- ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲಿರುವ ನಿತೀಶ್ ಕುಮಾರ್
- ಮಾಧ್ಯಮಗಳ ಬೆಂಬಲ ಮತ್ತು ಸುಳ್ಳುಗಳಿಂದ ದೊಡ್ಡ ನಾಯಕ ಆಗಿರುವ ನರೇಂದ್ರ ಮೋದಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸಂಯುಕ್ತ ವಿರೋಧ ಪಕ್ಷದ ಮೈತ್ರಿಯನ್ನು ರೂಪಿಸುವ ಬಗ್ಗೆ ಮಾತುಕತೆ ನಡೆಸಿದರು.
ನಂತರ ನಿತೀಶ್ ಕುಮಾರ್ ಹಾಗೂ ಬಿಹಾರ ಡಿಸಿಎಂ ಉಪ ತೇಜಸ್ವಿ ಯಾದವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ಮುಂಬರುವ ಸಂಸತ್ತಿನ ಚುನಾವಣೆಗೆ ಮುನ್ನ ಎಲ್ಲಾ ಪಕ್ಷಗಳ ಒಗ್ಗೂಡಿಸುವ ಸಿದ್ಧತೆ ಬಗ್ಗೆ ನಾವು ಮಾತುಕತೆ ನಡೆಸಿದ್ದೇವೆ. ದೇಶದ ಹಿತಾಸಕ್ತಿಗೆ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ. ಈಗ ಆಡಳಿತ ನಡೆಸುತ್ತಿರುವವರಿಗೆ ಮಾಡಲು ಏನೂ ಉಳಿದಿಲ್ಲ. ಅಭಿವೃದ್ಧಿ ಮಾಡುವುದನ್ನು ಬಿಟ್ಟು ಕೇವಲ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓರಿದ್ದೀರಾ?ರಾಹುಲ್ ಗಾಂಧಿಯ ಮೋದಿ ಉಪನಾಮ ಹೇಳಿಕೆ; ಕೆಳ ನ್ಯಾಯಾಲಯದ ಆದೇಶಕ್ಕೆ ಪಾಟ್ನಾ ಹೈಕೋರ್ಟ್ ತಡೆಯಾಜ್ಞೆ
“ಜಯಪ್ರಕಾಶ ನಾರಾಯಣ್ ಅವರ ಚಳವಳಿ ಬಿಹಾರದಿಂದ ಪ್ರಾರಂಭವಾಯಿತು. ನಾವು ಬಿಹಾರದಲ್ಲಿ ಸರ್ವಪಕ್ಷ ಸಭೆ ನಡೆಸಿದರೆ, ನಾವು ಮುಂದೆ ಎಲ್ಲಿಗೆ ಹೋಗಬೇಕು ಎಂದು ನಿರ್ಧರಿಸಬಹುದು. ಆದರೆ ಎಲ್ಲಕ್ಕಿಂತ ಮೊದಲು ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ನೀಡಬೇಕು. ಇದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಮೊದಲೇ ಹೇಳಿದ್ದೆ. ನನ್ನ ಮುಖ್ಯ ಉದ್ದೇಶ ಬಿಜೆಪಿ ನಿರ್ಮೂಲನೆಗೊಳಿಸುವುದು. ಮಾಧ್ಯಮಗಳ ಬೆಂಬಲ ಮತ್ತು ಸುಳ್ಳುಗಳಿಂದ ನರೇಂದ್ರ ಮೋದಿ ಅವರು ದೊಡ್ಡ ನಾಯಕ ಆಗಿದ್ದಾರೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು.
“ನಾವೆಲ್ಲರೂ ಒಟ್ಟಿಗೆ ಮುಂದೆ ಹೋಗುತ್ತೇವೆ. ನಮ್ಮಲ್ಲಿ ಯಾವುದೇ ವೈಯಕ್ತಿಕ ಅಹಂ ಇಲ್ಲ, ನಾವು ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಇಂದು ಸಂಜೆ 5 ಗಂಟೆಗೆ (ಏಪ್ರಿಲ್ 24) ಲಖನೌದಲ್ಲಿ ಭೇಟಿಯಾಗುವ ನಿರೀಕ್ಷೆಯಿದೆ.
ನಿತೀಶ್ ಕುಮಾರ್ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜಧಾನಿಯಲ್ಲಿ ಭೇಟಿ ಮಾಡಿದ ಕೆಲವು ದಿನಗಳ ನಂತರ ಈ ಸಭೆ ನಡೆದಿದೆ. ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ನಿತೀಶ್, “ನಾವು ಸಾಧ್ಯವಾದಷ್ಟು ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇವೆ ಮತ್ತು ಒಟ್ಟಾಗಿ ಮುನ್ನಡೆಯುತ್ತೇವೆ” ಎಂದು ಹೇಳಿದರು.