ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಹೊಸ ಐಐಟಿ ಅಥವಾ ಐಐಎಂ ತೆರೆಯಲಾಗಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಕಾಂಗ್ರೆಸ್ ಸಂಸದ ಕುಮಾರ್ ಕೇತ್ಕರ್ ಅವರ ಲಿಖಿತ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಸುಭಾಸ್ ಸರ್ಕಾರ್ ಅವರು ಬುಧವಾರ (ಜುಲೈ 26) ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.
“ಅಂಕಿಅಂಶಗಳ ಪ್ರಕಾರ ಪ್ರಸ್ತುತ ದೇಶದಲ್ಲಿ ಒಟ್ಟು 23 ಐಐಟಿಗಳು ಮತ್ತು 20 ಐಐಎಂಗಳು ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ, ಶಿಕ್ಷಣ ಸಚಿವಾಲಯವು ಹಂಚಿಕೊಂಡ ಮಾಹಿತಿಯು ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟು 242 ಉನ್ನತ ಶಿಕ್ಷಣ ಸಂಸ್ಥೆಗಳನ್ನು (ಎಚ್ಇಐ) ಸ್ಥಾಪಿಸಲಾಗಿದೆ. ಸ್ಥಾಪಿತವಾದ 242 ಹೊಸ ಸಂಸ್ಥೆಗಳಲ್ಲಿ 90 ರಾಜ್ಯ ವಿಶ್ವವಿದ್ಯಾಲಯಗಳು, 140 ರಾಜ್ಯ ಖಾಸಗಿ ವಿಶ್ವವಿದ್ಯಾಲಯಗಳು, 8 ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು 4 ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿವೆ. ಆದರೆ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ಹೊಸ ಐಐಟಿ ಅಥವಾ ಐಐಎಂ ತೆರೆಯಲಾಗಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರಧಾನಿ ಕಾರ್ಯಕ್ರಮದಲ್ಲಿ ನನ್ನ ಭಾಷಣ ಕೈಬಿಡಲಾಗಿದೆ: ರಾಜಸ್ಥಾನ ಸಿಎಂ ಆರೋಪ
ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದೆ. ಹೊಸ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಕುರಿತು ಎಎಪಿ ಸಂಸದ ಸಂದೀಪ್ ಕುಮಾರ್ ಪಾಠಕ್ ಅವರ ಪ್ರಶ್ನೆಗೆ ಜುಲೈ 26ರಂದು ಉತ್ತರಿಸಿದ ಸಚಿವ ಸುಭಾಸ್ ಸರ್ಕಾರ್, 2015-16 ರಿಂದ 2020-21 ರವರೆಗೆ ದೇಶಾದ್ಯಂತ ಒಟ್ಟು 314 ಹೊಸ ವಿಶ್ವವಿದ್ಯಾಲಯಗಳು ಮತ್ತು 4,725 ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯನ್ನು ತೆಗಳಿದ ಕಾಂಗ್ರೆಸ್
ಕಳೆದ 5 ವರ್ಷಗಳಲ್ಲಿ ಯಾವುದೇ ಹೊಸ ಐಐಟಿ ಅಥವಾ ಐಐಎಂ ನಿರ್ಮಿಸಲಾಗಿಲ್ಲ ಎಂದು ಶಿಕ್ಷಣ ಸಚಿವಾಲಯ ಇಂದು ರಾಜ್ಯಸಭೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಬಗ್ಗೆ ಕಾಂಗ್ರೆಸ್ ಮೋದಿಯ ಸುಳ್ಳು ಭಾಷಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ.
“ಭಾರತದಲ್ಲಿ ಪ್ರತಿ ವರ್ಷ ಹೊಸ ಐಐಟಿ ಮತ್ತು ಐಐಎಂ ಸ್ಥಾಪನೆಯಾಗುತ್ತಿದೆ ಎಂದು ಅಮೆರಿಕದಲ್ಲಿ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಯಾವುದೇ ಹೊಸ ಐಐಟಿ ಅಥವಾ ಐಐಎಂ ಸ್ಥಾಪನೆಯಾಗಿಲ್ಲ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರ ಹೇಳುತ್ತಿದೆ. ಪ್ರಧಾನಿ ಮೋದಿ ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಾರೆ? ಎಂದು ಕಾಂಗ್ರೆಸ್ ತನ್ನ ಟ್ವಿಟರ್ನಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದೆ.