“ನಮಗೆ ಇನ್ನೂ ಸ್ವಂತ ಶೌಚಾಲಯವಿಲ್ಲ, ಪ್ರಧಾನಿ ನರೇಂದ್ರ ಮೋದಿಯವರು ಮನೆಗೆ ಬಂದು ಹೋದ ಬಳಿಕ ಮನೆಗೆ ಬರುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಪತಿಗೆ ಕೂಲಿ ಕೆಲಸಕ್ಕೂ ಹೋಗಲಾಗುತ್ತಿಲ್ಲ. ಇದರಿಂದಾಗಿ ಸಾಲದಲ್ಲಿ ಮುಳುಗಿದ್ದೇವೆ”
ಹೀಗಂತ ತಮ್ಮ ಕಷ್ಟಗಳನ್ನು ಹೇಳಿಕೊಂಡವರು ಬೇರಾರೂ ಅಲ್ಲ. ಕಳೆದ ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ತನ್ನ ಮನೆಗೆ ಭೇಟಿ ನೀಡಿದಾಗ ಚಹಾ ಆತಿಥ್ಯ ನೀಡಿದ್ದ ಅಯೋಧ್ಯೆಯ ದಲಿತ ಮಹಿಳೆ ಮೀರಾ ದೇವಿ ಮಾಂಝಿ.
ಸ್ವತಂತ್ರ ಸುದ್ದಿ ಸಂಸ್ಥೆ ನ್ಯೂಸ್ ಲಾಂಡ್ರಿಯ ಪ್ರತಿನಿಧಿ ಬಸಂತ್ ಕುಮಾರ್ ಅವರಿಗೆ ನೀಡಿದ ಸಂದರ್ಶನದ ವೇಳೆ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಡಿಸೆಂಬರ್ 30 ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ರೈಲ್ವೆ ನಿಲ್ದಾಣ, ಹೊಸ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಈ ವೇಳೆ ಅಯೋಧ್ಯೆಯ ಉಜ್ವಲ ಫಲಾನುಭವಿ ಮೀರಾ ದೇವಿ ಮಾಂಝಿ ಎಂಬ ಮಹಿಳೆ ಮನೆಗೆ ಭೇಟಿ ನೀಡಿ ಚಹಾ ಕುಡಿದು, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದರು.
ಕಂಠರಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ಘಾಟ್‌ನ ನಿವಾಸಿ ಮೀರಾ ಮಾಂಝಿ ಅವರ ಪತಿಯ ಹೆಸರು ಸೂರಜ್ ಮಾಂಝಿ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆದಿದ್ದರು. ಅವರು ಈ ಯೋಜನೆಯ ಫಲಾನುಭವಿಗಳಲ್ಲಿ 10ನೇ ಕೋಟಿಯವರಾಗಿದ್ದರು.
ಈ ಹಿನ್ನೆಲೆಯಲ್ಲಿ ದಂಪತಿಯ ಸಂದರ್ಶನ ನಡೆಸಿರುವ ನ್ಯೂಸ್ ಲಾಂಡ್ರಿ, ಪ್ರಧಾನಿ ಮೋದಿಯವರು ಬಂದು ಹೋದ ನಂತರ ತಮ್ಮ ಜೀವನದಲ್ಲಿ ಬದಲಾವಣೆಗಳಾಗಿದೆಯಾ? ಎಂದು ಕೇಳಿದಾಗ, “ಮಾಂಝಿ ಸಮುದಾಯದ ನಡುವೆ ನಮಗೆ ಗೌರವ ಹೆಚ್ಚಿದೆ. ಆದರೆ ಮನೆಗೆ ದಿನನಿತ್ಯವೂ ಹೊಸಬರು ಬರುತ್ತಲೇ ಇದ್ದಾರೆ. ಇದರಿಂದಾಗಿ ಪತಿಗೆ ಕೆಲಸಕ್ಕೆ ಹೋಗಲಿಕ್ಕೆ ಆಗುತ್ತಿಲ್ಲ. ಬಂದವರ ಆತಿಥ್ಯ ಮಾಡಲು ಸಾಲ ಬೇರೆ ಮಾಡಬೇಕಾಯಿತು” ಎಂದು ತಿಳಿಸಿದ್ದಾರೆ.
ಬೇರೇನಾದರೂ ಬದಲಾವಣೆ ಆಗಿದೆಯಾ ಎಂದು ಕೇಳಿದಾಗ, “ಅಂತಹ ವಿಶೇಷ ಬದಲಾವಣೆ ಆಗಿಲ್ಲ. ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ನಮಗೆ ಸಣ್ಣ ಮನೆ ಸಿಕ್ಕಿದೆಯಾದರೂ ಇನ್ನೂ ಕೂಡ ಸಿಮೆಂಟ್ ಪ್ಲಾಸ್ಟಿಂಗ್, ಸುಣ್ಣ ಬಣ್ಣ ಇನ್ನೂ ಬಳಿದಿಲ್ಲ. ನಮ್ಮ ಸಮುದಾಯದ ಮುಖಂಡ ವೀರ್ ಚಂದ್ ಮಾಂಝಿ ಎಂಬವರ ಬಳಿ ಅದಕ್ಕೆ ಹಣ ಕೊಟ್ಟಿದ್ದಾರೆ ಅಂತ ನಮಗಿರುವ ಮಾಹಿತಿ. ಆದರೆ ಅವರು ಇನ್ನೂ ಈ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ” ಎಂದು ಬೇಸರಿಸಿದ್ದಾರೆ.
अयोध्या में उज्ज्वला योजना की 10 करोड़वीं लाभार्थी बहन मीरा जी के घर पर उनके परिवार वालों से ‘चाय पे चर्चा’ हुई। इस दौरान यह जानकर मन को बहुत संतोष हुआ कि कैसे सरकारी योजनाओं से पूरे परिवार का जीवन आसान हुआ है। pic.twitter.com/NCTb4yXcaB
— Narendra Modi (@narendramodi) December 30, 2023
ಮೋದಿಯವರಿಗೆ ಚಹಾ ನೀಡಲಾಗಿದ್ದ ಕಪ್ ಅನ್ನು ಈಗ ದೇವರ ಮೂರ್ತಿಗಳು ಇಡುವ ಪೀಠದಲ್ಲಿ ಇಟ್ಟಿದ್ದಾರೆ, ಈ ಬಗ್ಗೆ ಸಂದರ್ಶಕ ಪ್ರಶ್ನಿಸಿದಾಗ, “ಅವರು ನಮಗೆ (ಪ್ರಧಾನಿ ಮೋದಿ) ದೇವರಿದ್ದಂತೆ. ಹಾಗಾಗಿ, ಅವರು ಬಂದ ನೆನಪಿಗೆ ಅಲ್ಲಿ ಇಟ್ಟಿದ್ದೇವೆ” ಎಂದು ಮೀರಾ ದೇವಿ ಮಾಂಝಿ ಹೇಳಿದ್ದಾರೆ.
“ಪ್ರಧಾನಿ ಮೋದಿಯವರ ಭೇಟಿ ಬಳಿಕ ಚುನಾವಣೆ ನಿಲ್ಲಿಸುವ ಮಾತುಗಳು ಕೂಡ ಕೇಳಿ ಬಂದಿದೆ. ನೋಡೋಣ ಎಂದು ತಿಳಿಸಿರುವ ಮೀರಾ ಮನೆಯಲ್ಲಿ, ಅಡುಗೆ ಮನೆಯಲ್ಲಿ ಸರಿಯಾದ ವಿದ್ಯುತ್ ವ್ಯವಸ್ಥೆ ಇನ್ನೂ ಇಲ್ಲ. ವಿದ್ಯುತ್ ಬಿಲ್ ಹೆಚ್ಚು ಬರಬಹುದು ಎಂಬ ಹಿನ್ನೆಲೆಯಲ್ಲಿ ಮನೆಗೆ ಒಂದೇ ಬಲ್ಬ್ ಬಳಸುತ್ತಿದ್ದೇವೆ. ಟಾರ್ಚ್‌ನ ಬೆಳಕಿನಲ್ಲಿ ಅಡುಗೆ ಮಾಡುತ್ತಿದ್ದೇವೆ” ಎಂದು ತಮ್ಮ ಕಷ್ಟಗಳನ್ನು ‘ನ್ಯೂಸ್ ಲಾಂಡ್ರಿ’ಯೊಂದಿಗೆ ವಿವರಿಸಿದ್ದಾರೆ.
“ಮೊದಲು ನಾವು ಕಟ್ಟಿಗೆಗಳಲ್ಲಿ ಅಡುಗೆ ಮಾಡುತ್ತಿದ್ದೆವು. ಈಗ ಉಜ್ವಲ ಯೋಜನೆಯ ಮೂಲಕ ನಮಗೆ ಗ್ಯಾಸ್ ಸಿಲಿಂಡರ್ ಸಿಕ್ಕಿದೆ. ಆದರೆ ಈಗ ಸಿಕ್ಕಿರುವ ಗ್ಯಾಸ್ ಮುಗಿದ ಬಳಿಕ ಇನ್ನೊಂದು ಗ್ಯಾಸ್ ತೆಗೆದುಕೊಳ್ಳುತ್ತೇವೆಯೋ ಎಂಬುದು ಗೊತ್ತಿಲ್ಲ. ಒಂದು ವೇಳೆ ಆಗದೇ ಇದ್ದರೆ ಮತ್ತೆ ಕಟ್ಟಿಗೆಯನ್ನೇ ಬಳಸುವೆ” ಎಂದು ಇದೇ ವೇಳೆ ಮೀರಾ ತಿಳಿಸಿದ್ದಾರೆ.
“ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆದಿದ್ದ ಫಲಾನುಭವಿಗಳ ಪೈಕಿ ನಾವು 10ನೇ ಕೋಟಿಯವರಾಗಿದ್ದೆವು. ಹಾಗಾಗಿ ಪ್ರಧಾನಿ ಮೋದಿ ನಮ್ಮ ಮನೆಗೆ ಭೇಟಿ ನೀಡಿದ್ದಾರೆ. ಆ ಬಳಿಕ ನಮ್ಮ ಮನೆಗೆ ಭೇಟಿ ನೀಡುವವರ ಸಂಖ್ಯೆಯೂ ಜಾಸ್ತಿಯಾಗಿದೆ. ಇದರಿಂದ ಕೂಲಿ ಕೆಲಸಕ್ಕೆ ಹೋಗಲಿಕ್ಕೆ ಆಗುತ್ತಿಲ್ಲ. ಬಂದವರನ್ನು ಸತ್ಕರಿಸಲಿಕ್ಕಾಗಿ 5-6 ಸಾವಿರ ರೂ ಸಾಲ ಪಡೆದುಕೊಳ್ಳಬೇಕಾಯಿತು” ಎಂದು ದಿನಗೂಲಿ ಕಾರ್ಮಿಕನಾಗಿರುವ ಮೀರಾ ಪತಿ ಸೂರಜ್ ಮಾಂಝಿ ತಿಳಿಸಿದ್ದಾರೆ.