- ಜು.27ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಕರೆಯಲಾಗಿದೆ
- ‘ಗೃಹಲಕ್ಷ್ಮಿ ಯೋಜನೆ ನೋಂದಣಿ ದುಡ್ಡು ಪಡೆಯುವಂತಿಲ್ಲ’
ನಮ್ಮ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆಯುತ್ತಿದೆ. ಈ ಹಿನ್ನೆಯಲ್ಲಿ ಶಾಸಕಾಂಗ ಪಕ್ಷ ಸಭೆ ನಡೆಸಿ ಎಂದು ಶಾಸಕರು ಪತ್ರ ಬರೆದಿದ್ದಾರೆ. ಅವರ ಪತ್ರದಲ್ಲಿ ಯಾವುದೇ ಸಚಿವರ ಮೇಲೆ ದೂರು ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
“ಸರ್ಕಾರ ಬಂದು ಎರಡು ತಿಂಗಳಾಗುವಷ್ಟರಲ್ಲೇ ಶಾಸಕರು, ಸಚಿವರ ವಿರುದ್ಧ ದೂರು ಕೊಟ್ಟಿದ್ದಾರೆ” ಎಂದು ಬಿಜೆಪಿ ಎಂಎಲ್‌ಸಿ ಎನ್. ರವಿಕುಮಾರ್ ಆರೋಪಿಸಿರುವ ಬಗ್ಗೆ ಸುದ್ದಿಗಾರರು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದಾಗ ಅವರು ಉತ್ತರಿಸಿದರು.
“ಜು.27ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆ ಕರೆಯಲಾಗಿದೆ ಎಲ್ಲ ವಿಷಯಗಳನ್ನು ಚರ್ಚಿಸಲಾಗುವುದು. ಸಚಿವರ ಮೇಲೆ ಯಾವುದೇ ದೂರುಗಳು ಇಲ್ಲ” ಆರೋಪವನ್ನು ಅಲ್ಲಗಳೆದರು.
ಈ ಸುದ್ದಿ ಓದಿದ್ದೀರಾ? ಜು.27ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿ
ಗೃಹಲಕ್ಷ್ಮಿ ನೋಂದಣಿಗೆ ದುಡ್ಡಿಲ್ಲ
“ಗೃಹಲಕ್ಷ್ಮಿ ಯೋಜನೆ ನೋಂದಣಿ ಉಚಿತವಾಗಿದ್ದು, ಸೇವಾ ಕೇಂದ್ರಗಳು ದುಡ್ಡು ಪಡೆದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು” ಎಂದು ಇದೇ ವೇಳೆ ಎಚ್ಚರಿಸಿದರು.
ಬಿಜೆಪಿಯವರು ಮೌಢ್ಯ ನಂಬುತ್ತಾರೆ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಳೆ ಆಗಲ್ಲ ಎನ್ನುವ ಆರೋಪವನ್ನು ಬಿಜೆಪಿಯವರು ಮಾಡುತ್ತಿದ್ದಾರಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಅವರು ಮೌಢ್ಯವನ್ನು ನಂಬುವವರು. ಹೀಗಾಗಿ ಆ ರೀತಿ ಹೇಳುತ್ತಾರೆ. ಇದು ಪ್ರಕೃತಿ ನಿಯಮ. ಅವರು ಸರ್ಕಾರದಲ್ಲಿದ್ದಾಗ ಪ್ರವಾಹ ಉಂಟಾಗಲಿಲ್ಲವೇ? ನಾನು ಇದನ್ನು ನಂಬುವುದಿಲ್ಲ” ಎಂದರು.
ಸಿಂಗಾಪುರದಲ್ಲಿ ನಿಮ್ಮ ಸರ್ಕಾರ ಬೀಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದಾರಲ್ಲಾ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಈ ವಿಚಾರ ನನಗೆ ಗೊತ್ತಿಲ್ಲ. ನೀವು ಡಿ ಕೆ ಶಿವಕುಮಾರ್ ಅವರನ್ನೇ ಕೇಳಿ ಉತ್ತರ ಪಡೆಯಿರಿ” ಎಂದರು.