ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಗೆ ಸಂಬಂಧಿಸಿದಂತೆ ಸರಕಾರವು ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿ, “ಇತ್ತೀಚೆಗೆ ರಾಜ್ಯ ಸಚಿವ ಸಂಪುಟದ ಮುಂದೆ ಮಂಡಿಸಲಾದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯು ಜಾತಿ ಗಣತಿ ಎಂದೇ ಹೆಚ್ಚು ಚರ್ಚೆಯಲ್ಲಿದೆ. ಸಚಿವ ಸಂಪುಟವು ಈ ವರದಿಯನ್ನು ಪರಿಶೀಲಿಸಲಿದೆ. ವಾಸ್ತವಾಂಶಗಳ ಆಧಾರದ ಮೇಲೆ ಎಲ್ಲರಿಗೂ ನ್ಯಾಯ ಒದಗಿಸುವ ನಿರ್ಧಾರ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
“ವರದಿಯ ಬಗ್ಗೆ ನೀಡಲಾಗುತ್ತಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ಈ ಬಗ್ಗೆ ಸಿಎಂ ಮಾತನಾಡಿದ್ದಾರೆ. ನಾನು ನಿನ್ನೆ ಬೆಳಗಾವಿ ಮತ್ತು ಮಂಗಳೂರಿಗೆ ಭೇಟಿ ನೀಡಿದ್ದರಿಂದ ಇನ್ನೂ ವರದಿಯನ್ನು ನೋಡಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಯಬೇಕು. ಈ ಬಗ್ಗೆ ವಿಧಾನಸಭೆಯಲ್ಲೂ ಚರ್ಚಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಇಲ್ಲ. ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಈ ವರದಿಯನ್ನು ಶುಕ್ರವಾರ ಸಚಿವ ಸಂಪುಟದ ಮುಂದೆ ಇಡಲಾಗಿದ್ದು, ಏಪ್ರಿಲ್ 17ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾದ ಚರ್ಚೆ ನಡೆಯಲಿದೆ.
ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು ಕಳೆದ ವರ್ಷ ಫೆಬ್ರವರಿ 29ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿಯನ್ನು ಸಲ್ಲಿಸಿತ್ತು. ವರದಿಯ ಬಗ್ಗೆ ಸಮಾಜದ ಕೆಲವು ವರ್ಗಗಳು ಆಕ್ಷೇಪಣೆ ಎತ್ತಿವೆ ಹಾಗೂ ಆಡಳಿತಾರೂಢ ಕಾಂಗ್ರೆಸ್ನ ಒಳಗಿನಿಂದಲೇ ವರದಿಯ ವಿರುದ್ಧ ಮಾತುಗಳು ಕೇಳಿ ಬಂದಿವೆ.