ರಾಹುಲ್ ಗಾಂಧಿ ಅವರಿಗಿಂತ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಜನಪ್ರಿಯ. ಪ್ರಚಾರದ ತಂತ್ರಗಳಲ್ಲಿ ರಾಹುಲ್ ಒಳಗೊಂಡು ಯಾವ ಕಾಂಗ್ರೆಸ್ ನಾಯಕ ಕೂಡ ಪ್ರಧಾನಿಗೆ ಸರಿಸಾಟಿಯಾಗಲಾರರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿರಿಯ ಕಾಂಗ್ರೆಸ್ ಸಂಸದ ಪಿ ಚಿದಂಬರಂ ಅವರ ಪುತ್ರ, ಸಂಸದ ಕಾರ್ತಿ ಚಿದಂಬರಂ ಅವರಿಗೆ ತಮಿಳುನಾಡು ಕಾಂಗ್ರೆಸ್ ಘಟಕ ಶೋಕಾಸ್ ನೋಟಿಸ್ ನೀಡಿದೆ.
ತಮಿಳುನಾಡಿನ ಖಾಸಗಿ ಚಾನಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಾರ್ತಿ ಚಿದಂಬರಂ. ಕಾಂಗ್ರೆಸ್ ನಾಯಕತ್ವವನ್ನು ಪರೋಕ್ಷವಾಗಿ ಟೀಕೆಗೊಳಪಡಿಸಿ ಮೋದಿಯನ್ನು ಹೊಗಳಿದ್ದರು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
ಕಾರ್ತಿ ಚಿದಂಬರಂ ಅವರು ಎಐಸಿಸಿ ನಾಯಕರಾಗಿರುವುದರಿಂದ ರಾಜ್ಯ ಕಾಂಗ್ರೆಸ್ ನೋಟಿಸ್ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ನ ಒಂದು ಬಣ ಹೇಳಿದೆ.
39 ನಿಮಿಷಗಳ ಸಂದರ್ಶನದಲ್ಲಿ ಮಾತನಾಡಿದ್ದ ಕಾರ್ತಿ ಚಿದಂಬರಂ, ನಾವು ಚುನಾವಣಾ ಲೆಕ್ಕಾಚಾರ ಹಾಗೂ ರಾಜಕೀಯ ಸಂದೇಶವನ್ನು ಸರಿಯಾಗಿ ಗಮನಿಸಿದರೆ ಮೋದಿಯ ಜನಪ್ರಿಯತೆ ನಡುವೆಯೂ ಬಿಜೆಪಿಯನ್ನು ಸೋಲಿಸಬಹುದು. ನೀವು ಮೋದಿಯಷ್ಟು ಬಲಿಷ್ಠರ ಹೆಸರನ್ನು ಕೇಳಿದರೆ ನಾನು ತಕ್ಷಣದಲ್ಲಿ ಹೆಸರೇಳಲು ಸಾಧ್ಯವಿಲ್ಲ. ಸಾಮಾನ್ಯ ಕಾರ್ಯಕರ್ತರನ್ನು ಕೇಳಿದರೆ ರಾಹುಲ್ ಗಾಂಧಿ ಪಕ್ಷವನ್ನು ಮುನ್ನಡೆಸಬೇಕೆಂದು ಬಯಸುತ್ತಾರೆ. ಖರ್ಗೆಯ ಹೆಸರನ್ನು ಸೂಚಿಸಿರುವ ಇಂಡಿಯಾ ಒಕ್ಕೂಟ ತಂತ್ರ ರಾಜಕಾರಣಗಳನ್ನು ಹೊಂದಿರಬಹುದು. ವೈಯುಕ್ತಿಕ ಸ್ಪರ್ಧೆಗೆ ಇಳಿದಾಗ ನನ್ನ ತಿಳುವಳಿಕೆಯ ಪ್ರಕಾರ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ. ಸದ್ಯದ ವಾಸ್ತವ ಪ್ರಚಾರ ತಂತ್ರಗಳಲ್ಲಿ ಮೋದಿಯವರಿಗೆ ಕಾಂಗ್ರೆಸ್‌ನ ಯಾವೊಬ್ಬ ನಾಯಕರು ಸರಿಸಾಟಿಯಾಗಲಾರರು. ಆದರೆ ರಾಜಕೀಯ ಸಂಘರ್ಷ ಅಥವಾ ಸಮಸ್ಯೆಯ ವಿಚಾರಗಳನ್ನು ತೆಗೆದುಕೊಂಡರೆ ನಮ್ಮದೆ ಗೆಲುವು ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಡುದ್ವೇಷದ ಕತ್ತಲ ಯುಗದಲ್ಲಿ ಬೆಳ್ಳಂಬೆಳಕಿನ ತೀರ್ಪು
”ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಕಾರ್ತಿ ಅವರು, ಖರ್ಗೆಯವರು 53 ವರ್ಷಗಳ ರಾಜಕೀಯ ಅನುಭವ ಹೊಂದಿರುವ ಹಿರಿಯ ರಾಜಕಾರಣಿ. ಸದ್ಯ ಎರಡು ಪಕ್ಷಗಳು ಅವರ ಹೆಸರನ್ನು ಸೂಚಿಸಿವೆ. ಉಳಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕಿದೆ. ಆ ಹುದ್ದೆಗೆ ಖರ್ಗೆ ಅರ್ಹರೆ ಎಂದು ನನ್ನನ್ನು ಕೇಳಿದರೆ ನಾನು ಖಂಡಿತಾ ಹೌದು ಎನ್ನುತ್ತೇನೆ” ಎಂದಿದ್ದರು.
“ನಮ್ಮ ಪ್ರಧಾನಿ ಅಭ್ಯರ್ಥಿ ಕುರಿತು ಸಾರ್ವಜನಿಕ ಸಂದೇಶವನ್ನು ಶೀಘ್ರವೇ ನೀಡುವುದು ಅಗತ್ಯ. ಚುನಾವಣೆಯ ಕೊನೆ ಕ್ಷಣಗಳಲ್ಲಿ ನಮ್ಮ ಭರವಸೆಗಳು ಮತ್ತು ಯೋಜನೆಗಳನ್ನು ಘೋಷಿಸಬಾರದು. ಕನಿಷ್ಠ ನಾಲ್ಕರಿಂದ ಆರು ತಿಂಗಳು ಮುಂಚೆ ಮಾಡಬೇಕು. ಇದರಿಂದ ಮಾತ್ರವೇ ಜನರ ಮನಸ್ಸಿಗೆ ಮುಟ್ಟುವುದು ಸಾಧ್ಯ. ಬಿಜೆಪಿಯ ಜೈ ಶ್ರೀರಾಮ್ ಮತ್ತು ಬುಲ್ಡೋಜರ್ ರಾಜಕಾರಣಕ್ಕೆ ವಿರುದ್ಧವಾಗಿ ಪಕ್ಷವು ಜನವರಿ ಅಂತ್ಯದೊಳಗೆ ರೂಪುರೇಷೆಯೊಂದಿಗೆ ಬರಲಿದೆ ಎಂಬ ಆಶಯವಿದೆ. ಜನರ ಜೀವನ ಮಟ್ಟ ಕಳೆದ 10 ವರ್ಷಗಳಲ್ಲಿ ಯಾವ ರೀತಿಯಲ್ಲಿಯೂ ಸುಧಾರಿಸಿಲ್ಲ. ಅವರ ಪ್ರಚಾರಕ್ಕೆ ಪ್ರತಿಯಾಗಿ ಆರ್ಥಿಕ ಅನನುಕೂಲತೆಗಳನ್ನು ನಾವು ಬಿಂಬಿಸಬೇಕು” ಎಂದು ಕಾರ್ತಿ ಹೇಳಿದ್ದರು