ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ ನೀಡಬೇಕು, ರಾಜ್ಯದ ಸ್ಥಾನಮಾನ ನೀಡಬೇಕು ಹಾಗೂ ಸಂವಿಧಾನದ 6ನೇ ಪರಿಚ್ಛೇದವನ್ನು ಲಡಾಖ್‌ಗೂ ವಿಸ್ತರಿಸಬೇಕೆಂದು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಲಡಾಖ್‌ನಿಂದ ದೆಹಲಿಗೆ ಪಾದಯಾತ್ರೆ ಬಂದ ಸೋನಮ್ ಮತ್ತು 120 ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ‘ಪೊಲೀಸ್ ಠಾಣೆಯಲ್ಲಿ ಅವರನ್ನು ಭೇಟಿ ಮಾಡಲು ತೆರಳಿದ್ದ ತಮಗೆ ಪೊಲೀಸರು ಅವಕಾಶ ನೀಡಲಿಲ್ಲ’ ಎಂದು ದೆಹಲಿ ಮುಖ್ಯಮಂತ್ರಿ ಆತಿಶಿ ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಬವಾನಾ ಪೊಲೀಸ್ ಠಾಣೆಯಲ್ಲಿ ಸೋನಮ್ ವಾಂಗ್ಚುಕ್ ಅವರನ್ನು ಇರಿಸಲಾಗಿದೆ. ಸೋನಮ್ ಅವರನ್ನು ಭೇಟಿ ಮಾಡಲು ಆತಿಶಿ ಅವರು ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ, ಠಾಣೆಯೊಳಗೆ ಪ್ರವೇಶಿಸದಂತೆ ಅವರನ್ನು ತಡೆಯಲಾಗಿದೆ.
ಪೊಲೀಸ್ ಠಾಣೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆತಿಶಿ, “ನಾನು ಸೋನಮ್ ವಾಂಗ್ಚುಕ್ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಅವರು ಪರಿಸರವಾದಿ ಮತ್ತು ಶಿಕ್ಷಣತಜ್ಞ. ಲಡಾಖ್‌ನ ಜನರು ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ಹೋರಾಡುತ್ತಿದ್ದು, ಸೋನಮ್ ಅವರು ಲಡಾಖ್‌ಗಾಗಿ ಧ್ವನಿ ಎತ್ತಲು 150 ಜನರೊಂದಿಗೆ ದೆಹಲಿಗೆ ಬರುತ್ತಿದ್ದರು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ದೆಹಲಿ ಗಡಿಯಲ್ಲಿ ಬಂಧಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪೊಲೀಸ್ ಠಾಣೆಗೆ ಪ್ರವೇಶಿಸಲು ನನಗೆ ಎಲ್ಲ ರೀತಯಲ್ಲೂ ಅವಕಾಶವಿದೆ. ಆದರೂ, ಸೋನಮ್ ಅವರನ್ನು ಭೇಟಿಯಾಗಲು ನನಗೆ ಅವಕಾಶ ನೀಡಲಿಲ್ಲ” ಎಂದು ಆತಿಶಿ ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: ಬಿಜೆಪಿ ನಾಯಕರನ್ನು ಪ್ರಶ್ನಿಸುವ, ಕೇಸ್-ಎಫ್ಐಆರ್ ದಾಖಲಿಸುವ ಕಾಲವೂ ಬಂತು!
“ಬಿಜೆಪಿ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವವನ್ನು ಕೊಲ್ಲುವ, ಮತದಾನದ ಹಕ್ಕನ್ನು ಕಸಿದುಕೊಳ್ಳಲು ಎಲ್ಲ ಅವಕಾಶಗಳನ್ನೂ ಬಳಸಿಕೊಳ್ಳುತ್ತಿದೆ. ಸೋನಮ್ ಅವರನ್ನು ಏಕೆ ಬಂಧಿಸಲಾಗಿದೆ? ಅವರನ್ನು ಭೇಟಿಯಾಗದಂತೆ ನನ್ನನ್ನು ಏಕೆ ತಡೆಯಲಾಗುತ್ತಿದೆ? ಯಾಕೆಂದರೆ, ಬಿಜೆಪಿಗೆ ಪ್ರಜಾಪ್ರಭುತ್ವದ ಭಯವಿದೆ” ಎಂದು ಹೇಳಿದ್ದಾರೆ.
ಮಾರ್ಚ್ ತಿಂಗಳಲ್ಲಿ 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ಸೋನಮ್ ಅವರು ಸೆಪ್ಟೆಂಬರ್ 1ರಿಂದ ದೆಹಲಿ ಚಲೋ ಪಾದಯಾತ್ರೆ ಆರಂಭಿಸಿದ್ದರು. ಅಕ್ಟೋಬರ್ 1ರಂದು ಅವರ ಪಾದಯಾತ್ರೆ ದೆಹಲಿ ತಲುಪಿತ್ತು. ಸೋನಮ್ ಮತ್ತು 120 ಮಂದಿ ಪ್ರತಿಭಟನಾಕಾರರು ದೆಹಲಿ ಪ್ರವೇಶಿಸುತ್ತಿದ್ದಂತೆ, ಸಿಂಘು ಗಡಿಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಬವಾನಾ ಜೈಲಿನಲ್ಲಿರಿಸಿದ್ದಾರೆ.