ಸಂವಿಧಾನವೇ ನಮ್ಮ ಧರ್ಮ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವುದೇ ನಮ್ಮ ರಾಜಧರ್ಮ ಎಂದು ನಂಬಿರುವ ಸರ್ಕಾರ ನಮ್ಮದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಮೈದಾನದಲ್ಲಿ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು.
“ಭಾರತವು ತನ್ನನ್ನು ತಾನು ಆಳಿಕೊಳ್ಳಲು ರಚಿಸಿಕೊಂಡ ಸಂವಿಧಾನ ಜಾರಿಗೆ ಬಂದು 2024ರ ಜನವರಿ 26ಕ್ಕೆ 75 ವರ್ಷಗಳು ತುಂಬುತ್ತಿವೆ. ಭಾರತದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಚಿಂತನೆ, ಅಭಿವ್ಯಕ್ತಿ ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು ಖಾತರಿಪಡಿಸಿ ಎಲ್ಲರ ನಡುವೆ ಭಾತೃತ್ವವನ್ನು ಉದ್ದೀಪನಗೊಳಿಸುವುದೇ ಸಂವಿಧಾನದ ಮೂಲ ಆಶಯವಾಗಿದೆ” ಎಂದರು.
“ವಿಶ್ವಕ್ಕೆ ಮಾದರಿ ಸ್ವರೂಪದ ಇಂತಹದ್ದೊಂದು ಸಂವಿಧಾನವನ್ನು ನಮಗೆ ನೀಡಿದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡು ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾತಿ-ಧರ್ಮಗಳ ಭೇದವಿಲ್ಲದೆ ಸಂಪತ್ತು, ಅವಕಾಶ ಮತ್ತು ಅಧಿಕಾರದಲ್ಲಿ ಸರ್ವರಿಗೂ ಸಮಪಾಲು ಸಿಗಬೇಕೆಂಬ ಸರ್ವೋದಯದ ಉದಾತ್ತ ಉದ್ದೇಶವನ್ನು ಹೊಂದಿದೆ” ಎಂದು ಹೇಳಿದರು.
”ಸಂವಿಧಾನ ಎನ್ನುವುದು ಪ್ರಜಾಪ್ರಭುತ್ವದ ಆತ್ಮ. ಸಂವಿಧಾನ ಇಲ್ಲದ ಪ್ರಜಾಪ್ರಭುತ್ವ, ಆತ್ಮ ಇಲ್ಲದ ಜೀವ. ಇತ್ತೀಚೆಗೆ ಸಂವಿಧಾನ ಬದಲಾವಣೆಯ ಕೂಗು ಅಲ್ಲಲ್ಲಿ ಕೇಳಿಬರುತ್ತಿದೆ. ಇದನ್ನು ಪ್ರಜಾಪ್ರಭುತ್ವ ಪ್ರೇಮಿಗಳೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ. ಈ ಖಂಡನೆಗೆ ನಾನೂ ದನಿಗೂಡಿಸುತ್ತೇನೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಇಳಿಸಿದ ಶಕ್ತಿಗಳೇ ಕರ್ಪೂರಿಯವರನ್ನು ಅಟ್ಟಕ್ಕೇರಿಸುತ್ತಿರುವ ಅಣಕ
“ಧಾರ್ಮಿಕ ರಾಷ್ಟ್ರೀಯತೆಯ ಮೂಲಕ ದೇಶ ಕಟ್ಟಲು ಸಾಧ್ಯವಾಗದು. ಇದು ಬಹುಧರ್ಮ, ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಪಾದಿಸುವ ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಪ್ರಜಾಪ್ರಭುತ್ವವನ್ನು ನಂಬಿರುವ ಯಾರೂ ಇದನ್ನು ಒಪ್ಪಲು ಸಾಧ್ಯ ಇಲ್ಲ” ಎಂದರು.
“ನಮ್ಮ ಯೋಚನೆಗಳು ಮತ್ತು ಯೋಜನೆಗಳು ಸಂವಿಧಾನದ ಆಶಯಗಳೇ ಆಗಿವೆ. ನಮ್ಮ ಆಡಳಿತದ ‘ಕರ್ನಾಟಕ ಮಾದರಿ’ ಬಗ್ಗೆ ಇಡೀ ದೇಶ ಮಾತ್ರ ಅಲ್ಲ ವಿಶ್ವಶ್ರೇಷ್ಠ ಆರ್ಥಿಕ ತಜ್ಞರು ಕೂಡಾ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ” ಎಂದು ಹೇಳಿದರು.
“ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧಿಗಳಿಂದ ವ್ಯಕ್ತವಾದ ಟೀಕೆ-ಟಿಪ್ಪಣಿ, ಅನುಮಾನ-ಆತಂಕಗಳನ್ನು ನಾವು ಗಮನಿಸಿದ್ದೇವೆ. ನಮ್ಮ ಸರ್ಕಾರ ದಿವಾಳಿಯಾಗಲಿದೆ ಎಂಬ ಅಪಪ್ರಚಾರವನ್ನು ಮಾಡಿದ್ದಾರೆ. ಇಂತಹವರೆಲ್ಲರಿಗೂ ನಮ್ಮ ಯೋಜನೆಗಳ ಫಲಾನುಭವಿಗಳೇ ದಿಟ್ಟತನದಿಂದ ಉತ್ತರ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ” ಎಂದರು.
“ರಾಜ್ಯ ಸರ್ಕಾರವೇ ಬರದಿಂದ ಬಾಧಿತರಾದವರಿಗೆ ಬೆಳೆ ಪರಿಹಾರವಾಗಿ 2,ಸಲಿದೆರ000 ರೂ.ಗಳ ವರೆಗಿನ ತಾತ್ಕಾಲಿಕ ಪರಿಹಾರದ ಘೋಷಣೆಯನ್ನು ಮಾಡಿದ್ದು, ಈವರೆಗೆ 550 ಕೋಟಿ ರೂ.ಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ವಾರದೊಳಗೆ ಮೊದಲ ಕಂತಿನ ಪರಿಹಾರ ರೈತರಿಗೆ ತಲುಪಿಸಲಾಗುವ ವ್ಯವಸ್ಥೆಯಾಗುತ್ತಿದೆ” ಎಂದು ಹೇಳಿದರು.
“75ನೇ ಗಣರಾಜ್ಯೋತ್ಸವದ ಆಚರಣೆಯ ಭಾಗವಾಗಿ ಜನವರಿ 26 ರಿಂದ ಒಂದು ತಿಂಗಳ ಕಾಲ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಸಂವಿಧಾನ ಜಾಗೃತಿ ಜಾಥಾ’ ನಡೆಸಲಾಗುತ್ತಿದ್ದು, ನಾಡಿನ ಜನತೆಗೆ ಸಂವಿಧಾನದ ಸ್ವರೂಪ ಹಾಗೂ ಆಶಯಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ. ನಾಗರಿಕರು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಕೈಜೋಡಿಸಬೇಕು” ಎಂದು ಮನವಿ ಮಾಡಿದರು.