ಬಿಜೆಪಿಯಂತಹ ಅಸಮರ್ಥ ಪಕ್ಷವನ್ನು ನಾನು ಕಂಡಿಲ್ಲ. ಬೆಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಬಿಜೆಪಿಗೆ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರನ್ನ ಆಯ್ಕೆ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ರಾಜ್ಯ ಬಿಜೆಪಿಗರ ಮೇಲೆ ಕೇಂದ್ರ ನಾಯಕರಿಗೆ ವಿಶ್ವಾಸವಿಲ್ಲ. ಬಿಜೆಪಿಯ ಅವಸ್ಥೆಯಿಂದಾಗಿ ಹಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಯಾರು ಸ್ವಇಚ್ಛೆಯಿಂದ ಬರುತ್ತಾರೋ ಅವರನ್ನು ಕಾಂಗ್ರೆಸ್ ನಾಯಕರಿಗೆ ಭೇಟಿ ಮಾಡಿಸುತ್ತದ್ದೇನೆ. ನಾನು ಬಿಜೆಪಿಯ ಯಾವ ಮುಖಂಡರನ್ನು ಕರೆತರುವ ಪ್ರಯತ್ನ ಮಾಡುತ್ತಿಲ್ಲ” ಎಂದು ಹೇಳಿದ್ದಾರೆ.
“ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುತ್ತದೆ. ಲೋಕಸಭಾ ಚುನಾವಣೆ ವೇಳೆಗೆ ಸಾಕಷ್ಟು ಜನ ಕಾಂಗ್ರೆಸ್ ಸೇರಲಿದ್ದಾರೆ. ಕಾಂಗ್ರೆಸ್‌ನಲ್ಲಿ ಯಾವ ಬಣಗಳೂ ಇಲ್ಲ. ಕೆಲ ನಾಯಕರು ತಮ್ಮ ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಂಡು ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.