ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಸಂವಿಧಾನವನ್ನು ಬದಲಾಯಿಸಲು ಯೋಜಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪವನ್ನು ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ತಳ್ಳಿಹಾಕಿದ್ದಾರೆ. ಸಂವಿಧಾನ ಬದಲಿಸುವು ಯಾವುದೇ ಪ್ರಯತ್ನವಿದ್ದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖ್ಯಸ್ಥರಾಗಿರುವ ಅಠವಾಳೆ ಅವರು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಅವರು, ಮಹಾರಾಷ್ಟ್ರದ ಭಂಡಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸುನಿಲ್ ಮೆಂಧೆ ಪರ ಪ್ರಚಾರ ನಡೆಸಿದ್ದಾರೆ.
ಪ್ರಚಾರದಲ್ಲಿ ಮಾತನಾಡಿದ ಅವರು, “ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಈ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಆ ಮೂಲಕ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದೆ. ಅವರ ಆರೋಪ ಸಂಪೂರ್ಣವಾಗಿ ಆಧಾರರಹಿತವಾಗಿದೆ. ಒಂದು ವೇಳೆ ಸರ್ಕಾರ ಅಂತಹ ಪ್ರಯತ್ನ ನಡೆಸಿದರೆ, ನಾನು ಸಂಪುಟಕ್ಕೆ ರಾಜೀನಾಮೆ ನೀಡುತ್ತೇನೆ. ಅಲ್ಲದೆ, ಬಿಜೆಪಿಗೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯುತ್ತೇನೆ” ಎಂದಿದ್ದಾರೆ.
ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಇತ್ತೀಚೆಗೆ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಅದಕ್ಕಾಗಿ, ಲೋಕಸಭೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದಿದ್ದರು. ಅವರ ಹೇಳಿಕೆಯ ಬಳಿಕ, ವಿಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ, ‘ಆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ’ ಎಂದಷ್ಟೇ ಹೇಳಿತ್ತು.