಟ 25 ಸ್ಥಾನ ಗೆಲ್ಲುವ ಬಗ್ಗೆ ಮಾತನಾಡಿದ್ದರು. ಆದರೆ, ಅವರು 230 ಸ್ಥಾನಗಳಿಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.
“ಕಾಂಗ್ರೆಸ್‌ಗೆ ತನ್ನದೇ ಆದ ಸಮಸ್ಯೆಗಳಿವೆ. ಎಐಸಿಸಿ ಅಧ್ಯಕ್ಷರು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ತಮ್ಮ ನಿಲುವಿನ ಅರಿವಿದ್ದರೂ, ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಮತ್ತೊಬ್ಬ ಬಿಜೆಪಿ ಸಂಸದ ಹೇಳಿದ್ದಾರೆ.