- ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗುತ್ತಿಗೆದಾರರ ಸಮಸ್ಯೆ ಚರ್ಚೆ
- ‘ಬಾಕಿ ಇರುವ ಬಿಲ್ ಪಾವತಿ ಕುರಿತು ಮುಖ್ಯಮಂತ್ರಿಗಳಿಗೆ ಮನವಿ
ಸರ್ಕಾರ ಯಾವುದೇ ಇದ್ದರೂ ಕಮಿಷನ್ ದಂಧೆ ವಿರುದ್ದದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಹೇಳಿದರು.
ಇಂದು (ಶುಕ್ರವಾರ) ಸಂಘದ ಪದಾಧಿಕಾರಿಗಳ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾದ್ಯಮಗಳೊಂದಿಗೆ ಅವರು ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಮಿಷನ್ ದಂಧೆ ವಿರುದ್ಧ ಹೋರಾಟ ನಡೆಸಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಮಿಷನ್ ದಂಧೆ ನಡೆದರೂ ಬಹಿರಂಗಪಡಿಸುತ್ತೇವೆ ಎಂದವರು ಹೇಳಿದರು.
ಬಾಕಿ ಇರುವ ಬಿಲ್ ಪಾವತಿ ಕುರಿತು ಮನವಿ ಮಾಡಲು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದೆವು. ಹಿಂದಿನ ಸರ್ಕಾರದ ಅವಧಿಯ ಕಮಿಷನ್ ದಂಧೆ ಕುರಿತು ಏನು ಹೇಳಬೇಕಿತ್ತೋ ಅದನ್ನು ಹೇಳಿದ್ದೇವೆ ಎಂದರು.
ಈ ಸುದ್ದಿ ಓದಿದ್ದೀರಾ?:ನಮ್ಮ ಅವಧಿಯಲ್ಲೇ ಕಮಿಷನ್ ದಂಧೆಗೆ ಸಂಪೂರ್ಣ ಕಡಿವಾಣ ಹಾಕುತ್ತೇವೆ : ಸಿಎಂ ಸಿದ್ದರಾಮಯ್ಯ
‘ಕಾಂಗ್ರೆಸ್ ಸರ್ಕಾರದಲ್ಲಿ ಕಮಿಷನ್ ನಿಗದಿಯಾಗಿದೆ’ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ‘ಈ ಸರ್ಕಾರದಲ್ಲಿ ಈವರೆಗೆ ಯಾರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ. ಯಾರಾದರೂ ಸಚಿವರು ಅಥವಾ ಅಧಿಕಾರಿಗಳು ಕಮಿಷನ್ ಗೆ ಬೇಡಿಕೆ ಇಟ್ಟರೆ ಅದನ್ನು ಮುಲಾಜಿಲ್ಲದೆ ಬಹಿರಂಗಪಡಿಸುತ್ತೇವೆ’ ಎಂದು ಉತ್ತರಿಸಿದರು.
ಹಿಂದಿನ ಸರ್ಕಾರದ ವಿರುದ್ಧದ ಆರೋಪಕ್ಕೆ ದಾಖಲೆ ಒದಗಿಸಿಲ್ಲ ಎಂಬ ಟೀಕೆ ಬಗ್ಗೆ ಕೇಳಿದಾಗ, ‘ಆ ವಿಚಾರ ಈಗ ನ್ಯಾಯಾಲಯದಲ್ಲಿದೆ. ಸೂಕ್ತ ಸಂದರ್ಭದಲ್ಲಿ ಆ ಮಾಹಿತಿ ಬಹಿರಂಗಪಡಿಸುತ್ತೇವೆ’ ಎಂದು ಕೆಂಪಣ್ಣ ಹೇಳಿದರು.