ಕೇಂದ್ರ ಸರ್ಕಾರ ತ್ರಿಭಾಷಾ ನೀತಿಯ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ನಿರಂತರವಾಗಿ ದಕ್ಷಿಣ ಭಾರತದ ರಾಜ್ಯಗಳು ಆರೋಪಿಸುತ್ತಿದೆ. ತಮಿಳುನಾಡು ಸರ್ಕಾರವಂತೂ ಕೇಂದ್ರದ ವಿರುದ್ಧವಾಗಿ ಭಾಷಾ ಸಮರವನ್ನು ಘೋಷಿಸಿದೆ. ಈ ನಡುವೆ ಕೇಂದ್ರ ಸರ್ಕಾರವು “ಯಾವುದೇ ರಾಜ್ಯದ ಮೇಲೆ ಯಾವ ಭಾಷೆಯನ್ನೂ ಹೇರಿಕೆ ಮಾಡುವುದಿಲ್ಲ” ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಹೇಳಿದೆ.
ಈ ಬಗ್ಗೆ ಲಿಖಿತ ಪ್ರತಿಕ್ರಿಯೆ ನೀಡಿದ ಡಾ ಸುಕಾಂತ ಮಜುಮ್ದಾರ್, “ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ಬರುವ ತ್ರಿಭಾಷಾ ಸೂತ್ರವನ್ನು ಸಾಂವಿಧಾನಿಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಜಾರಿಗೆ ತರಲಾಗುವುದು. ಯಾವುದೇ ರಾಜ್ಯದ ಮೇಲೆ ಯಾವ ಭಾಷೆಯನ್ನೂ ಹೇರಿಕೆ ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಿಂದಿ ದಿವಸ | ಭಾಷಾ ಹೇರಿಕೆ ವಿರುದ್ಧ ಇಂದು ಪ್ರತಿಭಟನೆ: ‘ಕರಾಳ ದಿನ’ ಆಚರಣೆಗೆ ಕರವೇ ಕರೆ
“ಮಕ್ಕಳು ಕಲಿಯಬೇಕಾದ ಮೂರು ಭಾಷೆಗಳು ರಾಜ್ಯದ, ಆ ಪ್ರದೇಶಕ್ಕೆ ತಕ್ಕುದಾದ ಆಯ್ಕೆಯಾಗಿರುತ್ತದೆ. ಖಂಡಿತವಾಗಿಯೂ ವಿದ್ಯಾರ್ಥಿಗಳೇ ಅದನ್ನು ಆಯ್ಕೆ ಮಾಡಬಹುದು. ಮೂರು ಭಾಷೆಯ ಪೈಕಿ ಎರಡು ಭಾಷೆಯಾದರೂ ಭಾರತದ್ದಾಗಿರುತ್ತದೆ” ಎಂದು ಸಿಪಿಐಎಂ ನಾಯಕ ಡಾ ಜಾನ್ ಬ್ರಿಟ್ಟಾಸ್ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರವು ವಿದ್ಯಾಭ್ಯಾಸ, ರಾಜಕೀಯ ಮೊದಲಾದ ಕಡೆಗಳಲ್ಲಿ ಮಾಡುತ್ತಿರುವ ಭಾಷಾ ಹೇರಿಕೆಯನ್ನು ದಕ್ಷಿಣ ಭಾರತದ ರಾಜ್ಯಗಳು ಅದರಲ್ಲೂ ಮುಖ್ಯವಾಗಿ ತಮಿಳುನಾಡು ಖಂಡಿಸುತ್ತಾ ಬಂದಿದೆ. ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಹಿಂದಿಯನ್ನು ಮೂರನೇ ಭಾಷೆಯಾಗಿ ಕಲಿಸಲಾಗುತ್ತಿದೆ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಮಾತ್ರ ಈ ತ್ರಿಭಾಷಾ ಸೂತ್ರ ನಿಯಮ ಪ್ರಕಾರವಾಗಿ ಜಾರಿಯಾಗಿಲ್ಲ. ಉತ್ತರ ಭಾರತದಲ್ಲಿ ಬಹುತೇಕರು ಸಂಸ್ಕೃತವನ್ನೇ ಮೂರನೇ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಉತ್ತರ ಭಾರತದ ಹಿಂದಿಯನ್ನು ದಕ್ಷಿಣ ಭಾರತದಲ್ಲಿ ಕಲಿಸುವಂತೆ ದಕ್ಷಿಣ ಭಾರತದ ಭಾಷೆಗಳನ್ನು ಉತ್ತರ ಭಾರತದಲ್ಲಿ ಪಠ್ಯವನ್ನಾಗಿಸಿಲ್ಲ.
ತ್ರಿಭಾಷಾ ಸೂತ್ರವನ್ನು ನಿಯಮ ಪ್ರಕಾರವಾಗಿ ಜಾರಿಗೆ ತರದಿರುವುದೇ ಹಿಂದಿ ಹೇರಿಕೆಯ ಆರೋಪ ಹುಟ್ಟಲು ಕಾರಣವಾಗದೆ. ಹಾಗೆಯೇ ದಕ್ಷಿಣ ಭಾರತದ ಸಚಿವರುಗಳಿಗೆ, ಶಾಸಕರುಗಳಿಗೆ ಇಂಗ್ಲೀಷ್ ಬದಲಾಗಿ ಹಿಂದಿಯಲ್ಲಿ ಸುತ್ತೋಲೆ ಕಳುಹಿಸುವುದು ಭಾಷಾ ಹೇರಿಕೆಯನ್ನು ಸಾಬೀತುಪಡಿಸುತ್ತದೆ. ಒಂದು ದೇಶ, ಒಂದು ಚುನಾವಣೆ ಎಂಬಂತೆ ದೇಶದ ವೈವಿಧ್ಯತೆಯನ್ನು ಬದಿಗೊತ್ತಿ ಒಂದು ಭಾಷೆ, ಒಂದು ಧರ್ಮ, ಓರ್ವನೇ ನಾಯಕ ಎಂಬ ಸರ್ವಾಧಿಕಾರದತ್ತ ದೇಶವನ್ನು ಕೊಂಡೊಯ್ಯುವುದು ಬಿಜೆಪಿ ಸರ್ಕಾರದ ಹುನ್ನಾರ.
