- ಗೊಂದಲಗಳಿಗೆ ತೆರೆ ಎಳೆದ ಡಿಸಿಎಂ ಡಿಕೆ ಶಿವಕುಮಾರ್
- ‘ವಾಹನ ಸವಾರರು ಸದ್ಯ ಇರುವ ಟ್ಯಾಕ್ಸ್ ಕಟ್ಟಬೇಕು’
ರಾಜಧಾನಿಯ ಸಂಚಾರ ದಟ್ಟಣೆ ಕಡಿಮೆ ಮಾಡಲು ಒಂಬತ್ತು ರಸ್ತೆಗಳ ಮೂಲಕ ರಾಜಧಾನಿಗೆ ಪ್ರವೇಶಿಸುವ ವಾಹನಗಳಿಗೆ ದಟ್ಟಣೆ ತೆರಿಗೆ ವಿಧಿಸಲಾಗುತ್ತಿದೆ ಎಂಬುದು ಸುಳ್ಳು. ಜನರಿಗೆ ಯಾವುದೇ ಹೊಸ ಟ್ರಾಫಿಕ್ ಟ್ಯಾಕ್ಸ್ ಹಾಕುವುದಿಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ವಾಹನ ಸವಾರರು ಸದ್ಯ ಇರುವ ಟ್ಯಾಕ್ಸ್ ಸರಿಯಾಗಿ ಕಟ್ಟಿದರೆ ಸಾಕು. ಈ ಬಗ್ಗೆ ಆತಂಕ ಬೇಡ” ಎಂದು ಮಾಧ್ಯಮಗಳ ವರದಿಯ ಗೊಂದಲಗಳಿಗೆ ತೆರೆ ಎಳೆದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವ ಬಗ್ಗೆ ಪ್ರತಿಕ್ರಿಯಿಸಿ, “ಹಳ್ಳಿಹಳ್ಳಿಗಳಲ್ಲಿ ಮದ್ಯದಂಗಡಿ ತೆರೆಯಲು ಆಗುವುದಿಲ್ಲ. ಎಲ್ಲವನ್ನೂ ನೋಡಬೇಕು, ಸ್ಟ್ರೀಮ್ ಲೈನ್ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದಲ್ಲಿ ಸ್ವತಂತ್ರ ಮಾಧ್ಯಮದ ಪಾಲಿಗೆ ಇದು ಅತ್ಯಂತ ಕರಾಳ ಕಾಲ
ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ವಿಚಾರವಾಗಿ ಮಾತನಾಡಿ, “ಆ ಭಾಗದ ಶಾಸಕರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ತನಿಖೆ ಮಾಡುವಂತೆ ಹೇಳಿದ್ದಾರೆ. ತಾವು, ಮಾಧ್ಯಮದವರು ಕೂಡ ಅವರ ಪರವಾಗಿ ಮಾತಾಡುತ್ತಿದ್ದೀರಿ, ಒಳ್ಳೆದಾಗಲಿ” ಎಂದು ಹೇಳಿದರು.
“ಕಾಂಗ್ರೆಸ್ಗೆ ಶೇ.20 ರಷ್ಟು ಲಿಂಗಾಯತರು ಮತ ಹಾಕಿದ್ದಾರೆ. ಏಳು ಜನ ಸಚಿವರನ್ನು ಮಾಡಿದ್ದೇವೆ” ಎಂಬ ಪ್ರಕಾಶ್ ರಾಥೋಡ್ ಹೇಳಿಕೆಗೆ ಪ್ರತಿಕ್ರಿಯಿಸಿ, “ಅದು ಸೀಕ್ರೆಟ್ ಬ್ಯಾಲೆಟ್, ಯಾರು ಎಷ್ಟು ವೋಟ್ ಹಾಕಿದ್ದಾರೆ ಅನ್ನೋದು ಹೇಳಲು ಸಾಧ್ಯವಿಲ್ಲ. ರಾಜ್ಯದ ಎಲ್ಲ ಜನಾಂಗದವರು ನಮ್ಮ ಪಕ್ಷವನ್ನು ಅಧಿಕಾರ ತಂದಿದ್ದಾರೆ. ಎಲ್ಲರೂ ಸೇರಿಯೇ 136 ಸ್ಥಾನಗಳನ್ನು ನೀಡಿದ್ದಾರೆ” ಎಂದರು.