ನೈಸ್‌ ಯೋಜನೆ | ಸಂಪುಟ ಉಪಸಮಿತಿ ರಚನೆ, ಸರ್ಕಾರದಿಂದ ಕಣ್ಣೊರೆಸುವ ತಂತ್ರವೇ?

Date:

Advertisements
ವಿವಾದದ ಸುಳಿಯಲ್ಲಿರುವ ನೈಸ್‌ ಯೋಜನೆಯನ್ನು ಟಿ.ಬಿ. ಜಯಚಂದ್ರ ನೇತೃತ್ವದ ಜಂಟಿ ಸದನ ಸಮಿತಿಯ ಶಿಫಾರಸ್ಸಿನಂತೆ ಮುಟ್ಟುಗೋಲು ಹಾಕಿಕೊಳ್ಳುವುದು ಬಿಟ್ಟು ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ನೈಸ್‌ ಜೊತೆಗಿರುವ ನಾಯಕರ ಹಿತಾಸಕ್ತಿಯನ್ನು ಕಾಪಾಡುತ್ತಿದೆ. ಈಗ ಮತ್ತೊಂದು ಸಂಪುಟ ಉಪಸಮಿತಿ ರಚನೆಗೆ ಮುಂದಾಗಿರುವ ಸರ್ಕಾರದ ಕ್ರಮ ಕಣ್ಣೊರೆಸುವ ತಂತ್ರವೇ?

ಬಹು ವಿವಾದಿತ ಬೆಂಗಳೂರು – ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ (ಬಿಎಂಐಸಿಇ) ನೈಸ್‌ ಯೋಜನೆಯ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಸಚಿವ ಸಂಪುಟ ಉಪಸಮಿತಿ ರಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಇದೀಗ ಇದು ಚರ್ಚೆಗೆ ಗ್ರಾಸವಾಗಿದೆ.

ಸಾವಿರಾರು ಎಕರೆ ಭೂಮಿಯನ್ನು ಕಡಿಮೆ ಬೆಲೆಯಲ್ಲಿ ಪಡೆದು ವಂಚಿಸಿರುವ ನೈಸ್‌ ಕಂಪನಿಯ ವಿರುದ್ಧದ ಅಕ್ರಮಗಳಿಗೆ ಸಂಬಂಧಿಸಿದಂತೆ ಹಿಂದೆ ಟಿ.ಬಿ. ಜಯಚಂದ್ರ ಅಧ್ಯಕ್ಷತೆಯ ವಿಧಾನಮಂಡಲ ಜಂಟಿ ಸದನ ಸಮಿತಿ ವರದಿಯು ಸರಕಾರ ಮುಂದಿದೆ. ಹಲವು ಪ್ರಕರಣಗಳಲ್ಲಿ ಭೂಸ್ವಾಧೀನ ರದ್ದುಗೊಳಿಸಿ ಕೋರ್ಟ್‌ ಸಹ ತೀರ್ಪು ನೀಡಿದೆ. ಇಷ್ಟಾದರೂ ನೈಸ್‌ ಕಂಪನಿ ವಿರುದ್ಧ ಈವರೆಗೂ ಯಾವುದೇ ಕ್ರಮವಿಲ್ಲ. ಈಗ ಮತ್ತೊಂದು ಸಂಪುಟ ಉಪಸಮಿತಿ ರಚನೆಗೆ ಸಂಪುಟ ಸಭೆ ನಿರ್ಧರಿಸಿರುವುದು ಕೇವಲ ಕಾಲಹರಣ ಮತ್ತು ಕಣ್ಣೊರೆಸುವ ತಂತ್ರ ಎನ್ನುವ ಅನುಮಾನ ಮೂಡಿದೆ.

ನೈಸ್‌ ಸಂಸ್ಥೆಗೆ ನೀಡಲಾಗಿದ್ದ ಮೂರು ದಶಕಗಳ ಗುತ್ತಿಗೆ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ನೈಸ್‌ ಯೋಜನೆಯನ್ನು ಸರಕಾರವೇ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಎಂದು ಈ ಹಿಂದಿನ ಹಲವು ಸಮಿತಿಗಳು ಶಿಫಾರಸು ಮಾಡಿದ್ದಿದೆ. ಹೀಗಿರುವಾಗ ನೈಸ್‌ ಯೋಜನೆಯ ನಿರ್ವಹಣೆ ಮತ್ತು ಇತರ ವಿಷಯಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಸಂಬಂಧ ಸರಕಾರ ಮತ್ತೊಂದು ಸಚಿವ ಸಂಪುಟ ಉಪಸಮಿತಿ ರಚಿಸುವ ಅಗತ್ಯವಾದರೂ ಏನಿದೆ ಎನ್ನುವುದು ಸದ್ಯದ ಪ್ರಶ್ನೆ.

Advertisements

“ನೈಸ್ ರಸ್ತೆಯ ಅಕ್ರಮಗಳ ಕುರಿತು ಈಗಾಗಲೇ ಟಿ.ಬಿ. ಜಯಚಂದ್ರ ನೇತೃತ್ವದ ಸದನ ಸಮಿತಿ, ಎ.ಟಿ. ರಾಮಸ್ವಾಮಿ ಸಮಿತಿ, ಸಾರ್ವಜನಿಕ ಲೆಕ್ಕ ಪರಿಶೋಧನಾ ಸಮಿತಿ, ವಿಧಾನ ಪರಿಷತ್‌ನಲ್ಲಿ ತೆಗೆದುಕೊಂಡ ತೀರ್ಮಾನ, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶಗಳನ್ನು ಸಂಪುಟ ಉಪ ಸಮಿತಿ ಪರಿಶೀಲನೆ ನಡೆಸಿ ಎರಡು ಅಥವಾ ಮೂರು ತಿಂಗಳಲ್ಲಿ ಸಂಪುಟಕ್ಕೆ ಶಿಫಾರಸು ಮಾಡಲಿದೆ” ಎಂದು ಎಚ್.ಕೆ. ಪಾಟೀಲ್ ವಿವರಿಸಿದ್ದಾರೆ. ಆದರೆ, ನೈಸ್‌ ಯೋಜನೆಯನ್ನು ಸರಕಾರವೇ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಎನ್ನುವ ಸಲಹೆ ಸರ್ಕಾರದ ಮುಂದಿರುವಾಗ ಮತ್ತೆ ಉಪಸಮಿತಿ ರಚನೆ, ಅಧ್ಯಯನ, ದುಂದುವೆಚ್ಚ, ಸುಖಾಸುಮ್ಮನೇ ಕಾಲಹರಣ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಅಥವಾ ಉಪ ಸಮಿತಿ ರಚನೆಯ ಹಿಂದೆ ಸಿದ್ದರಾಮಯ್ಯ ಸರ್ಕಾರದ ಹಿತಾಸಕ್ತಿ ಏನಾದರೂ ಅಡಗಿದೆಯೇ?

2012ರಲ್ಲಿಯೇ ಸಾಮಾಜಿಕ ಕಾರ್ಯಕರ್ತ ಎ.ಜೆ. ಅಬ್ರಹಾಂ, ನೈಸ್‌ ಯೋಜನೆಯ ಅಕ್ರಮ ಕುರಿತು ಹೈಕೋರ್ಟ್‌ನಲ್ಲಿ ದಾವೆ ಹೂಡಿ, ಅದರಲ್ಲಿ ಅವರು ರಾಜ್ಯದ 103 ರಾಜಕಾರಣಿಗಳು ಮತ್ತು 57 ಐಎಎಸ್‌ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದನ್ನು ದಾಖಲೆಗಳ ಸಮೇತ ಕೋರ್ಟಿನ ಮುಂದಿಟ್ಟಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 156/3ರಡಿ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಆದೇಶ ನೀಡಿತ್ತು. ಆನಂತರ, ನೈಸ್‌ ಯೋಜನೆ ಕುರಿತು 2016ರಲ್ಲಿ ಅಂದಿನ ಸಿದ್ದರಾಮಯ್ಯನವರ ಕಾಂಗ್ರೆಸ್‌ ಸರ್ಕಾರ, ಟಿ.ಬಿ.ಜಯಚಂದ್ರರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಿತ್ತು.

ಸದನ ಸಮಿತಿಯು 2016ರಲ್ಲೇ ಸಿಎಂ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿ, “ಅಶೋಕ್‌ ಖೇಣಿಯ ನೈಸ್‌ ಸಂಸ್ಥೆ ಅನಧಿಕೃತವಾಗಿ ಸಂಗ್ರಹ ಮಾಡಿರುವ 1,350 ಕೋಟಿ ರೂ.ಗಳನ್ನು ಸರಕಾರ ವಸೂಲಿ ಮಾಡಬೇಕು, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ವಿನಾಯಿತಿಯನ್ನು 5,688 ಎಕರೆಗೆ ಬದಲಾಗಿ 14,337 ಎಕರೆಗೆ ನೀಡಲಾಗಿರುವುದನ್ನು ಹಿಂಪಡೆಯಬೇಕು, ತಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆಯನ್ನು ಉತ್ತೇಜಿಸಿ ಸರಕಾರಕ್ಕೆ 250 ಕೋಟಿ ರೂ. ನಷ್ಟವಾಗಿರುವುದನ್ನು ಸರಕಾರಕ್ಕೆ ಕಟ್ಟಬೇಕು, ನೈಸ್ ಸಂಸ್ಥೆ ಬೆಂಗಳೂರು ವ್ಯಾಪ್ತಿಯನ್ನು ಹೊರತುಪಡಿಸಿ ಯಾವುದೇ ಪ್ರಗತಿ ಮಾಡದೆ, 4,956 ಕೋಟಿ ರೂ. ವಹಿವಾಟು ಮಾಡಿದೆ, ಯೋಜನೆ ಅನುಷ್ಠಾನಗೊಂಡು 19 ವರ್ಷವಾದರೂ ನೈಸ್ ಕಂಪನಿ ನಿರ್ದಿಷ್ಟ ವಿವರಗಳನ್ನು ಇನ್ನೂ ನೀಡಿರುವುದಿಲ್ಲ ಎಂಬ ಅಕ್ರಮಗಳ ದೊಡ್ಡ ಪಟ್ಟಿಯನ್ನೇ ಮಾಡಿತ್ತು. ಜೊತೆಗೆ ಈ ಯೋಜನೆ ಜಾರಿಯ ವೇಳೆ ನಡೆದಿರುವ ಅಕ್ರಮದ ಸಂಪೂರ್ಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಕೇಂದ್ರ ಜಾಗೃತ ಆಯೋಗಕ್ಕೆ ಒಪ್ಪಿಸಬೇಕು ಎಂದು ಟಿ.ಬಿ.ಜಯಚಂದ್ರ ಶಿಫಾರಸು ಮಾಡಿದ್ದರು.

ಸಿಎಂ ಸಿದ್ದರಾಮಯ್ಯ ಅವರು 2ನೇ ಅವಧಿಗೆ ಸಿಎಂ ಆದ ಹೊತ್ತಲ್ಲಿ, “ನಾನು ನನ್ನ ಜೀವನದಲ್ಲಿ ಮಾಡಿದ ಒಂದೇ ಒಂದು ತಪ್ಪು ಅಂದರೆ ನೈಸ್‌ ಯೋಜನೆಗೆ ಅನುಮತಿ ಕೊಟ್ಟಿದ್ದು. ಬಡವರ ಭೂಮಿಯನ್ನು ದುರುಪಯೋಗ ಪಡಿಸಿಕೊಂಡಿರುವ ನೈಸ್ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕು. ನೈಸ್ ಕಂಪನಿ ವಶದಲ್ಲಿರುವ 13,404 ಎಕರೆಯಷ್ಟು ರೈತರ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಬೇಕು” ಎಂದು ದೇವೇಗೌಡರು ಸರ್ಕಾರವನ್ನು ಒತ್ತಾಯಿಸಿದ್ದರು.

2018ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾಗಿ, ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ದೇವೇಗೌಡರು ತಮ್ಮ ಮಗನ ಮೇಲೆ ಒತ್ತಡ ತಂದು ಕುಮಾರಸ್ವಾಮಿ ಅವರಿಂದ ನೈಸ್‌ ಯೋಜನೆಯ ಅಕ್ರಮಗಳಿಗೆ ಇತಿಶ್ರೀ ಹಾಡಿಸಬಹುದಿತ್ತಲ್ಲವೇ? ಈ ಬಗ್ಗೆ ತುಟಿಯೇ ಬಿಚ್ಚಲಿಲ್ಲ. ಅದು ನೈಸ್‌ ಹಿಂದಿನ ರೂವಾರಿಯೇ ದೇವೇಗೌಡ ಎಂಬ ಅನುಮಾನಕ್ಕೂ ಕಾರಣವಾಯಿತು.

2023 ಜುಲೈ 21ರಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಠಿ ನಡೆಸಿ, “ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ – ನೈಸ್‌ ಅಕ್ರಮ ರಾಜ್ಯದಲ್ಲಿ ಹಾಡಹಗಲೇ ನಡೆದಿರುವ ಲೂಟಿಯಾಗಿದೆ. ಜನರ ಭೂಮಿ ಹಾಗೂ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಅಕ್ರಮಗಳ ಆಗರವಾಗಿರುವ ಹಾಗೂ ರಾಜ್ಯದ ಜನತೆಗೆ ವಂಚನೆ ಎಸಗಿರುವ ನೈಸ್ ಯೋಜನೆಯನ್ನು ಸಂಪೂರ್ಣವಾಗಿ ಸರ್ಕಾರ ವಶಕ್ಕೆ ಪಡೆಯಬೇಕು. ಉನ್ನತ ಮಟ್ಟದ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದ್ದರು. ವಿಪರ್ಯಾಸ ಎಂದರೆ ಇವರಿಬ್ಬರು ಸಹ ಕಳೆದ ಐದು ವರ್ಷದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದವರು. ತಮಗೆ ಆ ಎಲ್ಲ ಅಧಿಕಾರ ಇದ್ದಾಗಲೂ ನೈಸ್‌ ಬಗ್ಗೆ ಮಾತನಾಡುವುದಿಲ್ಲ. ಇದಕ್ಕೆ ಏನು ಹೇಳಬೇಕು?

“ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ಕಾರಣಕ್ಕೆ ಬೆಂಗಳೂರು-ಮೈಸೂರು ಮಧ್ಯೆ ನೈಸ್‌ ಹೆದ್ದಾರಿ ನಿರ್ಮಾಣ ಪೂರ್ಣಗೊಳ್ಳಲಿಲ್ಲ. ಬೆಂಗಳೂರು- ಮೈಸೂರು ಮಧ್ಯೆ ನೈಸ್ ರಸ್ತೆಯ ನಿರ್ಮಾಣದ ಅಗತ್ಯವಿದೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದಾ ಪ್ರತಿಪಾದಿಸುತ್ತಲೇ ಬರುತ್ತಿದ್ದಾರೆ. ಈಗಲೂ ‘ನಾನು ನೈಸ್ ಯೋಜನೆ ಪರವಾಗಿದ್ದೇನೆ’ ಎನ್ನುವ ಡಿ ಕೆ ಶಿವಕುಮಾರ್, “ಆರು ಪಥಗಳ ಹೆದ್ದಾರಿಯಿಂದ ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಗಳ ಅಭಿವೃದ್ಧಿಗೆ ಸಹಾಯಕವಾಗಲಿದೆ. ನಮ್ಮ ಸರ್ಕಾರ ಇದನ್ನು ಕೈಗೆತ್ತಿಕೊಳ್ಳುತ್ತದೆಯೇ ಗೊತ್ತಿಲ್ಲ. ಮತ್ತೊಂದು ರಸ್ತೆಯ ಅಗತ್ಯವಿದೆ ಎಂಬುದು ನನ್ನ ಅನಿಸಿಕೆ. ನೈಸ್ ಹಲವು ಉಪನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿತ್ತು. ಇದರಿಂದ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುತ್ತಿತ್ತು. ಬಿಡದಿಯಲ್ಲಿ ಕೆಲಸ ಮಾಡುವವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವು ಉಪನಗರಗಳನ್ನು ಸೃಷ್ಟಿಸುವ ಅಗತ್ಯವಿದೆ” ಎಂದು ಸಾಕಷ್ಟು ಸಲ ಹೇಳಿದ್ದಾರೆ.

ಇನ್ನೊಂದು ಕಡೆ “ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನನ್ನ ಆಸ್ತಿ ದಾಖಲೆ ಹುಡುಕುವ ಬದಲು, ನೈಸ್ ರಸ್ತೆ ವ್ಯಾಪ್ತಿಯಲ್ಲಿ ಅವರ ಕುಟಂಬದ ಆಸ್ತಿ ಎಷ್ಟಿದೆ ಎಂದು ಬಹಿರಂಗಪಡಿಸಲಿ” ಎಂದೂ ಡಿ ಕೆ ಶಿವಕುಮಾ‌ರ್‍‌ಗೆ ಸವಾಲು ಸಹ ಹಾಕಿದ್ದಾರೆ.

ಕಳದೆ ವರ್ಷ ಬೆಂಗಳೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಭೂ ಸಂತ್ರಸ್ತ ರೈತರ ಹೋರಾಟ ಸಮಿತಿ ಬೆಂಗಳೂರು ಜಿಲ್ಲಾ ಮಟ್ಟದ ‘ನೈಸ್ ಸಂತ್ರಸ್ತ ರೈತರ ಬೃಹತ್ ಸಮಾವೇಶ’ ಆಯೋಜಿಸಿತ್ತು. ಸಮಾವೇಶದಲ್ಲಿ ಭಾಗಿಯಾದ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ವಿ ಗೋಪಾಲಗೌಡ, “ಬಿಎಂಐಸಿ ಯೋಜನೆಯಲ್ಲಿ ನೈಸ್ ಕಂಪನಿಯ ಹಗರಣ, ಭ್ರಷ್ಟಾಚಾರ, ಅಕ್ರಮ ಕುರಿತು ಟಿ ಬಿ ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ವರದಿಯನ್ನು ಅಂಗೀಕರಿಸಿ ಎಂಟು ವರ್ಷಗಳಾಗಿವೆ. ಆದರೂ, ವರದಿಯನ್ನು ಜಾರಿ ಮಾಡಿಲ್ಲ ಯಾಕೆ? ಬಿಎಂಐಸಿ ಯೋಜನೆಗಾಗಿ ನೈಸ್ ಕಂಪನಿ ಜೊತೆ ಮಾಡಿಕೊಂಡ ಒಪ್ಪಂದ 27 ವರ್ಷಗಳಾದರೂ ಕಾರ್ಯಗತ ಆಗಿಲ್ಲ. ಪ್ರತಿಯೊಂದು ಹಂತದಲ್ಲಿಯೂ ಒಪ್ಪಂದಗಳನ್ನು ನೈಸ್ ಕಂಪನಿ ಉಲ್ಲಂಘಿಸಿದೆ. ಆದರೂ ನೈಸ್ ಕಂಪನಿ ಪರವಾಗಿ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸುತ್ತಿರುವುದು ರೈತ ವಿರೋಧಿ ಹಾಗೂ ಜನ ವಿರೋಧಿ ಕ್ರಮ. ಈ ಕೂಡಲೇ ಭೂ ಸ್ವಾಧೀನ ರದ್ದುಪಡಿಸಿ, ರೈತರಿಗೆ ಜಮೀನು ವಾಪಸ್ಸು ಕೊಡಬೇಕು” ಎಂದಿದ್ದನ್ನು ರಾಜ್ಯ ಸರ್ಕಾರ ಕಿವಿಗೂ ಹಾಕಿಕೊಂಡಿಲ್ಲ.

“ನೈಸ್‌ ಯೋಜನೆಯೇ ರದ್ದಾಗಬೇಕು. ಹಗರಣದಲ್ಲಿ ಭಾಗಿಯಾದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ರೈತರಿಗೆ ನ್ಯಾಯಯುತ ಪರಿಹಾರ ಸಿಗಲಿ. ನೈಸ್‌ ಯೋಜನೆಯನ್ನು ಉಳಿಸಿಕೊಳ್ಳಬೇಕು ಎನ್ನುವ ಮನಸ್ಥಿತಿಯಿಂದ ಸಿದ್ದರಾಮಯ್ಯ ಸರ್ಕಾರ ಹೊರ ಬರಲಿ. ಜಗತ್ತಿನ ದೊಡ್ಡ ಹಗರಣಗಲ್ಲಿ ನೈಸ್‌ ಕೂಡ ಒಂದು. ಸುಪ್ರೀಂ ಕೋರ್ಟ್‌ ಈಗಾಗಲೇ ಸೋಮರೆಡ್ಡಿ ಪ್ರಕರಣದಲ್ಲಿ ನೈಸ್‌ ಬೇಡ ಎಂದಿದೆ”

– ಯಶವಂತ, ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ

ನೈಸ್‌ ವಿವಾದ ಹಿನ್ನೆಲೆ

ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ.ಗಳ ಎಕ್ಸ್‌ಪ್ರೆಸ್‌ ಹೆದ್ದಾರಿ, 41ಕಿ. ಮೀ. ಪೆರಿಫೆರಲ್ ರಸ್ತೆ ಹಾಗೂ 9.8 ಕಿ.ಮೀ.ಗಳ ಲಿಂಕ್ ರಸ್ತೆ ನಿರ್ಮಾಣಕ್ಕೆ ನೈಸ್ ಸಂಸ್ಥೆ ಹಾಗೂ ಸರ್ಕಾರದ ಮಧ್ಯೆ 1997ರಲ್ಲಿ ಒಪ್ಪಂದವಾಗಿದೆ. 1996ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್‌ ಡಿ ದೇವೇಗೌಡರು ನೈಸ್ ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದು ಕಾರ್ಯರೂಪಕ್ಕಿಳಿಯುವ ಹೊತ್ತಿಗೆ ಅವರು ದೇಶದ ಪ್ರಧಾನಿಯಾಗಿ ದೆಹಲಿಗೆ ತೆರಳಿದ್ದರು. ಗೌಡರು ಅತ್ತ ತೆರಳುತ್ತಿದ್ದಂತೆ ಇತ್ತ ಅಶೋಕ್‌ ಖೇಣಿ ಜಾತಿ ಕಾರಣಕ್ಕೆ ಮುಖ್ಯಮಂತ್ರಿ ಜೆ.ಎಚ್.ಪಟೇಲರಿಗೆ ಹತ್ತಿರವಾದರು.

ಆಗ ಚೀಫ್ ಸೆಕ್ರೆಟರಿಯಾಗಿದ್ದ ಬಿ.ಎಸ್.ಪಾಟೀಲ್ ಖೇಣಿಯ ಮಾರ್ಗದರ್ಶಕರಾದರು. ಹೀಗೆ ರಾಜಕಾರಣಿಗಳು, ಅಧಿಕಾರಿಗಳ ಸಂಪರ್ಕಕ್ಕೆ ಬಂದ ಖೇಣಿ, ಸರಕಾರದ ಸಹಕಾರದಿಂದ, ಜನ ಕೊಟ್ಟ ಜಮೀನಿನ್ನೇ ಬ್ಯಾಂಕಿಗೆ ಅಡವಿಟ್ಟು, ಅದರಿಂದ ಬಂದ ಹಣದಿಂದ ರಸ್ತೆ ಮಾಡಿ, ಟೋಲ್‌ ಸಂಗ್ರಹಕ್ಕಿಳಿದು, ಗಣಿಗಾರಿಕೆ-ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕಿಳಿದರು. ತಮ್ಮ ಅಕ್ರಮಗಳ ವಿರುದ್ಧ ಕೂಗಾಡುವವರನ್ನು ಆಮಿಷಗಳ ಸಮಾಧಾನಪಡಿಸಿ, ಬ್ಯುಸಿನೆಸ್‌ ಮನ್‌ ಆಗಿ ಬೆಳೆದರು. ತನ್ನ ಅಕ್ರಮ ವ್ಯವಹಾರಗಳನ್ನು ಮುಚ್ಚಿಕೊಳ್ಳಲು ರಾಜಕಾರಣಕ್ಕೆ ಧುಮುಕಿ ಶಾಸಕರಾದರು. ಡಿ ಕೆ ಶಿವಕುಮಾರ್‌ ಕೈ ಕುಲುಕಿ ಕಾಂಗ್ರೆಸ್‌ ಸೇರಿ ಸೇಫ್‌ ಆಗಿದ್ದಾರೆ.

ಕ್ರಿಯಾ ಒಪ್ಪಂದದ ಪ್ರಕಾರ 13,237 ಎಕರೆ ಖಾಸಗಿ ಜಮೀನು ಮತ್ತು 6,956 ಎಕರೆ ಸರ್ಕಾರಿ ಜಮೀನು ಸ್ವಾಧೀನಕ್ಕೆ ಸರ್ಕಾರವು ನೈಸ್ ಸಂಸ್ಥೆಯೊಂದಿಗೆ ಫ್ರೇಮ್ ವರ್ಕ್ ಒಪ್ಪಂದ(ಎಫ್‌ಡಬ್ಲ್ಯುಎ) ಮಾಡಿಕೊಂಡಿತ್ತು. 1998-99ರಲ್ಲಿ 23,625 ಎಕರೆ ಖಾಸಗಿ ಜಮೀನು ಮತ್ತು 5,688 ಎಕರೆ ಸರ್ಕಾರಿ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ಸಚಿವ ಸಂಪುಟದ ಅನುಮೋದನೆ ಪಡೆಯದೇ ಕೆಐಎಡಿಬಿ ಒಪ್ಪಂದ ಮಾಡಿಕೊಂಡಿತ್ತು.

ಬಿಎಂಐಸಿಇ ಯೋಜನೆಗೆ ಸಂಬಂಧಿಸಿ ಕೆಐಎಡಿಬಿ ಕಾಯ್ದೆಯಂತೆ 25,616 ಎಕರೆ ಅನುಸೂಚಿತ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಿಸಲಾಗಿತ್ತು. ಖಾಸಗಿಯವರ 18,058 ಎಕರೆಗೆ ಪ್ರಾಥಮಿಕ ಅಧಿಸೂಚನೆಯಾದರೆ, 4,809 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 13,249 ಎಕರೆಗೆ ಅಂತಿಮ ಅಧಿಸೂಚನೆ ಹೊರಡಿಸಿರಲಿಲ್ಲ. 2,268 ಎಕರೆಗೆ ಐತೀರ್ಪು ರಚಿಸಿ 316 ಕೋಟಿ ರೂ. ಪರಿಹಾರವನ್ನು ಭೂಮಾಲೀಕರಿಗೆ ವಿತರಣೆ ಮಾಡಲಾಗಿತ್ತು.

“ಸಂಪುಟ ಉಪ ಸಮಿತಿ ರಚನೆಯಿಂದ ಏನೂ ಪ್ರಯೋಜನವಿಲ್ಲ. ನೈಸ್‌ ಯೋಜನೆಯೇ ರದ್ದಾಗಬೇಕು. ಈ ಬಗ್ಗೆ ವರದಿಗಳೇ ಶಿಫಾರಸ್ಸು ಮಾಡಿಯಾಗಿದೆ. ಸುಮ್ಮನೇ ಸರ್ಕಾರ ಕಾಲಹರಣ ಮಾಡುತ್ತಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ 43 ಸಾವಿರ ಎಕರೆ ಭೂಮಿ ನೈಸ್‌ ಯೋಜನೆ ಪಾಲಾಗಿದೆ. ನಮ್ಮ ಪ್ರಕಾರ 1 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿ ನೈಸ್‌ ಹಿಡಿತದಲ್ಲಿದೆ. ನೈಸ್‌ ಬೇಕು ಎಂದು ಡಿ ಕೆ ಶಿವಕುಮಾರ್‌ ಹಠ ಹಿಡಿದಿದ್ದಾರೆ. ಸಿದ್ದರಾಮಯ್ಯ ಅವರು ಬಹಳಷ್ಟು ಸಚಿವರ ಹಿತಾಸಕ್ತಿ ಕಾಪಾಡಲು ಶ್ರಮಿಸುತ್ತಿದ್ದಾರೆ ಎನ್ನುವ ಅನುಮಾನ ಮೂಡಿದೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ”

– ವೆಂಕಟಾಚಲಯ್ಯ, ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಅಧ್ಯಕ್ಷರು

ಎರಡೂವರೆ ದಶಕದಿಂದ ವಿಳಂಬ, ಕೋರ್ಟ್‌ನಲ್ಲಿ ನೂರಾರು ಕೇಸ್‌

ನೈಸ್ ರಸ್ತೆ ಕಾಮಗಾರಿ ಎರಡೂವರೆ ದಶಕದಿಂದ ವಿಳಂಬವಾಗಿದೆ. ರೈತರ ಭೂಮಿಯನ್ನು ಖರೀದಿಸಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಯೋಜನೆಗೆ ಬಳಸದ ಸರ್ಕಾರಿ ಭೂಮಿಯನ್ನು ವಾಪಸ್ ನೀಡಬೇಕು ಎಂಬ ಆಗ್ರಹ ಹಿಂದಿನಿಂದಲೂ ಕೇಳಿಬರುತ್ತಿದೆ. ಪ್ರಸ್ತುತ ನೈಸ್ ಸಂಸ್ಥೆಗೆ ಸಂಬಂಧಿಸಿ ರಾಜ್ಯದ ಸಿವಿಲ್ ನ್ಯಾಯಾಲಯಗಳಲ್ಲಿ 189 ಪ್ರಕರಣಗಳ ವಿಚಾರಣೆ ಬಾಕಿ ಇದೆ. ಹೈಕೋರ್ಟ್‌ನಲ್ಲಿ 164 ಹಾಗೂ ಸುಪ್ರೀಂಕೋರ್ಟ್‌ನಲ್ಲಿ 21 ಪ್ರಕರಣಗಳ ವಿಚಾರಣೆ ಬಾಕಿ ಇದೆ.

ಬಿಎಂಐಸಿ ಯೋಜನೆಗಾಗಿ ನೈಸ್ ಸಂಸ್ಥೆಗೆ ಮಂಜೂರಾಗಿದ್ದ 756 ಎಕರೆ ಜಾಗವನ್ನು ನೈಸ್ ಮಾಲೀಕರು ಪರಭಾರೆ ಮಾಡಿರುವುದು ಲೋಕೋಪಯೋಗಿ ಇಲಾಖೆ ತನಿಖೆಯಿಂದಲೂ ಬಹಿರಂಗವಾಗಿದೆ. ನೈಸ್ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿದ್ದ ಹಲವು ಪ್ರಕರಣಗಳಲ್ಲಿ ನೈಸ್ ವಿರುದ್ಧವಾಗಿ ತೀರ್ಪುಗಳು ಬಂದಿದೆ. ಅಲ್ಲದೇ ಸ್ವಾಧೀನ ಮಾಡಿಕೊಂಡ ಭೂಮಿ ವಾಪಸ್ ಪಡೆಯುವಂತೆ ಆದೇಶಗಳಾಗಿವೆ. ಈ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದರಿಂದ ಹಲವು ಪ್ರಕರಣಗಳ ವಿಚಾರಣೆ ಬಾಕಿ ಇದೆ.

2016 ರಲ್ಲಿ ಟಿ ಬಿ ಜಯಚಂದ್ರ ಸಮಿತಿ ವರದಿ ನೀಡಿ, ನೈಸ್ ಯೋಜನೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಹೆಚ್ಚುವರಿ ಭೂಮಿ ಹಿಂಪಡೆಯಬೇಕು ಎಂದು ಶಿಫಾರಸು ಮಾಡಿ 9 ವರ್ಷ ಕಳೆದರೂ ಈವರೆಗೆ ಯಾವುದೇ ಸರ್ಕಾರ ಕ್ರಮ ಜರುಗಿಸಿಲ್ಲ. 2020 ಫೆ. 18 ರಂದು ನೈಸ್ ಕಂಪನಿಯಿಂದ 370 ಎಕರೆ ಭೂಮಿ ವಾಪಸ್ ಪಡೆಯುವ ಸಂಬಂಧ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಮುಂದಾಗಿದ್ದರು. ಆಗಲೂ ಈ ಸಂಬಂಧ ಪರಿಶೀಲನೆಗೆ ಸಂಪುಟ ಉಪ ಸಮಿತಿ ರಚಿಸಲಾಗಿತ್ತು. ಆದರೆ, ಮುಂದಿನ ಪ್ರಕ್ರಿಯೆಗಳು ಯಾವುದೇ ಫಲ ನೀಡಿರಲಿಲ್ಲ.

600 ಕೋಟಿ ಮೌಲ್ಯದ ಜಮೀನು 600 ಕೋಟಿ ರೂ. ಮೌಲ್ಯದ 370 ಎಕರೆ ಜಮೀನಿಗೆ ಸಂಬಂಧಿಸಿ ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಥೆ ನಡುವೆ ವ್ಯಾಜ್ಯವಿದೆ. ಬೆಂಗಳೂರು-ಮೈಸೂರು ಹೆದ್ದಾರಿಯ ಅಕ್ಕಪಕ್ಕದ ರೈತರಿಂದ ಕೃಷಿ ಭೂಮಿ ಖರೀದಿ ಮಾಡಿದ್ದು, ನಿಯಮ ಬಾಹಿರವಾಗಿ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಪರಭಾರೆ ಮಾಡಿರುವ ಆರೋಪ ನೈಸ್‌ ಸುತ್ತ ಕೇಳಿಬಂದಿದೆ.

ಒಟ್ಟಾರೆ ವಿವಾದದ ಸುಳಿಯಲ್ಲಿರುವ ನೈಸ್‌ ಯೋಜನೆಯನ್ನು ಟಿ.ಬಿ. ಜಯಚಂದ್ರ ನೇತೃತ್ವದ ಜಂಟಿ ಸದನ ಸಮಿತಿಯ ಶಿಫಾರಸ್ಸಿನಂತೆ ಮುಟ್ಟುಗೋಲು ಹಾಕಿಕೊಳ್ಳುವುದು ಬಿಟ್ಟು ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ನೈಸ್‌ ಜೊತೆಗಿರುವ ನಾಯಕರ ಹಿತಾಸಕ್ತಿಯನ್ನು ಕಾಪಾಡುತ್ತಿದೆ. ಈಗ ಮತ್ತೊಂದು ಸಂಪುಟ ಉಪಸಮಿತಿ ರಚನೆಗೆ ಕ್ಯಾಬಿನೆಟ್‌ ನಿರ್ಧರಿಸಿರುವುದು ಕಣ್ಣೊರೆಸುವ ತಂತ್ರವೇ ಆಗಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X