- ‘ನೀವೆಲ್ಲ ಪರ್ಮನೆಂಟ್ ಶಾಸಕರಾಗಿ ಉಳಿಯಬೇಕು’
- ‘ರಾಜಕೀಯದಲ್ಲಿ ಶಾಸಕರು ರಿಂಗ್ ಮಾಸ್ಟರ್ ಆಗಲಿ’
ನೀವೆಲ್ಲ ಮೊದಲ ಬಾರಿಗೆ ಅಷ್ಟೇ ಶಾಸಕರಾಗದೆ ಪರ್ಮನೆಂಟ್ ಶಾಸಕರಾಗಿರಬೇಕು. ಅದಕ್ಕೆ ಈ ಶಿಬಿರ ಅನುಕೂಲವಾಗಲಿದೆ. ವಿಧಾನಸಭೆ ಒಳಗೆ ಆತ್ಮವಿಶ್ವಾಸದಿಂದಿರುವುದನ್ನು ಈ ಶಿಬಿರ ನಿಮಗೆ ಕಲಿಸಲಿದೆ ಎಂದು ಸಭಾಧ್ಯಕ್ಷ ಯು ಟಿ ಖಾದರ್ ತಿಳಿಸಿದರು.
ಬೆಂಗಳೂರಿನ ಹೊರವಲಯದಲ್ಲಿ ಸೋಮವಾರ ನಡೆದ ನೂತನ ಶಾಸಕರ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ರಾಜಕೀಯ ಒಂದು ಸರ್ಕಸ್ ಕಂಪನಿ ಇದ್ದಂತೆ. ಇಲ್ಲಿ ಹುಲಿ, ಸಿಂಹ, ಆನೆ, ಕೋತಿ ಎಲ್ಲವೂ ಇರುತ್ತವೆ. ಆದರೆ ಎಲ್ಲರೂ ಸಿಂಹ ಆಗಲು ಸಾಧ್ಯವಿಲ್ಲ” ಎಂದರು.
“ಸರ್ಕಸ್‌ನಲ್ಲಿ ರಿಂಗ್ ಮಾಸ್ಟರ್ ಹಿಂದೆ ಎಲ್ಲ ಪ್ರಾಣಿಗಳು ಹೋಗುತ್ತವೆ. ಹಾಗೆ ರಾಜಕೀಯದಲ್ಲಿ ಶಾಸಕರು ರಿಂಗ್ ಮಾಸ್ಟರ್ ಆಗಬೇಕು. ಇದಕ್ಕಾಗಿ ಎಲ್ಲರೂ ಮಿಸ್ ಮಾಡದೆ ಉತ್ತಮ ತರಬೇತಿ ಪಡೆಯಿರಿ” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ತುತ್ತು ಅನ್ನಕ್ಕಾಗಿ ಬಡವರು ಬೇಡುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೆ: ಸಿಎಂ ಸಿದ್ದರಾಮಯ್ಯ
“ಶಿಬಿರದಲ್ಲಿ ಆರೋಗ್ಯದ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ರಾಜಕೀಯ ಗಣಿತ ಅಲ್ಲ ಬದಲಿಗೆ ಕೆಮಿಸ್ಟ್ರಿ, ಇಲ್ಲಿ ರಿಯಾಕ್ಷನ್ಸ್ ಗಳು ಜಾಸ್ತಿ ಇರುತ್ತವೆ. ಎಲ್ಲದಕ್ಕೂ ತಾಳ್ಮೆಯಿಂದ ಉತ್ತರಿಸುವ ಗುಣ ಇರಬೇಕು” ಎಂದರು.
“ಉತ್ತಮ ಅಭ್ಯಾಸಗಳನ್ನು ಶಾಸಕರು ರೂಢಿಸಿಕೊಳ್ಳಬೇಕು. ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬೇಕು. ಶಾಸಕರಾಗಿ ಬ್ರಿಡ್ಜ್ ಕಟ್ಟುವುದು, ಮೋರಿ ಕಟ್ಟುವುದೇ ಆದ್ಯತೆ ಕೆಲಸಗಳು ಆಗದೇ ನಮ್ಮ ಕ್ಷೇತ್ರದ ಜನರಲ್ಲಿ ಸಮಾನತೆ, ಸೌಹಾರ್ದತೆ ಮೂಡಿಸುವ ಕೆಲಸದ ಕಡೆಯೂ ಗಮನ ನೀಡಬೇಕು” ಎಂದು ಕಿವಿಮಾತು ಹೇಳಿದರು.