- ‘ಇದುವರೆಗೆ ಮೈತ್ರಿ ಕುರಿತು ಅಥವಾ ಸೀಟು ಹಂಚಿಕೆ ಚರ್ಚೆ ನಡೆದಿಲ್ಲ’
- ‘ನಾಳೆ ಕಾರ್ಯಕರ್ತರ ಸಭೆ ಮಾಡಲು ದೇವೇಗೌಡರು ಹೇಳಿದ್ದಾರೆ’
ಬಿ ಎಸ್ ಯಡಿಯೂರಪ್ಪ ಅವರು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಗ್ಗೆ ಮಾತನಾಡಿರುವುದು ಅವರ ವೈಯಕ್ತಿಕ ಅಭಿಪ್ರಾಯ. ಆದರೆ, ಇದುವರೆಗೆ ಮೈತ್ರಿ ಅಥವಾ ಸೀಟು ಹಂಚಿಕೆ ಕುರಿತು ಅಧಿಕೃತ ಚರ್ಚೆ ನಡೆದಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಆಂಗ್ಲ ಮಾಧ್ಯಮ ಸುದ್ದಿ ಸಂಸ್ಥೆಯೊಂದಿಗೆ ಶನಿವಾರ ಮಾತನಾಡಿರುವ ಅವರು, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ– ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ್ದಾರೆ.
“ಪ್ರಸಕ್ತ ಬೆಳವಣಿಗೆ ಪ್ರಾಥಮಿಕ ಹಂತದಲ್ಲಿದೆ ಇದೆ ಅಷ್ಟೇ. ನಾಳೆ ಕಾರ್ಯಕರ್ತರ ಸಭೆ ಮಾಡಲು ದೇವೇಗೌಡರು ಹೇಳಿದ್ದಾರೆ. ಹೀಗಾಗಿ ಕಾರ್ಯಕರ್ತರ ಅಭಿಪ್ರಾಯ ಕೇಳಬೇಕು ಅಲ್ವಾ?” ಎಂದು ಪ್ರಶ್ನಿಸಿದರು.
“ಇಲ್ಲಿ ಕೊಟ್ಟು ತೆಗೆದುಕೊಳ್ಳುವುದು ಅಲ್ಲ, ವಿಶ್ವಾಸ, ಗೌರವ ಮುಖ್ಯ. ಗೌರವ, ವಿಶ್ವಾಸವನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಮೈತ್ರಿ ವಿಚಾರವಾಗಿ ಉತ್ತರ ನೀಡುವ ಕಾಲ ಇನ್ನೂ ದೂರ ಇದೆ. ಯಾವುದೇ ರಾಜಕಾರಣಿಗೂ ಹತಾಶೆ ಎಂಬುದು ಬರಲ್ಲ. ಇಲ್ಲಿ ಹತಾಶೆ ಆಗುತ್ತಿರುವುದು, ನಡುಕ ಆಗಿರುವುದು ಕಾಂಗ್ರೆಸ್‌ಗೆ ಮಾತ್ರ” ಎಂದರು.
“ಎರಡು ಪಕ್ಷದ ನಾಯಕರು ಸೌಹಾರ್ದಯುತವಾಗಿ ಹಲವು ಬಾರಿ ಭೇಟಿ ಮಾಡಿದ್ದೇವೆ. ಮೈತ್ರಿಗೆ ಸಂಬಂಧಿಸಿ ಚರ್ಚೆ ನಡೆಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿರುವುದರಿಂದ ಜನರಿಗೆ ಪರ್ಯಾಯ ಆಯ್ಕೆಗಳು ಬೇಕಿದೆ. 2006ರಲ್ಲಿ ನಾನು ಬಿಜೆಪಿಯೊಂದಿಗೆ ಕೈಜೋಡಿಸಿದ್ದೆ. 20 ತಿಂಗಳ ಉತ್ತಮ ಆಡಳಿತ ನಡೆಸಿದ್ದೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿಶ್ರೇಷ್ಠತೆಯ ವ್ಯಸನ- ‘ಸನಾತನ’ ಮನಸ್ಥಿತಿಯ ವ್ಯಾಧಿ
ಮೈತ್ರಿ ಖಚಿತಪಡಿಸಿದ ಮುಖಂಡರು
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಬಿಜೆಪಿ– ಜೆಡಿಎಸ್ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಸೀಟು ಹಂಚಿಕೆ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಎರಡೂ ಪಕ್ಷಗಳ ವರಿಷ್ಠರ ಹಂತದಲ್ಲೇ ಮೈತ್ರಿಯ ನಿರ್ಧಾರ ಅಂತಿಮಗೊಂಡಿದೆ. ಜೆಡಿಎಸ್ ನಾಯಕರು ಮೈತ್ರಿ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಆ ಪಕ್ಷದ ಕೆಲವು ಮುಖಂಡರು ಜೆಡಿಎಸ್ ಜತೆಗಿನ ಮೈತ್ರಿಯನ್ನು ಖಚಿತಪಡಿಸಿ, ಮಾಧ್ಯಮಗಳ ಜೊತೆ ಮಾತನಾಡಿದ್ದನ್ನು ಇಲ್ಲಿ ಗಮನಿಸಬಹುದು.