ಮಣಿಪುರ ಹಿಂಸಾಚಾರ | ಪ್ರತೀಕಾರ ಕ್ರಮವಾಗಿ ಅತ್ಯಾಚಾರ; ಬಯಲಿಗೆ ಬಾರದ ನೂರಾರು ಪ್ರಕರಣಗಳು

Date:

Advertisements
ಕಳೆದ ಎರಡೂವರೆ ತಿಂಗಳಿನಿಂದ ಕುಕಿ ಮತ್ತು ಮೀತೀ ಸಮುದಾಯಗಳ ನಡುವೆ ನಡೆದಿರುವ ಜನಾಂಗೀಯ ಘರ್ಷಣೆಗಳಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ ಮಣಿಪುರ ಜನಾಂಗೀಯ ಗುಂಪು ದಾಳಿಯಲ್ಲಿ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯದ ಬಗ್ಗೆ ಇಲ್ಲಿಯವರೆಗೆ ಯಾರೂ ಗಟ್ಟಿಯಾಗಿ ಧನಿಯೆತ್ತುತ್ತಿಲ್ಲ.

ಘಟನೆ 1: ಮೇ 3 ರಂದು ಮಣಿಪುರ ರಾಜ್ಯದಲ್ಲಿ ಘರ್ಷಣೆಗಳು ಭುಗಿಲೆದ್ದ ಕೆಲವು ದಿನಗಳ ನಂತರ ಚುರಚಂದಪುರ ಜಿಲ್ಲೆಯ ಒಂದು ಪ್ರದೇಶದಲ್ಲಿ ಯುವತಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಹಾಕಿರುವ ಫೋಟೋ ವೈರಲ್ ಆಗಿತ್ತು. ಮೀತೀ ಸಮುದಾಯದ ನರ್ಸಿಂಗ್‌ ಯುವತಿಯನ್ನು ಕುಕಿ ಸಮುದಾಯದ ಯುವಕರು ಅತ್ಯಾಚಾರ ಮಾಡಿದ ಸುದ್ದಿ ಅದಾಗಿತ್ತು. ಒಂದಷ್ಟು ದಿನಗಳ ನಂತರ ದೃಢಪಟ್ಟ ಸತ್ಯಾಂಶವೇನೆಂದರೆ, ಮೃತಪಟ್ಟ ಯುವತಿಯು ಮಣಿಪುರದ ಯುವತಿಯಾಗಿರದೆ, 2022ರ ನವೆಂಬರ್‌ನಲ್ಲಿ ಪೋಷಕರಿಂದಲೇ ಕೊಲೆಯಾದ ಆಯುಷಿ ಚೌಧರಿ ಎಂಬ ಮಹಿಳೆಯದಾಗಿತ್ತು.

ಘಟನೆ 2: ಮೇ 4 ರಂದು ಮಣಿಪುರ ರಾಜ್ಯದ ಬಿಷ್ಣುಪುರ ಜಿಲ್ಲೆಯ ತೌಬುಲ್ ಗ್ರಾಮದ ಬಳಿಯ ಗದ್ದೆಗೆ 40ರ ಹರೆಯದ ಕುಕಿ ಮಹಿಳೆಯನ್ನು ಒಂದಷ್ಟು ಅಪ್ರಾಪ್ತರು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದರು. ಅತ್ಯಾಚಾರವೆಸಗುವ ಸಂದರ್ಭದಲ್ಲಿ ಯುವಕರು “ನಿಮ್ಮ ಪುರುಷರು ಚುರಚಂದಪುರದ ನಮ್ಮ ಮಹಿಳೆಯರಿಗೆ ಮಾಡಿದಂತೆಯೇ ನಾವು ನಿಮಗೆ ಮಾಡುತ್ತೇವೆ” ಎಂದು ಕಿರುಚುತ್ತಿದ್ದರು. ಒಂದು ಸುಳ್ಳು ಸುದ್ದಿಯಿಂದಾಗಿ 40ರ ಹರೆಯದ ಮಹಿಳೆ ಅತ್ಯಾಚಾರಕ್ಕೆ ತುತ್ತಾಗಬೇಕಾಯಿತು.

ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆಯುತ್ತಿರುವ ಮಹಿಳೆ ಘಟನೆ ನಡೆದು ಎರಡೂ ತಿಂಗಳಾದರೂ ಮಾನಸಿಕವಾಗಿ ಇನ್ನೂ ಚೇತರಿಸಿಕೊಂಡಿಲ್ಲ. ಭಯದಿಂದ ಪೊಲೀಸರಿಗೂ ದೂರು ನೀಡಿಲ್ಲ. ಮೇಲಿನ ವರದಿ ಒಂದು ಸಣ್ಣ ಘಟನೆ ಮಾತ್ರ. ಆದರೆ ಒಂದು ಮಿಥ್ಯೆಯ ಕಿಡಿ ಇಂತಹ ನೂರಾರು ಮಹಿಳೆಯರ ಜೀವನವನ್ನು ನರಕಕ್ಕೆ ತಳ್ಳಿದೆ. ಹಲವು ಅನಾಹುತಗಳಿಗೆ ಕಾರಣವಾಗಿದೆ.

Advertisements

ಮೇಲಿನ ಘಟನೆಗಳನ್ನು ಗಮನಿಸಿದರೆ ಮೀತೀ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮಣಿಪುರ ಹೈಕೋರ್ಟ್‌ ಸರ್ಕಾರಕ್ಕೆ ಸೂಚನೆ ನೀಡಿರುವುದು ಹಾಗೂ ಬುಡಕಟ್ಟು ಸಮುದಾಯಗಳನ್ನು ಅರಣ್ಯ ಪ್ರದೇಶಗಳಿಂದ ತೆರವು ಮಾಡಲು ಸರ್ಕಾರ ತೆಗೆದುಕೊಂಡ ಕ್ರಮ ಗಲಭೆ ಉಂಟಾಗಲು ಪ್ರಮುಖ ಕಾರಣಗಳಾದ್ದವು. ಆದರೆ ಈ ರೀತಿಯ ಗುಂಪು ಘರ್ಷಣೆಗಳಲ್ಲಿ ಅತ್ಯಾಚಾರಕ್ಕೊಳಗಾಗುವ ನೂರಾರು ಮಹಿಳೆಯರ ಕಥೆಗಳು ಬೆಳಕಿಗೆ ಬಂದಿಲ್ಲ.

ಕಳೆದ ಎರಡೂವರೆ ತಿಂಗಳಿನಿಂದ ಕುಕಿ ಮತ್ತು ಮೀತೀ ಸಮುದಾಯಗಳ ನಡುವೆ ನಡೆದಿರುವ ಜನಾಂಗೀಯ ಘರ್ಷಣೆಗಳಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಜನರು ಗಾಯಗೊಂಡು, 40 ಸಾವಿರಕ್ಕೂ ಹೆಚ್ಚು ಜನರು ಆಶ್ರಯ ಕಳೆದುಕೊಂಡಿದ್ದಾರೆ. 10 ಸಾವಿರಕ್ಕೂ ಹೆಚ್ಚು ಬೇರೆ ರಾಜ್ಯಕ್ಕೆ ವಲಸೆ ಹೋಗಿದ್ದಾರೆ.

ಆದರೆ ಮಣಿಪುರ ಜನಾಂಗೀಯ ಗುಂಪು ದಾಳಿಯಲ್ಲಿ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯದ ಬಗ್ಗೆ ಇಲ್ಲಿಯವರೆಗೆ ಯಾರೂ ಗಟ್ಟಿಯಾಗಿ ಧನಿಯೆತ್ತುತ್ತಿಲ್ಲ. ಅಲ್ಲೊಂದು ಇಲ್ಲೊಂದು ಮಾತ್ರ ಸುದ್ದಿಯಾಗುತ್ತವೆ. ಬಹುತೇಕ ಪ್ರಕರಣಗಳು ಠಾಣೆಯ ಮೆಟ್ಟಿಲೇರುವುದಿರಲಿ, ವರದಿಯೂ ಆಗುವುದಿಲ್ಲ.

ಮಹಿಳೆಯರ ಮೇಲೆ ದೌರ್ಜನ್ಯವನ್ನು ವರದಿ ಮಾಡದಿದ್ದರೆ, ಬುಡಕಟ್ಟು ಸಮುದಾಯದಲ್ಲಿ ಇವುಗಳು ಹೆಚ್ಚಾಗಿ ಮರೆತುಹೋಗುತ್ತವೆ. ಅಲ್ಲದೆ ಈ ರೀತಿಯ ಅಪರಾಧಗಳು ಶಾಶ್ವತವಾಗಿ ಸಮಾಧಿಯಾಗುತ್ತವೆ ಎಂದು ಮಹಿಳೆಯರು ಹಾಗೂ ಮಕ್ಕಳ ಲೈಂಗಿಕ ಅಪರಾಧಗಳ ವಿರುದ್ಧ ಹೋರಾಟ ನಡೆಸುತ್ತಿರುವ ವಕೀಲರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಬೇಸರ ವ್ಯಕ್ತಪಡಿಸುತ್ತಾರೆ.

ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಗಲಭೆಗಳಲ್ಲಿ, ಹಲವು ಕಡೆ ಉದ್ರಿಕ್ತಗೊಂಡ ಜನಸಮೂಹವು ತಮ್ಮ ಪ್ರತೀಕಾರವನ್ನು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗುವ ಮೂಲಕ ತೀರಿಸಿಕೊಂಡಿದೆ. ಮಣಿಪುರದ ಹಲವು ನಗರ ಮತ್ತು ಹಳ್ಳಿಗಳಲ್ಲಿ ನಡೆದ ಹಿಂಸಾಚಾರದ ಸಂದರ್ಭಗಳಲ್ಲಿ ಹತ್ಯೆಗಳು, ಬೆಂಕಿ ಹಚ್ಚುವುದು, ಲೂಟಿಯ ಜೊತೆಗೆ ಮಹಿಳೆಯರ ಮೇಲೆ ನೂರಾರು ಭಯಾನಕ ಲೈಂಗಿಕ ದೌರ್ಜನ್ಯಗಳು ನಡೆದಿವೆ. ಆದರೆ ಹಲವು ಪಟ್ಟಭದ್ರ ಹಿತಾಸಕ್ತಿಗಳು ಸ್ತ್ರೀಯರ ಮೇಲಿನ ಕ್ರೌರ್ಯದ ಬಗ್ಗೆ ಮಾತನಾಡದಂತೆ ಅವರನ್ನು ಮೌನವಾಗಿಸಿವೆ.

ಈ ಸುದ್ದಿ ಓದಿದ್ದೀರಾ? ವೈದ್ಯಕೀಯ ಲೋಕದ ನೆಚ್ಚಿನ ಮಿತ್ರ ‘ಎಐ’; ಚಿಕಿತ್ಸೆಗಳು ಈಗ ಸುಲಭ ಮತ್ತು ತ್ವರಿತ

ಗುಂಪು ಹಿಂಸಾಚಾರದಲ್ಲಿ ಅತ್ಯಾಚಾರಗಳು ಹೆಚ್ಚು  

ಪ್ರಪಂಚದಾದ್ಯಂತ ನಡೆಯುವ ಗಲಭೆಗಳು ಮತ್ತು ಸಂಘರ್ಷದ ಸಂದರ್ಭಗಳಲ್ಲಿ ಅತ್ಯಾಚಾರವನ್ನು ಹಿಂಸೆಯ ಸಾಧನವಾಗಿ ಬಳಸಲಾಗುತ್ತದೆ. ಇದು ಜಿನಿವಾದಲ್ಲಿ ನಡೆದ ಅಂತಾರಾಷ್ಟ್ರೀಯ ಜನಾಂಗೀಯ ಹತ್ಯೆ ಸಮಾವೇಶದ ಒಪ್ಪಂದದಲ್ಲಿ ಸಾಬೀತಾಗಿದೆ.

“ಒಂದು ಗುಂಪು ಇತರ ಸಮುದಾಯದ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವ ಮೂಲಕ ಅವರ ಧೈರ್ಯ ಹಾಗೂ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲಾಗುತ್ತದೆ. ಕೋಮುಗಲಭೆಗಳಲ್ಲಿ ಅತ್ಯಾಚಾರದ ಕುರಿತು ಪೊಲೀಸರು ಎಫ್‌ಐಆರ್‌ಗಳನ್ನು ದಾಖಲಿಸಿದರೆ ಅವುಗಳಲ್ಲಿ ಹೆಸರು ಇರುವುದಿಲ್ಲ, ಭಾವಚಿತ್ರವೂ ಕಾಣುವುದಿಲ್ಲ” ಎಂದು 2002ರ ಗುಜರಾತ್ ಮತ್ತು 2020ರ ದೆಹಲಿ ಗಲಭೆಗಳ ಸಮಯದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಕೆಲಸ ಮಾಡಿದ ವಕೀಲ ಸುರೂರ್ ಮಂದರ್ ಹೇಳುತ್ತಾರೆ.

ಸುದ್ದಿ ಮಾಧ್ಯಮವೊಂದು ಅತ್ಯಾಚಾರಕ್ಕೊಳಗಾಗಿ ಪರಿಹಾರ ಶಿಬಿರದಲ್ಲಿ ಬದುಕುಳಿದವರು ಮತ್ತು ಸ್ವಯಂಸೇವಕರ ಬಗ್ಗೆ ತನಿಖಾ ವರದಿ ನಡೆಸಿದೆ. ಈ ವರದಿಯ ಪ್ರಕಾರ ಮಣಿಪುರದಲ್ಲಿ, ಬಿಷ್ಣುಪುರದ 40 ವರ್ಷ ವಯಸ್ಸಿನ ಯುವತಿ ಹಾಗೂ ಅತ್ಯಾಚಾರಕ್ಕೊಳಗಾದ ಆರು ಕುಕಿ ಮಹಿಳೆಯರನ್ನು ಮಾತನಾಡಿಸಿದೆ.

ಇದರಲ್ಲಿ ಕಾಂಗ್ಪೋಕ್ಪಿ ಪ್ರದೇಶದಲ್ಲಿ ಬದುಕುಳಿದ 18 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯ ವರದಿಯು ಅತ್ಯಾಚಾರವನ್ನು ದೃಢಪಡಿಸುತ್ತದೆ. ಆದರೆ ಅದರ ಬಗ್ಗೆ ಕೂಡ ಎಫ್ಐಆರ್ ದಾಖಲಾಗಿಲ್ಲ. 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನ್ನ ಮೇಲೆ ಅತ್ಯಾಚಾರ ನಡೆದಿದ್ದರೂ ದೂರು ನೀಡಲು ನಿರಾಕರಿಸಿದ್ದಾಳೆ. ಇಂಫಾಲದ ಕಾರ್ ಸ್ವಚ್ಛಗೊಳಿಸುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳೆಯರ ಕುಟುಂಬಗಳು ಮಾತ್ರ ತಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದ ಬಗ್ಗೆ ದೂರು ದಾಖಲಿಸಿದ್ದು, ಎಫ್‌ಐಆರ್‌ ದಾಖಲಾಗಿದೆ. ಪೊಲೀಸರಿಗೆ ಈ ಬಗ್ಗೆ ಕೇಳಿದರೆ ಅತ್ಯಾಚಾರದ ಬಗ್ಗೆಯೂ ಕೇಳಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ದೂರು ಬಂದಿಲ್ಲ ಎನ್ನುತ್ತಾರೆ.

“ಕುಕಿ ಮತ್ತು ಮೀತೀ ಎರಡೂ ಸಮುದಾಯದವರ ಮೇಲೆ ಅತ್ಯಾಚಾರದ ಆರೋಪಗಳಿವೆ. ಆದರೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣ ದಾಖಲಿಸಲು ಸಂತ್ರಸ್ತೆಯ ಒಪ್ಪಿಗೆ ಅಗತ್ಯವಾಗಿದ್ದು, ಪೊಲೀಸರು ಸ್ವಯಂಪ್ರೇರಿತ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ದಾಳಿಯ ನಂತರ ಎರಡು ತಿಂಗಳಿಗಿಂತ ಹೆಚ್ಚು, ಬದುಕುಳಿದವರು ವಿವಿಧ ಪರಿಹಾರ ಶಿಬಿರಗಳಲ್ಲಿ ಸಾವಿರಾರು ನಿರಾಶ್ರಿತ ಜನರ ನಡುವೆ ಸೇರಿಕೊಂಡಿದ್ದಾರೆ. ಅವರಲ್ಲಿ ಲೈಂಗಿಕ ದೌರ್ಜನ್ಯದ ವ್ಯಥೆಗಳು ಸಾಕಷ್ಟಿವೆ” ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರು ನಿರಾಕರಣೆಗೆ ಅವಮಾನ, ಕುಟುಂಬದ ಒತ್ತಡ ಕಾರಣ

ಮಣಿಪುರದಲ್ಲಿ ಹಿಂಸಾಚಾರದ ಸಮಯದಲ್ಲಿ ನಡೆದಿರುವಂತಹ ನೂರಾರು ಅತ್ಯಾಚಾರ ಪ್ರಕರಣಗಳ ಬಗ್ಗೆ ದೂರು ದಾಖಲಾಗದಿರುವುದಕ್ಕೆ ಹಲವಾರು ಕಾರಣಗಳಿವೆ. ಇವುಗಳಲ್ಲಿ ಭಯ, ಆತಂಕ, ಪಾವಿತ್ರ್ಯತೆ, ಅವಮಾನ ಹಾಗೂ ಕುಟುಂಬದ ಒತ್ತಡಗಳು ಸೇರಿವೆ.

ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ದೂರು ದಾಖಲಿಸಿದರೆ ಸಮಾಜ ನಮ್ಮನ್ನು ನೋಡುವ ದೃಷ್ಟಿಯೆ ಬೇರೆಯಿರುತ್ತದೆಂದು ಆಕೆ ಹಾಗೂ ಆಕೆಯ ಕುಟುಂಬಕ್ಕೆ ಆತಂಕವಿರುತ್ತದೆ. ತಾವು ಅಪವಿತ್ರಗೊಂಡಿದ್ದೇವೆ ಎಂದು ಅವರು ಭಾವಿಸುತ್ತಾರೆ. ಇದರಿಂದ ಕುಟುಂಬದ ಜವಾಬ್ದಾರಿ, ಜೀವನದ ಭವಿಷ್ಯಕ್ಕೆ ತೊಂದರೆ, ಸಮುದಾಯದಿಂದ ಭಯ ಮುಂತಾದ ಕಾರಣಗಳಿಂದ ಠಾಣೆ ಪ್ರವೇಶಿಸುವುದಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಎದುರಾಳಿಗಳ ಭೀತಿಯೂ ಕಾರಣವಾಗಿರುತ್ತದೆ.

ಬುಡಕಟ್ಟು ಸಮುದಾಯಗಳಲ್ಲಿನ ಕುಟುಂಬಗಳಲ್ಲಿ ಪಿತೃಪ್ರಧಾನ ವ್ಯವಸ್ಥೆ ಹೆಚ್ಚಾಗಿದೆ. ಯಾರೂ ಮನೆಯ ಪೋಷಕರ ಮಾತುಗಳನ್ನು ಮೀರುವುದಿಲ್ಲ. ಇದು ಕೂಡ ಪ್ರಕರಣ ದಾಖಲಿಸದಂತೆ ತಡೆಯೊಡ್ಡುತ್ತದೆ. ಕೆಲವು ಧೈರ್ಯವಂತ ಮಹಿಳೆಯರು ಮಾತ್ರ ಯಾವುದಕ್ಕೂ ಅಂಜದೆ ದೂರು ದಾಖಲಿಸಲು ಮನಸ್ಸು ಮಾಡುತ್ತಾರೆ ಎನ್ನುತ್ತಾರೆ ಮಾನವ ಹಕ್ಕುಗಳ ಕಾರ್ಯಕರ್ತರು.

ಅತ್ಯಾಚಾರಕ್ಕೊಳಗಾದ ನೂರಾರು ಮಹಿಳೆಯರು ಪರಿಹಾರ ಶಿಬಿರಗಳಲ್ಲಿ ಮಾತ್ರವಲ್ಲದೆ, ತಮ್ಮ ಮನೆಗಳಲ್ಲಿಯೂ ವಾಸವಾಗಿದ್ದಾರೆ. ಹಲವಾರು ಕಾರಣಗಳಿಂದ ಅವರು ದೂರು ನೀಡಲು ಹಿಂಜರಿದರೆ ರಾಷ್ಟ್ರೀಯ ಮಹಿಳಾ ಆಯೋಗ ಅಥವಾ ಮಾನವ ಹಕ್ಕುಗಳ ಆಯೋಗವು ಪ್ರಕರಣಗಳನ್ನು ತನಿಖೆ ಮಾಡಬಹುದು. ಮಾಧ್ಯಮ ವರದಿಗಳ ಆಧಾರದ ಮೇಲೆ ಪೊಲೀಸರು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಳ್ಳಬಹುದು ಅಥವಾ ಸರ್ಕಾರವು ತನಿಖಾ ಆಯೋಗವನ್ನು ರಚಿಸಬಹುದು ಎನ್ನುವುದು ಮಾನವ ಹಕ್ಕುಗಳ ಕಾರ್ಯಕರ್ತರ ಆಗ್ರಹವಾಗಿದೆ.

ಈ ಸುದ್ದಿ ಓದಿದ್ದೀರಾ? ಪುಟಿನ್‌ ಬಾಣಸಿಗ ಪ್ರಿಗೋಷಿನ್ ಯಾರು? ಪುಟಿನ್ ವಿರುದ್ಧವೇ ಬಂಡಾಯವೆದ್ದಿದ್ದೇಕೆ?

ಮಣಿಪುರ ಇನ್ನೂ ಬೂದಿ ಮುಚ್ಚಿದ ಕೆಂಡ

ಪ್ರತಿಭಟನಾಕಾರರು ಸೇನೆ, ಪೊಲೀಸ್‌ ಯಾವುದಕ್ಕೂ ಹಿಂದೆ ಸರಿಯುತ್ತಿಲ್ಲ. ಮೇ 3ರಂದು ಮೀತೀ ಮತ್ತು ಕುಕಿ ಸಮುದಾಯದ ನಡುವೆ ಸಂಘರ್ಷ ನಡೆದ ನಂತರ ಸಂಭವಿಸಿದ ಹಿಂಸಾಚಾರದಲ್ಲಿ 150ಕ್ಕೂ ಹೆಚ್ಚು ಜನರ ಹತ್ಯೆಯಾಗಿದೆ. 50 ಸಾವಿರಕ್ಕೂ ಹೆಚ್ಚು ಮಂದಿ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ರಾಜ್ಯದಲ್ಲಿ ಹಿಂಸಾಚಾರ ತಡೆಗೆ 40,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೂ ಶಾಂತಿ ಸ್ಥಾಪನೆ ಕಷ್ಟಕರವಾಗಿದೆ. ಭದ್ರತಾ ಪಡೆಯ ಜಂಟಿ ಕಾರ್ಯಾಚರಣೆ ನಂತರವೂ ಏಕಾಏಕಿ ಗುಂಡಿನ ದಾಳಿ ಮತ್ತು ಮನೆಗಳಿಗೆ ಬೆಂಕಿ ಇಡುವ ಘಟನೆಗಳು ಸಂಭವಿಸುತ್ತಲೇ ಇವೆ.

ರಾಜ್ಯ ಗೃಹ ಸಚಿವಾಲಯವು ಮೇ 10ರಂದು ರಾಜ್ಯಪಾಲರ ನೇತೃತ್ವದ 51 ಮಂದಿ ಸದಸ್ಯರನ್ನು ಒಳಗೊಂಡ ‘ಶಾಂತಿ ಸ್ಥಾಪನಾ ಸಮಿತಿ’ ರಚಿಸಿದೆ. ಸಮಿತಿಯು ಶೀಘ್ರ ಶಾಂತಿ ಸ್ಥಾಪನೆ ಉದ್ದೇಶದಿಂದ ಎರಡೂ ಸಮುದಾಯಗಳ ನಡುವೆ ಮಾತುಕತೆಗೆ ನಿರ್ಧರಿಸಿತ್ತು. ಸ್ಥಳಾಂತರಗೊಂಡವರನ್ನು ಮರಳಿ ಮನೆಗೆ ಕಳುಹಿಸಲು ಯೋಜಿಸಿತ್ತು. ಆದರೆ ಎರಡೂ ಸಮುದಾಯಕ್ಕೆ ಸೇರಿದ ಹಲವು ಗುಂಪುಗಳು ಸಮಿತಿಯನ್ನು ಬಹಿಷ್ಕರಿಸಿದ ಕಾರಣ ಶಾಂತಿ ಸ್ಥಾಪನೆ ಇನ್ನೂ ಮರೀಚಿಕೆಯಾಗಿದೆ. ಈ ಮಧ್ಯೆ ದಾಳಿಗಳು ಮತ್ತೆ ನಡೆಯಬಹುದೆಂಬ ಆತಂಕದಿಂದ ಎರಡೂ ಸಮುದಾಯಗಳ ಕೆಲ ಯುವಕರು ತಮ್ಮ ಬಳಿ ಇರುವ ಕಳವು ಮಾಡಿದ ಶಸ್ತ್ರಾಸ್ತ್ರಗಳನ್ನು ಸೇನೆಗೆ ಒಪ್ಪಿಸಲು ಹಿಂದೇಟು ಹಾಕುತ್ತಿದ್ದಾರೆ.

ವಿಪರ್ಯಾಸಕರ ಸಂಗತಿ ಎಂದರೆ, ಮಾರಿಕೊಂಡ ಮಾಧ್ಯಮಗಳ ಕೃಪೆಯಿಂದ ವಿಶ್ವಗುರುವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು, ಮಣಿಪುರದಲ್ಲಿ ಡಬಲ್‌ ಎಂಜಿನ್‌ ಸರ್ಕಾರವಿದ್ದರೂ ಹಿಂಸಾಚಾರ, ಅತ್ಯಾಚಾರಗಳ ಬಗ್ಗೆ ತುಟಿಬಿಚ್ಚದಿರುವುದು.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X