- ‘ಎಲ್ಲ ರಾಜಕೀಯ ಬಿಟ್ಟು ಬಸವಣ್ಣನ ಜನ್ಮಭೂಮಿ ಅಭಿವೃದ್ಧಿಯಾಗಲಿ’
- ವಿಜಯಪುರ ಹೆಸರು ಬದಲಾವಣೆ ವಿಚಾರ ರಾಜಕೀಯ ಗಿಮಿಕ್: ಟೀಕೆ
ಬಸವಣ್ಣನವರು ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿದ್ದಾರೆ ಎಂಬುದು ಈಗ ಜಗಜ್ಜಾಹೀರಾಗಿದೆ. ಕಾಂಗ್ರೆಸ್ ಸರ್ಕಾರ ಆದರೂ ಬರಲಿ ಅಥವಾ ಬೇರೆ ಸರ್ಕಾರ ಆದರೂ ಬರಲಿ; ಯಾರೂ ಬಸವಣ್ಣನ ಜನ್ಮಭೂಮಿ ಬಗ್ಗೆ ಈವರೆಗೂ ಸ್ವಾಭಿಮಾನ ಪ್ರದರ್ಶಿಸಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಬೇಸರ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಸವಣ್ಣನ ಜನ್ಮಭೂಮಿಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಯಾವ ಸರ್ಕಾರವೂ ಗಂಭೀರವಾಗಿ ಯೋಚನೆ ಮಾಡಿಲ್ಲ. ಬರಿ ಶಾಸಕರೇ ಗುದ್ದಾಡಿ ಅನುದಾನ ತಂದು ಅಭಿವೃದ್ಧಿ ಮಾಡಲು ಆಗುವುದಿಲ್ಲ” ಎಂದರು.
“ಬರೀ ಹೆಸರು ಬದಲಾವಣೆಯಿಂದ ಬಸವಣ್ಣವರ ಹಿರಿಮೆ ಗರಿಮೆಯನ್ನು ನಾವು ಜಗತ್ತಿಗೆ ತಿಳಿಸುತ್ತೇವೆ ಎಂಬುದು ಕಷ್ಟ. ಬಸವಣ್ಣನ ಕುರುಹು ಸಮಾಜಕ್ಕೆ ತಿಳಿಯಬೇಕು ಎಂದರೆ ಕೂಡಲಸಂಗಮ ಮತ್ತು ಬಸವಣ್ಣನ ಜನ್ಮಭೂಮಿ ಅಭಿವೃದ್ಧಿಪಡಿಸಲಿ. ಆಗ ಮುಖ್ಯಮಂತ್ರಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಲಿಯುಗುರು ಲಾಕೆಟ್ ; ಸಂತೋಷನಿಗೇನೋ ಸುಣ್ಣ, ಸೆಲೆಬ್ರಿಟಿಗಳಿಗೇಕೆ ಬೆಣ್ಣೆ?
“ನಾನು ಬಸವಣ್ಣನ ಅಭಿಮಾನಿ ಎಂದುಕೊಂಡು ಬಸವಣ್ಣನ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರೆ ಸಾಲದು. ನಮಗೆ ಅಭಿಮಾನ ಇದೆ, ಮಾಡಿದ್ದೇವೆ. ಅಧಿಕಾರ ಮತ್ತು ಅವಕಾಶ ಇದ್ದವರು ಯಾರೇ ಮುಖ್ಯಮಂತ್ರಿ ಆಗಲಿ ಬಸವಣ್ಣನ ಜನ್ಮಭೂಮಿ ಬಗ್ಗೆ ಕಾಳಜಿ ವಹಿಸಲಿ. ಜಗತ್ತಿಗೆ ತೋರಿಸುವ ಒಂದು ಕೆಲಸ ಅವರ ಜನ್ಮಭೂಮಿಯಲ್ಲಿ ಅದು ನಮ್ಮ ಸರ್ಕಾರದಿಂದ ಆಗಲಿ ಅಥವಾ ಬೇರೆ ಸರ್ಕಾರದಿಂದ ಆಗಲಿ. ಒಟ್ಟಾರೆ ಆದರೆ ಒಳ್ಳೆಯದು” ಎಂದು ಅಭಿಪ್ರಾಯಪಟ್ಟರು.
ವಿಜಯಪುರ ಹೆಸಲು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, “ಹೆಸರು ಬದಲಾವಣೆ ವಿಚಾರವನ್ನು ನಾನು ಒಪ್ಪುವುದಿಲ್ಲ. ಕರ್ನಾಟಕಕ್ಕೆ ಬಸವ ನಾಡು ಎಂದು ಹೆಸರು ಬದಲಾವಣೆ ರಾಜಕೀಯ ಆಭಾಸ ಎನ್ನಿಸುತ್ತಿದೆ. ರಾಜಕೀಯ ಇಟ್ಟುಕೊಂಡು ಮಾಡಬಾರದು” ಎಂದು ಪರೋಕ್ಷವಾಗಿ ಎಂ ಬಿ ಪಾಟೀಲ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.