- ‘ಐಟಿ ದಾಳಿಗೆ ಒಳಗಾದವರು ಮಂತ್ರಿಯೂ ಅಲ್ಲ, ಶಾಸಕರೂ ಅಲ್ಲ’
- ‘ಬಿಜೆಪಿಯವರು ಮಾಡುವ ಆರೋಪವನ್ನು ತಾವು ಸಾಬೀತು ಮಾಡಲಿ’
ಕಾಂಗ್ರೆಸ್‌ಗೂ ಐಟಿ ದಾಳಿಗೆ ಒಳಗಾದವರಿಗೂ ಯಾವುದೇ ನೇರ ಸಂಪರ್ಕ ಇಲ್ಲ. ಐಟಿ ದಾಳಿಗೆ ಒಳಗಾದವರು ಮಂತ್ರಿಯೂ ಅಲ್ಲ, ಶಾಸಕರೂ ಅಲ್ಲ. ಕಲೆಕ್ಷನ್ ಮಾಡಿ ಎಂದು ಹೈಕಮಾಂಡ್ ನಮಗೆ ಯಾವುದೇ ಸೂಚನೆ ಕೊಟ್ಟಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಿಜೆಪಿಯವರು ಮಾಡುವ ಆರೋಪವನ್ನು ತಾವು ಸಾಬೀತು ಮಾಡಲಿ. ಐಟಿ ಇಲಾಖೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ಐಟಿ ಇಲಾಖೆ ರಾಜ್ಯದ್ದಲ್ಲ” ಎಂದರು.
“ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ದುಡ್ಡು ಬಹಳಷ್ಟಿದೆ. ಎಕರೆಗೆ 10-20-40 ಕೋಟಿ ಇದೆ. ಈಗಾಗಲೇ ಐಟಿ ದಾಳಿಗೆ ಒಳಗಾದವರು ಆ ದುಡ್ಡು ನಮ್ಮದೇ ಅಂತ ಒಪ್ಪಿಕೊಂಡಿದ್ದಾರೆ. ಆರೋಪ ಬಂದ ತಕ್ಷಣ ಉತ್ತರ ಕೊಡಬೇಕಾಗಿಲ್ಲ” ಎಂದು ಹೇಳಿದರು.
“ಬಿಜೆಪಿಯವರು ಕೇವಲ ರಾಜಕೀಯಕ್ಕಾಗಿ ಆರೋಪ ಮಾಡುತ್ತಾರೆ. ಈ ಹಿಂದೆ ಡಿಕೆ ರವಿ ಪ್ರಕರಣ ಏನಾಯ್ತು? ಗಣಪತಿ ಕೇಸ್ ಏನಾಯ್ತು? ಪರೇಶ್ ಮೆಸ್ತಾ ಕೇಸ್ ಏನಾಯ್ತು? ಒಂದು ವರ್ಷ ಆ ಎಲ್ಲ ವಿಷಯ ಓಡಿಸಿದ್ರು. ಸಿಬಿಐ ತನಿಖೆ ಆದಮೇಲೆ ವ್ಯತಿರಿಕ್ತವಾದ ರಿಪೋರ್ಟ್ ಬಂತು” ಎಂದರು.
“ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ ವೇಣುಗೋಪಾಲ್ ರಾಜ್ಯ ಪ್ರವಾಸದ ಹಿಂದೆ ಬೇರೆ ಯಾವ ಉದ್ದೇಶ ಇಲ್ಲ. ಮಂಡಳಿ, ಬೋರ್ಡ್ ಹಾಗೂ ಕಾರ್ಪೊರೇಷನ್ ಆಯ್ಕೆ ಕುರಿತು ಅವರು ಬಂದಿದ್ದಾರೆ. ಆ ಬಗ್ಗೆ ಸಭೆ ಇತ್ತು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ವ್ಯಾಖ್ಯಾನ ಬದಲಿಸಿದ ಕಾಂಚಾಣ
ಸಿಎಂ ವಿರುದ್ದ ‘ಕಲೆಕ್ಷನ್ ಮಾಸ್ಟರ್’ ಎಂದು ಬಿಜೆಪಿ ಪೋಸ್ಟರ್ ಹಾಕಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಈ ಹಿಂದೆ ಪೋಸ್ಟರ್ ನಾವು ಮಾಡಿದ್ದೆವು. ಈಗ ಬಿಜೆಪಿಯವರೂ ಮಾಡಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ” ಎಂದರು.
ಕಾಂಗ್ರೆಸ್ಸಿನ ಸುಮಾರು 20 ಶಾಸಕರೊಂದಿಗೆ ಅವರು ದುಬೈ ಪ್ರವಾಸಕ್ಕೆ ಹೊರಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, “ಚಿತ್ರದುರ್ಗ, ಬಾಗಲಕೋಟೆ, ಧಾರವಾಡ, ಬೆಳಗಾವಿ ವಲಯದ ಶಾಸಕರೊಂದಿಗೆ ಪ್ರವಾಸ ಹೊರಟಿದ್ದೇವೆ. ತಾವು ಯಾವುದೇ ಸಂದೇಶ ಕೊಡಲು ದುಬೈ ಪ್ರವಾಸ ಹೊರಟಿಲ್ಲ” ಎಂದು ಇದೇ ವೇಳೆ ಸತೀಶ್ ಜಾರಕಿಹೊಳಿ ತಿಳಿಸಿದರು.