ಬಿಹಾರದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ(SIR) ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಕಳವಳ ವ್ಯಕ್ತಪಡಿಸಿದ್ದಾರೆ. “ಸೂಕ್ಷ್ಮತೆ ಇಲ್ಲದಿದ್ದರೆ, ಈ ಪ್ರಕ್ರಿಯೆಯಿಂದಾಗಿ ಬಡವರು ಮತ್ತು ಬಡತನದ ಅಂಚಿನಲ್ಲಿರುವ ದೊಡ್ಡ ವರ್ಗದ ಜನರನ್ನು ಮತದಾನ ಮಾಡುವ ಹಕ್ಕಿನಿಂದ ವಂಚಿತರಾಗಬಹುದು” ಎಂದು ಎಚ್ಚರಿಸಿದ್ದಾರೆ. ಹಾಗೆಯೇ ಚುನಾವಣಾ ಆಯೋಗ ನೀಡಲು ತಿಳಿಸಿರುವ ದಾಖಲೆಗಳ ಬಗ್ಗೆ, “ಈ ಅಧಿಕಾರಶಾಹಿ ಪ್ರಕ್ರಿಯೆಯ ನ್ಯಾಯಸಮ್ಮತತೆಯನ್ನು” ಪ್ರಶ್ನಿಸಿದ್ದಾರೆ.
“ಕಾಲಕಾಲಕ್ಕೆ ವಿವಿಧ ಕಾರ್ಯವಿಧಾನದ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ ಎಂಬುದು ನಿಜ, ಪರಿಶೀಲನೆಯ ಅಗತ್ಯವಿದೆ. ಆದರೆ ಅದಕ್ಕಾಗಿ ಮೂಲಭೂತ ಹಕ್ಕುಗಳಿಗೆ ತೊಂದರೆಯಾಗಬಾರದು. ಬಡವರ ಹಕ್ಕುಗಳನ್ನು ತುಳಿಯುವ ಮೂಲಕ ‘ಉತ್ತಮ ವ್ಯವಸ್ಥೆ’ಯನ್ನು ರಚಿಸಲು ಸಾಧ್ಯವಿಲ್ಲ” ಎಂದೂ ಹೇಳಿದರು.
ಇದನ್ನು ಓದಿದ್ದೀರಾ? ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ: 64 ಲಕ್ಷಕ್ಕೂ ಅಧಿಕ ಮತದಾರರ ಹೆಸರು ‘ಡಿಲೀಟ್’
“ಹಲವರ ಬಳಿ ದಾಖಲೆಗಳಿಲ್ಲ ಆದ್ದರಿಂದಾಗಿ ಹಲವರಿಗೆ ಮತ ಚಲಾಯಿಸಲು ಸಾಧ್ಯವಿಲ್ಲ. ಕೆಲವು ಸುಧಾರಣೆಗಾಗಿ ಗಂಭೀರ ತಪ್ಪನ್ನು ಒಪ್ಪಲಾಗದು. ಒಂದನ್ನು ಸರಿಪಡಿಸಲು ಏಳು ಹೊಸ ತಪ್ಪುಗಳನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಈ ನಡುವೆ ಮತದಾರರು ಆಧಾರ್ ಕಾರ್ಡ್ ಅಥವಾ ಇತರ ಯಾವುದೇ 11 ಸ್ವೀಕಾರಾರ್ಹ ದಾಖಲೆಗಳೊಂದಿಗೆ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸುವಂತೆ ಚುನಾವಣಾ ಆಯೋಗಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಹಾಗೆಯೇ ಅರ್ಜಿ ಸಲ್ಲಿಸಲು ಮತದಾರರಿಗೆ ಸಹಾಯ ಮಾಡುವಂತೆ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರುಗಳಿಗೆ ನಿರ್ದೆಶನವನ್ನು ನೀಡಬೇಕು ಎಂದೂ ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆ ಸೆಪ್ಟೆಂಬರ್ 8 ರಂದು ನಡೆಯಲಿದೆ.
