ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್, ಇಂದಿಗೂ ಯಡಿಯೂರಪ್ಪ ನಮ್ಮ ನಾಯಕ ಅದರಲ್ಲಿ ಎರಡು ಮಾತಿಲ್ಲ. ಇಂದಿಗೂ ನಾನು ಯಡಿಯೂರಪ್ಪ ಮೇಲೆ ಅಗೌರವದಿಂದ ಮಾತಾಡಿಲ್ಲ. ಇಂದಿಗೂ ಅವರ ಮೇಲೆ ಗೌರವ ಇದೆ. ಆದ್ರೆ ನೀನು ಸುಳ್ಳು ಹೇಳುವುದು ಬಿಡು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ನೇರವಾಗಿಯೇ ಸ್ವಪಕ್ಷದ ನಾಯಕ ರಮೇಶ್ ಜಾರಕಿಹೊಳಿ ಗುಡುಗಿದ್ದಾರೆ
ಗೋಕಾಕ್‌ನಲ್ಲಿ ಶನಿವಾರ ಮಾತನಾಡಿದ ಅವರು, “ನಮ್ಮಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗೆ ಅಷ್ಟೇ, ಅಧ್ಯಕ್ಷ ಚೇಂಜ್ ಆದ್ರೆ ಓಕೆ ಇಲ್ಲವಾದ್ರೆ ಪಕ್ಷ ಸಂಘಟನೆ ಮಾಡ್ತೀವಿ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎನ್ನುವ ಮಾತು ನಿನ್ನ ಹತ್ರವೇ ಇರಲಿ” ಎಂದರು.
“ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ಅಂತೀಯಾ, ನಾನು ಬಂದಿದ್ದು ನಿಮ್ಮ ಅಪ್ಪನ ಸಿಎಂ ಮಾಡಲು. ಈಗ ಅದೇ ಹರಾಮಿ ದುಡ್ಡಲ್ಲಿ ನೀನು ಓಡಾಡುತ್ತಿದ್ದೀಯಾ. ನೀನು ಇನ್ನು ಬಚ್ಚಾ ಇದೀಯಾ ವಿಜಯೇಂದ್ರ. ಒಬ್ಬ ಬಹುಸಂಖ್ಯಾತ ಯತ್ನಾಳ್ ಇದಾರೆ ಅದಕ್ಕಾಗಿ ಅವರನ್ನು ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ವಿಜಯೇಂದ್ರ ನೀನು ಸಣ್ಣ ಹುಡುಗಾ, ನಿನಗೆ ಅಧ್ಯಕ್ಷ ಸ್ಥಾನ ನೀಡುವದಿಲ್ಲ” ಎಂದರು.
“ಹೈಕಮಾಂಡ್ ವಿಜಯೇಂದ್ರನನ್ನು ಮುಂದುವರೆಸಿದ್ರೆ ಆಗಲಿ. ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ. ನೀನು ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡು, ಸಣ್ಣ ಹುಡುಗ ಇದ್ದಿ ನಿನಗೆ ಏನು ಮಾತಾಡಬೇಕು ಗೊತ್ತಾಗಲ್ಲ. ಗೂಂಡಾಗಿರಿ ರೀತಿ ಮಾತಾಡುವುದನ್ನು ಬಿಡು. ನಮ್ಮ ಮುಂದೆ ಡ್ಯಾಶ್ ಡ್ಯಾಶ್ ಅಂತವರನ್ನು ತಂದು ಯುದ್ದಕ್ಕೆ ನಿಲ್ಲಿಸಿದ್ದಾರೆ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ‘ವಿಜಯೇಂದ್ರ ಕಲೆಕ್ಷನ್ ಮಾಸ್ಟರ್’
“ನಾನು ಶಿಕಾರಿಪುರಕ್ಕೆ ಬರ್ತೇನಿ, ವಿಜಯೇಂದ್ರ ಮನೆ ಮುಂದಿನಿಂದ ಪ್ರವಾಸ ಶುರು ಮಾಡ್ತೀನಿ. ನಿನ್ನ ಸವಾಲು ಸ್ವೀಕಾರ ಮಾಡಿದ್ದೇನೆ ನೀನು ದಿನಾಂಕ ನಿಗದಿ ಮಾಡು, ಬೆಂಬಲಿಗರು ಬರಲ್ಲಾ, ಗನ್ ಮ್ಯಾನ್ ಬರಲ್ಲ ನಾನು ಒಬ್ಬನೇ ಬರ್ತೇನಿ. ಅಲ್ಲಿಂದ ಪ್ರವಾಸ ಆರಂಭ ಮಾಡುತ್ತೇನೆ ಸಾಧ್ಯವಾದರೆ ತಡಿ ನೋಡೋಣ” ಎಂದು ಸವಾಲ್ ಹಾಕಿದರು.
“ನಿನ್ನನ್ನು ಬೇಕಾದ್ರೆ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದ ಶಕ್ತಿ ನನಗಿದೆ, ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನು ಅಲ್ಲಾ. ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಗೌರವ ಇದೆ. ಆದರೆ ವಿಜಯೇಂದ್ರ ಬಗ್ಗೆ ನನಗೆ ಗೌರವ ಇಲ್ಲ, ವಿಜಯೇಂದ್ರ ಬೆನ್ನು ಹತ್ರಿದ್ರೆ ಯಡಿಯೂರಪ್ಪ ನವರೇ ಹಾಳಾಗ್ತಿರಿ. ಅವರನ್ನು ಬದಲಿಸಿ ಹೊಸಬರಿಗೆ ಅವಕಾಶ ಕೊಡಿ. ಇನ್ನೇನಿದ್ದರೂ ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲ್ಲ. ಪದೇ ಪದೇ ಸೈಕಲ್ ಮೇಲೆ ಓಡಾಡಿದ್ದೀನಿ ಅಂತಾ ಹೇಳಬೇಡಿ. ಅವಮಾನ ಆಗುತ್ತೆ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದ್ದೀರಿ” ಎಂದು ಕಿಚಾಯಿಸಿದರು.