‘ಭಾರತ’ವನ್ನು ಸಂವಿಧಾನದಲ್ಲಿ ‘ಇಂಡಿಯಾ’ ಎಂದೇ ಉಲ್ಲೇಖಿಸಲಾಗಿದ್ದು, ಇಂಡಿಯಾ ಎಂಬುದು ಎಲ್ಲರೂ ಒಪ್ಪಿರುವ ಹೆಸರಾಗಿದೆ. ‘ರಿಪಬ್ಲಿಕನ್ ಆಫ್ ಭಾರತ್’ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರ ದೇಶಕ್ಕೆ ‘ರಿಪಬ್ಲಿಕ್ ಆಫ್ ಭಾರತ್’ ಎಂದು ಮರುನಾಮಕರಣ ಮಾಡುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ವಿಧಾನ ಸೌಧದಲ್ಲಿ ಇಂದು ಅವರು ಪ್ರತಿಕ್ರಿಯೆ ನೀಡಿದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚೆಗೆ ನೀಡಿದ್ದ ಹೇಳಿಕೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಹೆಸರನ್ನು ಬದಲಾಯಿಸಲು ಹೊರಟಿದೆಯೇ ಎಂಬ ಗುಮಾನಿ ಬಲವಾಗಿದೆ. ಇಂಡಿಯಾ ಬದಲು ಭಾರತ್ ಎಂದು ಹೆಸರಿಡಲು ಕೇಂದ್ರ ಸರ್ಕಾರ ಮುಂದಾಗಿದೆ
“ಭಾರತವೆಂದರೇನೇ ಹಿಂದೂರಾಷ್ಟ್ರ, ‘ಇಂಡಿಯಾ’ ಎಂದು ಕರೆಯಬೇಡಿ, ಭಾರತೀಯರೆಲ್ಲರೂ ಹಿಂದೂಗಳೇ” ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೆಲದಿನಗಳ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಈ ನಡುವೆ ಅಸ್ಸಾಂ ಮುಖ್ಯಮಂತ್ರಿ ‘ರಿಪಬ್ಲಿಕ್ ಆಫ್ ಭಾರತ್’ ಎಂದು ಟ್ವೀಟ್ ಮಾಡಿದ್ದು, “ನಮ್ಮ ನಾಗರಿಕತೆಯು ಅಮೃತ ಕಾಲದ ಕಡೆಗೆ ಧೈರ್ಯದಿಂದ ಮುನ್ನಡೆಯುತ್ತಿರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಇದೆ” ಎಂದು ಬರೆದುಕೊಂಡಿದ್ದಾರೆ.